ಸೋಂಪುರ ಗ್ರಾಪಂ ಮುಂದೆ ಕಸ ಸುರಿದು ತಿಮ್ಮನಾಯ್ಕನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Nov 21, 2025, 01:00 AM IST
ಪೋಟೋ 1 : ಸೋಂಪುರ ಪಂಚಾಯಿತಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಸ್ಮಶಾನದಲ್ಲಿ ಕಸ ಸುರಿಯುತ್ತಿರುವುದನ್ನು ವಿರೋಧಿಸಿ ಸೋಂಪುರ ಹೋಬಳಿಯ ತಿಮ್ಮನಾಯ್ಕನಹಳ್ಳಿ ಗ್ರಾಮಸ್ಥರು ಸೋಂಪುರ ಗ್ರಾಪಂ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದರು.

ದಾಬಸ್‍ಪೇಟೆ: ಸ್ಮಶಾನದಲ್ಲಿ ಕಸ ಸುರಿಯುತ್ತಿರುವುದನ್ನು ವಿರೋಧಿಸಿ ಸೋಂಪುರ ಹೋಬಳಿಯ ತಿಮ್ಮನಾಯ್ಕನಹಳ್ಳಿ ಗ್ರಾಮಸ್ಥರು ಸೋಂಪುರ ಗ್ರಾಪಂ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದರು.

ತಿಮ್ಮನಾಯ್ಕನಹಳ್ಳಿ ಗ್ರಾಮದ ಬಾಲಕನೊಬ್ಬ ಮೃತಪಟ್ಟಿದ್ದು ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದರೆ, ಅಲ್ಲಿ ಬರೀ ತ್ಯಾಜ್ಯ ತುಂಬಿತ್ತು. ಇದರಿಂದ ಕಂಗಾಲಾದ ಗ್ರಾಮಸ್ಥರು ಕಸ ತುಂಬಿಕೊಂಡು ಬಂದು ಗ್ರಾಮ ಪಂಚಾಯತಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ನಡೆಸಿದರು.

ಡೇರಿ ಅಧ್ಯಕ್ಷ ಮಹದೇವಯ್ಯ ಮಾತನಾಡಿ, ಸೋಂಪುರ ಕೈಗಾರಿಕಾ ಪ್ರದೇಶದ ತಿಮ್ಮನಾಯ್ಕನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಸ್ಮಶಾನಕ್ಕಾಗಿ ಗ್ರಾಮಕ್ಕೆ 2 ಎಕರೆ ಜಮೀನು ನೀಡಿತ್ತು. ಇದಕ್ಕೆ ಸೋಂಪುರ ಗ್ರಾಪಂ ಅಧಿಕಾರಿಗಳು ಯಾವುದೇ ಕಾಂಪೌಂಡ್ ಹಾಕದೆ ಹಾಗೆಯೇ ಬಿಟ್ಟಿದ್ದರು. ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಯವರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಾಗೆಯೇ ಪಂಚಾಯತಿ ವ್ಯಾಪ್ತಿಯಲ್ಲಿ ಶೇಖರಣೆಗೊಳ್ಳುವ ತ್ಯಾಜ್ಯವನ್ನು ಇಲ್ಲಿ ತಂದು ಸುರಿದಿದ್ದಾರೆ. ದಿನ ನಿತ್ಯ ಕಸ ತಂದು ಸುರಿಯುತ್ತಿದ್ದರಿಂದ ಸ್ಮಶಾನ ಮುಚ್ಚುವ ಪರಿಸ್ಥಿತಿಗೆ ಬಂದಿದೆ ಎಂದು ಆರೋಪಿಸಿದರು.

ಗ್ರಾಮಸ್ಥ ಲಿಂಗರಾಜು ಮಾತನಾಡಿ, ನಮ್ಮ ಗ್ರಾಮದಲ್ಲಿ ಸಾಕಷ್ಟು ಜಮೀನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿದೆ. ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳಲು ಜಾಗ ಇರಲಿಲ್ಲ. ಸ್ಮಶನಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಎರಡು ಎಕರೆ ಜಾಗ ಪಡೆದುಕೊಳ್ಳಲಾಗಿದೆ. ಈ ಜಾಗವನ್ನು ಪಂಚಾಯಿತಿಯವರು ಅಭಿವೃದ್ಧಿ ಮಾಡಬೇಕಿತ್ತು. ಆದರೆ ಸೋಂಪುರ ಗ್ರಾಮ ಪಂಚಾಯತಿ ಆಡಳಿತ ನಿರ್ಲಕ್ಷ್ಯವಹಿಸಿದೆ. ಇದರಿಂದ ಸ್ಮಶಾನದಲ್ಲಿ ಕಸ ತುಂಬಿ ಹೋಗಿದೆ ಎಂದು ಅಸಮಾಧಾನ ಹೊರಹಾಕಿದರು.

ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಆದ್ದರಿಂದ ಕಸ ತಂದು ಪಂಚಾಯಿತಿ ಮುಂದೆ ಸುರಿದು ಪ್ರತಿಭಟನೆ ಮಾಡಿದ್ದೇವೆ. ಇನ್ನಾದರೂ ಅಧಿಕಾರಿಗಳು ಕಸ ತೆಗೆದು ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದ್ರಮ್ಮಪರಮೇಶ್ ಪ್ರತಿಕ್ರಿಯಿಸಿ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಂಡು ಸ್ಮಶಾನದ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ತಿಮ್ಮನಾಯಕನಹಳ್ಳಿ ಗ್ರಾಮಸ್ಥರಾದ ಶಿವರಾಜು, ಮಂಜುನಾಥ, ದೇವರಾಜು, ಮರಳಸಿದ್ದಯ್ಯ, ಶಿವರಾಜು, ಸಿದ್ದಗಂಗಯ್ಯ, ರಾಜಣ್ಣ, ಬಸಯ್ಯ, ಸಚ್ಚಿದಾನಂದ, ನಾಗರಾಜು, ಶಶಿಕುಮಾರ್, ಪುಟ್ಟಯ್ಯ ಇತರರು ಪಾಲ್ಗೊಂಡಿದ್ದರು.

ಪೋಟೋ 1 :

ಸೋಂಪುರ ಪಂಚಾಯಿತಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು.

PREV

Recommended Stories

ಬೆಳೆ ಕಟಾವು ಪ್ರಯೋಗ ರೈತರಿಗೆ ಅನ್ಯಾಯವಾಗದಿರಲಿ
ನಾಳೆ ಸಾಹೇ ವಿವಿಯ 14ನೇ ಘಟಿಕೋತ್ಸವ