ಸಹಕಾರಿದಲ್ಲಿ ವಿಜಯಪುರ ದೇಶಕ್ಕೆ ಮಾದರಿ

KannadaprabhaNewsNetwork |  
Published : Nov 20, 2025, 04:00 AM IST
19ಬಿಎಸ್ವಿ04- ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 72 ನೇ ಸಹಕಾರಿ ಸಪ್ತಾಹ ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆ ಜನ್ಮ ತಳೆದರೂ ದೇಶಕ್ಕೆ ಮಾದರಿಯಾಗುವಂತೆ ವಿಜಯಪುರ ಜಿಲ್ಲೆಯ ಸಹಕಾರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಂಡಿದೆ. ಜಿಲ್ಲೆಯಲ್ಲಿ ಕುಡಿಯಲು ನೀರೂ ಸಿಗದ ಸ್ಥಿತಿಯಲ್ಲಿದ್ದರೂ ಹಾಲು, ಸಕ್ಕರೆ ಉತ್ಪಾದನೆಯಲ್ಲಿ ಬಸವನಾಡಿನ ಸಹಕಾರ ವ್ಯವಸ್ಥೆ ಹೆಸರಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆ ಜನ್ಮ ತಳೆದರೂ ದೇಶಕ್ಕೆ ಮಾದರಿಯಾಗುವಂತೆ ವಿಜಯಪುರ ಜಿಲ್ಲೆಯ ಸಹಕಾರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಂಡಿದೆ. ಜಿಲ್ಲೆಯಲ್ಲಿ ಕುಡಿಯಲು ನೀರೂ ಸಿಗದ ಸ್ಥಿತಿಯಲ್ಲಿದ್ದರೂ ಹಾಲು, ಸಕ್ಕರೆ ಉತ್ಪಾದನೆಯಲ್ಲಿ ಬಸವನಾಡಿನ ಸಹಕಾರ ವ್ಯವಸ್ಥೆ ಹೆಸರಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದ ವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ನಿಯಮಿತದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಹಕಾರ ವರ್ಷ ಹಾಗೂ ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಎಂದರೆ ಕುಡಿಯಲು ನೀರು ಸಿಗದ ಜಿಲ್ಲೆ ಎಂಬ ಮೂದಲಿಕೆಗೆ ಜಿಲ್ಲೆಯ ಹೈನು ಉತ್ಪಾದಕ ತಾಯಂದಿರು ದಿಟ್ಟ ಉತ್ತರ ನೀಡಿದ್ದಾರೆ. ಪರಿಣಾಮ ರಾಜ್ಯದಲ್ಲಿ ನಿತ್ಯ 1.10 ಕೋಟಿ ಲೀ. ಹಾಲು ಉತ್ಪಾದನೆ ಆಗುತ್ತಿದೆ. ವಿಜಯಪುರ ಜಿಲ್ಲೆ ಕ್ಷೀರ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಸಾಧನೆಗೆ ಸಹಕಾರಿ ರಂಗ ಹಾಗೂ ಹಾಲು ಉತ್ಪಾದಕ ರಂಗದ ಬೆಳವಣಿಗೆಗೆ ತಾಯಂದಿರೇ ಕಾರಣ ಎಂದು ಶ್ಲಾಘಿಸಿದರು.ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳ ಎಂಬ ಪುಟ್ಟ ಹಳ್ಳಿಯಲ್ಲಿ ಸಿದ್ಧನಗೌಡ ಪಾಟೀಲ ಎಂದ ಮಹಾತ್ಮನಿಂದ ಜನ್ಮ ಪಡೆದ ಸಹಕಾರಿ ಚಳವಳಿಗೆ ದೇಶದ ಮೊದಲ ಪ್ರಧಾನಿಯಾಗಿದ್ದ ಪಂ.ಜವಾಹರಲಾಲ್ ನೆಹರು ಅವರು ಬಲವರ್ಧನೆಗೆ ಬೆನ್ನೆಲುಬಾಗಿ ನಿಂತರು. ಪ್ರೊ.ಕುರಿಯನ್ ಅವರು ಕ್ಷೀರಕಾಂತಿ ಮಾಡಿದ ಪರಿಣಾಮ ವಿದೇಶಕ್ಕೆ ಭಾರತ ಹಾಲು ಕಳಿಸುವ ಮಟ್ಟಕ್ಕೆ ಬೆಳೆದಿದೆ. ವಿಜಯಪುರ ಜಿಲ್ಲೆಯೂ ಸಹಕಾರಿ ಪ್ರಗತಿ ಸಾಧಿಸುವಲ್ಲಿ ದೇಸಾಯಿ ಪಾಂಡುರಂಗರಾವ್, ಫ.ಗು. ಹಳಕಟ್ಟಿ ಅವರ ದೂರದೃಷ್ಟಿ ಕಾರಣದಿಂದ ಜಿಲ್ಲೆ ಸಹಕಾರಿ ಮೂಲಕ ಆರ್ಥಿಕ ಅಭಿವೃದ್ಧಿಗೆ ನೆರವಾಗಿದ್ದು, ಈ ಮಹನೀಯರು ಸದಾ ಸ್ಮರಣೀಯರು ಎಂದರು.ಹಿಂದೆಲ್ಲ ಸಣ್ಣ ಸಾಲಕ್ಕೂ ರೈತರು ಹೊಲ, ಮನೆ ಬರೆದುಕೊಡುವ ದುಸ್ಥಿತಿ ಇದ್ದ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರ ಶೂನ್ಯ ಬಡ್ಡಿದರದ ಸಾಲ ನೀಡಿ ರೈತರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ. ಇದೀಗ ಸಹಕಾರಿ ಕ್ಷೇತ್ರ ನೂರಾರು ಕೋಟಿ ರು. ತೆರಿಗೆ ಕಟ್ಟುವ ಮಟ್ಟಕ್ಕೆ ಬಲಿಷ್ಠವಾಗಿದೆ ಎಂದರೆ ಸಹಕಾರಿ ರಂಗ ವಿಜಯಪುರ ಜಿಲ್ಲೆಯಲ್ಲಿ ಮಾಡಿರುವ ಆರ್ಥಿಕ ಸಹಕಾರಿ ಸಾಧನೆಗೆ ಸಾಕ್ಷಿ ಎಂದರು.ಇದೀಗ ದೇಶದಲ್ಲಿ 45 ಲಕ್ಷ ಸಹಕಾರಿ ಸಂಘಗಳಿದ್ದು, ರಾಜ್ಯದ ಪಾಲೇ 40 ಸಾವಿರ ಇದೆ. ಇಂದು ದೇಶದ ಹಲವು ಕ್ಷೇತ್ರಗಳಲ್ಲಿ ಸಹಕಾರಿ ವ್ಯವಸ್ಥೆ ಪ್ರವೇಶ ಮಾಡಿದ್ದು, ವಿಶ್ವಕ್ಕೆ ಮಾದರಿಯಾಗಿದೆ ಎಂದರು.ವಿಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಆರ್‌.ಎಂ.ಬಣಗಾರ ಉಪನ್ಯಾಸ ನೀಡಿದರು. ಗುರುಪಾದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಪ್ಪುಗೌಡ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ, ಕರ್ನಾಟಕ ರಾಜ್ಯ ಸಹಕಾರಿ ವಿಮಾ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಬಸವನಬಾಗೇವಾಡಿ ಪಿಎಲ್‌ಡಿಇ ಬ್ಯಾಂಕ್ ಅಧ್ಯಕ್ಷ ಐ.ಸಿ.ಪಟ್ಟಣಶೆಟ್ಟಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಬಾಲಚಂದ್ರ ಮುಂಜಣ್ಣಿ, ಲೋಕನಾಥ್ ಅಗರವಾಲ, ಶಂಕರಗೌಡ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾದ ವಿಶ್ವನಾಥಗೌಡ ಪಾಟೀಲ, ಸಂಗನಬಸಪ್ಪ ತಳೇವಾಡ, ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಚಂದ್ರಶೇಖರಗೌಡ ಪಾಟೀಲ, ಶ್ರೀಕಾಂತ ಸಾರವಾಡ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಂಗರಗಿ, ಕೆ.ಎನ್.ಪಾರಗೊಂಡ, ಸೌಮ್ಯ ಜಕ್ಕಣ್ಣವರ ಸೇರಿದಂತೆ ಇತರರು ಇದ್ದರು.

PREV

Recommended Stories

ಶಿಸ್ತು, ನ್ಯಾಯಪರತೆ, ಆತ್ಮಸಾಕ್ಷಿಗಳಿಂದ ಕೆಲಸ ಮಾಡಿ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ