ಕನ್ನಡಪ್ರಭ ವಾರ್ತೆ ವಿಜಯಪುರ
ಕಳಂಕರಹಿತ ರಾಜಕಾರಣಿಯಾಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮೇಲೆ ಬಿಜೆಪಿಯವರು ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು, ಅದನ್ನು ನಾವು ಖಂಡಿಸುತ್ತೇವೆ. ಇದು ಸಂಪೂರ್ಣ ಸುಳ್ಳಾಗಿದ್ದು, ಅವರ 35 ವರ್ಷಗಳ ರಾಜಕೀಯ ಜೀವನದಲ್ಲೇ ಎಂದೂ ಭ್ರಷ್ಟಾಚಾರ ಮಾಡಿಲ್ಲ ಎಂದು ಮಾದಿಗ ಸಮಾಜದ ಮುಖಂಡ ಸುಭಾಷ ಕಾಲೇಬಾಗ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿಮ್ಮಾಪುರ ಯಾವುದೇ ತಪ್ಪು ಮಾಡಿಲ್ಲ ಎಂಬ ಭರವಸೆ ನಮಗಿದೆ. ಅವರ ವಿರುದ್ಧ ಬಂದಿರುವ ಆರೋಪ ನಿರಾಧಾರವಾಗಿದೆ. ಹಾಗಾಗಿ ಮಾದಿಗ ಸಮಾಜದ ನೈತಿಕ ಬೆಂಬಲ ಯಾವಾಗಲೂ ತಿಮ್ಮಾಪುರ ಅವರಿಗಿದೆ. ಸಾಕಷ್ಟು ದುಡಿದು ಅತ್ಯಂತ ಕೆಳಮಟ್ಟದಿಂದ ಬಂದಿರುವ ಅವರ ಏಳಿಗೆಯನ್ನು ಸಹಿಸಲಾಗದೆ ಈ ರೀತಿ ಆಧಾರರಹಿತವಾದ ಆರೋಪಗಳನ್ನು ಮಾಡಿದ್ದಾರೆ. ತಿಮ್ಮಾಪುರ ಅವರನ್ನು ರಾಜಕೀಯವಾಗಿ ತುಳಿಯಬೇಕು ಎಂಬ ದೊಡ್ಡ ಎಂಬ ಷಡ್ಯಂತ್ರ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆ ಅತ್ಯಂತ ಪ್ರಭಾವಿ ಖಾತೆಯಾಗಿದೆ, ಜೊತೆಗೆ ಸರ್ಕಾರಕ್ಕೆ ಹೆಚ್ಚು ಆದಾಯವನ್ನು ತಂದುಕೊಡುವುದರಿಂದ ಕಾಂಗ್ರೆಸ್ ಯಶಸ್ವಿ ಮಾಡಿರುವ ಪಂಚ ಗ್ಯಾರಂಟಿಗಳಿಗೆ ಈ ಖಾತೆಯಿಂದಲೇ ಹೆಚ್ಚಿನ ಹಣ ಹರಿದು ಬರುತ್ತಿದೆ. ಗ್ಯಾರಂಟಿಗಳು ಬಡವರ ಮನೆ ಬಾಗಿಲಿಗೆ ತಲುಪಿದ್ದು, ಹೆಚ್ಚು ಜನಪ್ರಿಯಾಗಿದ್ದರಿಂದ ತಿಮ್ಮಾಪುರ ಮೇಲೆ ಕಳಂಕ ಹೊರಿಸಿ ಹೇಗಾದರು ಮಾಡಿ ಕಾಂಗ್ರೆಸ್ ಜನಪ್ರಿಯತೆ ಹಾಳುಮಾಡಲು ಬಿಜೆಪಿ ಷಡ್ಯಂತ್ರ ನಡೆಸಿರಬಹುದು ಎಂದು ಶಂಕಿಸಿದರು.ಮುಖಂಡ ರಮೇಶ ಗುಬ್ಬೆವಾಡ ಮಾತನಾಡಿ, ಸಮಾಜದ ಸಚಿವ ಆರ್.ಬಿ.ತಿಮ್ಮಾಪುರ ಅವರ ಮೇಲೆ ಹೊರೆಸಿರುವ ಆರೋಪ ಸುಳ್ಳು. ಮದ್ಯ ಮಾರಾಟದ ಸಂಘದ ಅಧ್ಯಕ್ಷ ಗುರುಸ್ವಾಮಿ ಆರೋಪಿಸಿದ್ದರಲ್ಲಿ ಯಾವುದೇ ಹುರುಳಿಲ್ಲ. ಗುರುಸ್ವಾಮಿ ಅವರೇ ಮೈಸೂರಲ್ಲಿರುವ ತಮ್ಮ ಮದ್ಯದ ಅಂಗಡಿಯನ್ನು ಅನುಮತಿ ಇಲ್ಲದೆ ಬೇರೆಡೆ ಸ್ಥಳಾಂತರಿಸಿ, ಇಲಾಖಾ ಅಧಿಕಾರಿಗಳಿಗೆ ಮೋಸ ಮಾಡಿದ್ದಾರೆ. ಇಂತಹವರಿಗೆ ಸಚಿವ ತಿಮ್ಮಾಪುರ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಇನ್ನು, ಗುರುಸ್ವಾಮಿ ಅವರ ಆರೋಪಕ್ಕೆ ಮೈಸೂರು ಲಿಕ್ಕರ್ ಅಸೋಸಿಯೇಷನ್ ನವರು ಈಗಾಗಲೇ ಉತ್ತರಿಸಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಪ್ರಕಟಣೆಯನ್ನೇ ಕೊಟ್ಟಿದ್ದಾರೆ. ಹೀಗಿದ್ದೂ ನ.20 ರಂದು ರಾಜ್ಯದಲ್ಲಿನ ಮಳಿಗೆ ಬಂದ್ ಮಾಡುತ್ತೇವೆ ಎಂದು ಹೇಳಿರುವ ಬಂದ್ ಕರೆಗೆ ಬೇರೆ ಜಿಲ್ಲೆಗಳಲ್ಲಿ ಬೆಂಬಲವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಘವೇಂದ್ರ ವಡವಡಗಿ, ಎಸ್.ಎನ್.ಮೂರ್ತಿ, ಧರ್ಮು ಹೊಸೂರ, ವಸಂತ ಹೊನಮೊಡೆ, ಸಾಗರ ಸಾವಳಸಂಗ, ಸಂಪತ ಕುಮಾರ ಯಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಕೋಟ್.....ಸರಳ ವ್ಯಕ್ತಿತ್ವದ ಸಚಿವ ತಿಮ್ಮಾಪುರ ಅವರ ಮೇಲೆ ಬೇಕು ಅಂತಲೇ ಕಳಂಕ ಹೊರೆಸುವ ಯತ್ನ ನಡೆದಿದೆ. ಹೀಗೆ ಮಾಡಿ ಓರ್ವ ದಲಿತ ಮುಖಂಡನನ್ನು ಕೆಳೆಗಿಳಿಸುವ ಹುನ್ನಾರ ಕೆಲವರು ಮಾಡುತ್ತಿದ್ದಾರೆ. ಹೀಗಾಗಿ ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮುಂದುವರೆಸಿದರೆ ಮಾದಿಗ ಸಮಾಜದಿಂದ ರಾಜ್ಯಾದಂತ ಹೋರಾಟ ಮಾಡಲಾಗುವುದು.
ರಮೇಶ ಗುಬ್ಬೆವಾಡ, ದಲಿತ ಮುಖಂಡ