ಬಳ್ಳಾರಿ: ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತೆ ಆರಂಭಿಸಿದ್ದು, ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರ ಶನಿವಾರ ಸಂಜೆ ಜರುಗಿದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಮುದ ನೀಡಿದವು.
ಇನ್ನು ಬಳ್ಳಾರಿ ತಾಲೂಕಿನ ಎಂ. ಗೋನಾಳ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘದ ಕಲಾವಿದರು ವೀರ ಅಭಿಮನ್ಯು ಕಾಳಗದ ಆಯ್ದ ಸನ್ನಿವೇಶ ರಂಗದ ಮೇಲೆ ಜೀವಂತಗೊಳಿಸಿದರು. ಪೌರಾಣಿಕ ಪ್ರಸಂಗದ ವೀರಾವೇಶ, ಪಾತ್ರಧಾರಿಗಳ ಅಭಿನಯ, ಸಂಭಾಷಣೆ ಹಾಗೂ ಸಾಂಪ್ರದಾಯಿಕ ಬಯಲಾಟದ ವೈಶಿಷ್ಟ್ಯ ಪ್ರೇಕ್ಷಕರನ್ನು ಸೆಳೆಯಿತು.
ಗ್ರಾಮೀಣ ಕಲಾ ಪ್ರಕಾರವಾದ ಬಯಲಾಟದ ಸೊಗಡನ್ನು ನಗರ ವಾಸಿಗಳಿಗೆ ಪರಿಚಯಿಸುವಲ್ಲಿ ಈ ಪ್ರದರ್ಶನ ಯಶಸ್ವಿಯಾಯಿತು. ಬಯಲು ರಂಗಮಂದಿರದಲ್ಲಿ ಬಯಲಾಟದ ವೀರಾವೇಶ, ನೃತ್ಯದ ಲಯಬದ್ಧ ಹೆಜ್ಜೆ, ಹಾಸ್ಯದ ನಗೆಚಟಾಕಿಗಳು ಹೀಗೆ ಒಂದೆಡೆ ಕಲಾ ವೈವಿಧ್ಯ, ಮತ್ತೊಂದೆಡೆ ಪ್ರೇಕ್ಷಕರ ಚಪ್ಪಾಳೆ, ನಗೆಯ ಅಲೆ. ನಗರದ ಮತ್ತೆ ಆರಂಭವಾಗಿದ್ದು, ವಿವಿಧ ಕಲಾಪ್ರಕಾರಗಳ ಪ್ರದರ್ಶನ ಕಲಾಸಕ್ತರಿಗೆ ಮನರಂಜನೆಯ ರಸದೌತಣ ಉಣಬಡಿಸಿತು.ಚಾಲನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ಕಳೆದ ಒಂದು ವರ್ಷದಿಂದ ಪ್ರೇಕ್ಷಕರ ಕೊರತೆಯ ಹಿನ್ನೆಲೆ ಸ್ಥಗಿತಗೊಂಡಿದ್ದ ತಿಂಗಳ ಸೊಬಗು ಕಾರ್ಯಕ್ರಮ ಇದೀಗ ಪುನರಾರಂಭಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ವಿಶೇಷ ಪ್ರಯತ್ನದ ಫಲವಾಗಿ ಮತ್ತೆ ಈ ಸಾಂಸ್ಕೃತಿಕ ವೇದಿಕೆ ಸಜ್ಜುಗೊಂಡಿದೆ. ಸ್ಥಳೀಯವಾಗಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರಿಗೆ ತಮ್ಮ ಕಲೆ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಗುರುತಿಸಿಕೊಂಡಿರುವ ನುರಿತ ಕಲಾವಿದರ ಜತೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗುವುದು. ಇದರಿಂದ ಕಲಾವಿದರಿಗೆ ಪ್ರೋತ್ಸಾಹ ದೊರೆಯುವುದರ ಜತೆಗೆ ಸಾರ್ವಜನಿಕರಿಗೂ ವಿವಿಧ ಕಲಾಪ್ರಕಾರ ಆಸ್ವಾದಿಸುವ ಅವಕಾಶ ಸಿಗಲಿದೆ ಎಂದರು.
ಸ್ಥಗಿತಗೊಂಡಿದ್ದ ತಿಂಗಳ ಸೊಬಗು ಮತ್ತೆ ಆರಂಭವಾಗಿರುವುದು ಸ್ಥಳೀಯ ಕಲಾವಿದರಲ್ಲಿ ಹೊಸ ಉತ್ಸಾಹ ಮೂಡಿಸಿದೆ.