ಲಘು ರಥೋತ್ಸವ, ಕುಂಭಮೇಳ ಮತ್ತು ಧಾರ್ಮಿಕ ಸಭೆ
ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣನ ಹೆಸರಿನಲ್ಲಿ ಇಂದು ಬುಸ್ ಬುಸ್ ಅಂತ ಬುಸುಗುಡುವವರೇ ಹೆಚ್ಚಿದ್ದಾರೆ. ಬಸವಾನುಯಾಯಿಗಳು ಅಂಥವರ ಮಾತಿಗೆ ಗಮನ ಕೊಡದೇ ಜಾತ್ಯತೀತವಾಗಿ ಬದುಕುವ ಬಗ್ಗೆಯೇ ಯೋಚಿಸಬೇಕು ಎಂದು ಕುದರಿಮೋತಿ ಸಂಸ್ಥಾನ ಮೈಸೂರು ಮಠದ ವಿಜಯಮಹಾಂತೇಶ ಮಹಾಸ್ವಾಮಿಗಳು ಹೇಳಿದರು.
ಯಲಬುರ್ಗಾ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ನಿಮಿತ್ತ ಸೋಮವಾರ ನಡೆದ ನೂತನವಾಗಿ ನಿರ್ಮಿಸಿರುವ ಲಘು ರಥೋತ್ಸವ, ಕುಂಭಮೇಳ ಮತ್ತು ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತಿಯ ಮತ್ತೊಂದು ಹೆಸರಾಗಿರುವ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ ಕೈಗೊಂಡ ಮಹಾನ್ ಕ್ರಾಂತಿಯನ್ನು ಪಾಶ್ಚಾತ್ಯ ದೇಶಗಳೂ ಗುರುತಿಸಿವೆ. ಕಳಬೇಡ-ಕೊಲಬೇಡ ಎಂಬ ಒಂದೇ ಒಂದು ವಚನ ಇಂದಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಂತೆಯೇ ಕಳೆದ ೯೦೦ ವರ್ಷಗಳಲ್ಲಿ ಕರ್ನಾಟಕದಲ್ಲಿ ಹಲವು ಧರ್ಮಗುರುಗಳು ಆಗಿ ಹೋಗಿದ್ದರೂ, ಬಸವಣ್ಣನಂಥ ಗುರು ಮತ್ತೆ ಜನಿಸಲೇ ಇಲ್ಲ ಎಂದು ಪ್ರತಿಪಾದಿಸಿದರು.ಕತ್ತಲೆಯಿಂದ ಬೆಳಕಿನತ್ತ ಪಯಣಿಸಬೇಕು ಎಂಬ ಉದ್ದೇಶದಿಂದ ಎಲ್ಲೆಡೆ ಕಾರ್ತಿಕೋತ್ಸವ ನಡೆಯುತ್ತದೆ. ದೇವರು ಸಂಪತ್ತು ಕೊಡೋದೇ ಒಳ್ಳೆಯ ಕೆಲಸ ಮಾಡಲು. ಸತ್ಯಶುದ್ಧ ಕಾಯಕದಿಂದ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಇಂಥ ಉತ್ಸವಗಳಿಗೆ ವ್ಯಯಿಸುವುದರಿಂದ ಅಂಥವರ ಸಂಪತ್ತು ವೃದ್ಧಿಯಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯಲಬುರ್ಗಾ ತಾಪಂ ಸಹಾಯಕ ನಿರ್ದೇಶಕ ಫಕಿರಪ್ಪ ಕಟ್ಟಿಮನಿ, ಸಂಕನೂರ ಗ್ರಾಪಂ ಸದಸ್ಯರಾದ ಎಸ್.ಎಸ್. ಸಂಗಳದ, ಸುಮಿತ್ರಾ ಪೊಲೀಸಪಾಟೀಲ್, ಪ್ರಮುಖರಾದ ಬಸವರಾಜ ಸಂಗಳದ, ಹನುಮಂತ ಗಂಜ್ಯಾಳ, ಶೇಖರಪ್ಪ ದೇಸಾಯಿ, ಈರನಗೌಡ ಪೊಲೀಸಪಾಟೀಲ್, ಅಂದಪ್ಪ ಸಂಗಳದ, ಹುಸೇನಸಾಬ ನದಾಫ್, ಮಹಾಂತೇಶ ಹರಿಜನ, ಬಾಲಪ್ಪ ಗಂಜ್ಯಾಳ, ಮಂಜುನಾಥ ರೋಣದ ಮುಂತಾದವರಿದ್ದರು.
ಇದಕ್ಕೂ ಮುನ್ನ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು ಬಸವೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ನೆರವೇರಿಸಿದರು. ಮಲ್ಲಯ್ಯ ಮಠದ ಹಾಗೂ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಉತ್ಸವದ ವಿಧಿವಿಧಾನಗಳು ನೆರವೇರಿದವು.