ಕನ್ನಡಪ್ರಭ ವಾರ್ತೆ ಕಲಬುರಗಿ
ಕೆಕೆಆರ್‌ಡಿಬಿಯಿಂದ ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿರುವ ಸಾಹಿತಿಗಳು, ಲೇಖಕರ ಕನ್ನಡ ಕೃತಿಗಳ ಖರೀದಿಗೆ ಮರು ಚಿಂತನೆ ಮಾಡಲಾಗುತ್ತದೆ ಎಂದು ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಇಂಗಿತ ಹೊರಹಾಕಿದ್ದಾರೆ.ಇಲ್ಲಿನ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ನಡೆದ ಕನ್ನಡ ನಾಡು ಪ್ರಶಸ್ತಿ ಪ್ರದಾನ ಮತ್ತು ಸಂಘವು 2023ನೇ ಸಾಲಿನಲ್ಲಿ ಪ್ರಕಟಿಸಿದ 9 ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಶಕದ ಹಿಂದೆ ಕೆಕೆಆರ್‌ಡಿಬಿ ಕಲ್ಯಾಣ ನಾಡಿನ ಲೇಖಕರ ಕೃತಿಗಳನ್ನು ಖರೀದಿಸಿತ್ತು. ಇದರಿಂದ ಲೇಖಕರಿಗೆ ತುಂಬ ಅನುಕೂಲವಾಗಿತ್ತು. ಇದಲ್ಲದೆ ಲೇಖಕರ ಕೃತಿಗಳು ಕಲ್ಯಾಣ ನಾಡಿನ ಎಲ್ಲಾ ಪಂಚಾಯಿತಿ ಗ್ರಂಥಾಲಯ ತಲುಪಿದ್ದವು. ತಮ್ಮ ಅವಧಿಯಲ್ಲಿಯೂ ಪುಸ್ತಕಗಳ ಖರೀದಿಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಈ ದಿಶೆಯಲ್ಲಿ ತಾವು ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.ಕೆಕೆಆರ್‌ಡಿಬಿ ಕೇವಲ ರಸ್ತೆ, ಚರಂಡಿ ನಿರ್ಮಾಣವನ್ನೇ ಅಭಿವೃದ್ಧಿ ಎಂದುಕೊಂಡಿಲ್ಲ. ಸಾಹಿತ್ಯ, ಕಲೆ, ಸ್ಸಂಕೃತಿ ಮೂಲಕ ಅಭಿವೃದ್ಧಿ ಸಾಧ್ಯವೆಂದುಕೊಂಡಿದ್ದೇವೆ. ಕೃತಿಗಳ ಖರೀದಿಗೂ ನಾವು ಚಿಂತನೆ ಮಾಡುತ್ತೇವೆ. ಖರೀದಿ ಪ್ರಕ್ರಿಯೆ ಹೇಗಿರಬೇಕೆಂಬ ವಿಚಾರದಲ್ಲಿಯೂ ಚರ್ಚೆಗಳನ್ನು ಮಾಡಿ ಅಂತಿಮ ನಿರ್ಣಯಕ್ಕೆ ಬರುತ್ತೇವೆಂದರು.
ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಜೀವಮಾನ ಸಾಧನೆಗಾಗಿ ಪ್ರತಿವರ್ಷ ನೀಡಲಾಗುವ ಡಾ.ಎಸ್.ಎಸ್. ಸಿದ್ದಾರೆಡ್ಡಿ ಸ್ಮಾರಕ ಕನ್ನಡ ನಾಡು ಸಾಹಿತ್ಯ ಶ್ರೀ ಪ್ರಶಸ್ತಿಯನ್ನು 2022ನೇ ಸಾಲಿಗೆ ನಗರದ ಡಾ. ಪಿ.ಎಸ್. ಶಂಕರ್ ಅವರಿಗೆ ನೀಡಿ ಶುಭ ಕೋರಲಾಯಿತು. ವಿಜಯಶ್ರೀ ಸಬರದ, ಮಹಿಪಾಲರೆಡ್ಡಿ ಮುನ್ನೂರ್ ಸೇರಿದಂತೆ ಹಲವು ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ವಿಜಿ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ರಾಜೇಂದ್ರ ಕೊಂಡಾ ವೇದಿಕೆಯಲ್ಲಿದ್ದರು.
ಸಂಘದ ಉಪಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.
9 ಕೃತಿಗಳ ಲೋಕಾರ್ಪಣೆ:2023ನೇ ಸಾಲಿನಲ್ಲಿ ಸಂಘ ಪ್ರಕಟಿಸಿದ ಪ್ರೊ. ಲಿಂಗಪ್ಪ ಗೋನಾಲ್ ಅವರ ಸಾಂಸ್ಕೃತಿಕ ಅನುಸಂಧಾನ, ಡಾ. ಶೈಲಜಾ ಬಾಗೇವಾಡಿಯವರ ನೆಲೋಗಿ ನೀಲಮ್ಮನ ತ್ರಿಪದಿಗಳು, ಡಾ. ಪ್ರಭು ಖಾನಾಪೂರೆ ಅವರ ಕಥೆಯಾದ ಕಥೆಗಾರ ಮತ್ತು ಇತರ ಕಥೆಗಳು, ಶರಣಗೌಡ ಬಿ. ಪಾಟೀಲ್ ಅವರ ಪ್ಯಾಶನ್ ಪರಮಾತ್ಮ ಮತ್ತು ಇತರ ಕಥೆಗಳು, ರಾಘವೇಂದ್ರ ಮಂಗಳೂರು ಅವರ ಕಥೆಗಳು, ಡಾ. ಎಸ್.ಎಸ್. ಗುಬ್ಬಿ ಅವರ ಆತ್ಮನಿನಾದ, ಡಾ. ವಿಶ್ವರಾಜ್ ಪಾಟೀಲ್ ಅವರ ಕೃತಿ ಸೇರಿ ಒಂಭತ್ತು ಕೃತಿಗಳು ಲೋಕಾರ್ಪಣೆಗೊಂಡವು.