ರಾಜ್ಯದ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ರಾಜ್ಯಾದ್ಯಂತ ಜನಾಭಿಪ್ರಾಯ ಪಡೆಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜನವಿರೋಧಿಯಾಗಿದ್ದು, ರಾಜ್ಯದ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ರಾಜ್ಯಾದ್ಯಂತ ಜನಾಭಿಪ್ರಾಯ ಪಡೆಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ರಾಜಕೀಯಕ್ಕೆ ಪರ್ಯಾಯವಾಗಿ ಪಕ್ಷ ಕಟ್ಟಲಾಗುತ್ತದೆ. ಈ ಭ್ರಷ್ಟಾಚಾರ ವ್ಯವಸ್ಥೆ ಧಿಕ್ಕರಿಸುವ ಮತ್ತು ರಾಜ್ಯದ ಹಿತ ಕಾಯುವ ಪಕ್ಷ ಕಟ್ಟಲಾಗುವುದು. ರೈತರು, ದಲಿತರು, ಹಿಂದುಳಿದವರು ಸೇರಿದಂತೆ ರಾಜ್ಯದ ಎಲ್ಲ ಜನರ ಹಿತ ಗಮನದಲ್ಲಿಟ್ಟುಕೊಂಡು, ಜನತಾ ಪ್ರಣಾಳಿಕೆ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಿ, ಅಭಿಪ್ರಾಯ ಪಡೆದು, ಪಕ್ಷ ಕಟ್ಟುವ ಚಿಂತನೆ ಪ್ರಾರಂಭಿಸಿದ್ದೇವೆ. ಜನಸ್ಪಂದನೆ ಆಧರಿಸಿ, ಮುಂದಿನ ನಿರ್ಧಾರ ಪ್ರಕಟಮಾಡಲಾಗುವುದು. 2028ರ ಚುನಾವಣೆಗೆ ಹೊಸ ಪಕ್ಷದ ಅಡಿ ಸ್ಪರ್ಧಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ದಿವಾಳಿಯತ್ತ ರಾಜ್ಯ ಸರ್ಕಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1.10 ಲಕ್ಷ ಕೋಟಿ ಸಾಲ ಮಾಡಿದ್ದು, ಶಾಸಕರ ವೇತನ ಹೆಚ್ಚಳ, ಒಪಿಎಸ್ ಜಾರಿ ಸೇರಿದಂತೆ ಮೊದಲಾದ ಹೊರೆಯಿಂದಾಗಿ ರಾಜ್ಯ ದಿವಾಳಿಯತ್ತ ಸಾಗುತ್ತಿದೆ, ಇದಕ್ಕೆ ಸಿಎಂ ಹೊಣೆ ಎಂದು ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು. ಸಿದ್ದರಾಮಯ್ಯ ಅವರು ನಾನು ಹಿಂದುಳಿದವರ ಪರ, ದಲಿತರ ಪರ ಎಂದು ಹೇಳುತ್ತಾ ಇದೀಗ ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿದ್ದಾರೆ. ಇವರಿಗೆ ಅಧಿಕಾರಕ್ಕೆ ಬರಲು ಮಾತ್ರ ಹಿಂದುಳಿದವರು, ದಲಿತರು ಬೇಕಾಗಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದ ಬಜೆಟ್ ಬಹುತೇಕ ಸರ್ಕಾರಿ ನೌಕರರ ವೇತನ ಹಾಗೂ ಗ್ಯಾರಂಟಿ ಯೋಜನೆಗೆ ಬೇಕಾಗಿದೆ. ಇದೀಗ ಶಾಸಕರ ವೇತನ ಹೆಚ್ಚಳ, ಒಪಿಎಸ್ ಜಾರಿಗೆ ಮುಂದಾಗಿದ್ದರಿಂದ ಆರ್ಥಿಕ ಹೊರೆ ನಿಭಾಯಿಸಲು ಸಾಧ್ಯವಿಲ್ಲದಂತೆ ಆಗಿದೆ ಎಂದರು
ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವಂತೆ ಗಡುವು ನೀಡಿದ್ದು, ಬಜೆಟ್ ಬಳಿಕ ಜಾರಿಗೊಳಿಸದೆ ಇದ್ದರೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದ ಅವರು, 2023ರಲ್ಲಿ ಬರದಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದರೂ ರಾಜ್ಯ ಮತ್ತು ಕೇಂದ್ರ ಪುಡಿಗಾಸು ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.