ಮಂಗಳೂರಲ್ಲಿ ಸೈನಿಕ ಶಾಲೆ ತೆರೆಯಲು ಪ್ರಯತ್ನ: ಬ್ರಿಜೇಶ್‌ ಚೌಟ

KannadaprabhaNewsNetwork | Updated : Jun 21 2024, 12:49 PM IST

ಸಾರಾಂಶ

ವಿಕಸಿತ ದಕ್ಷಿಣ ಕನ್ನಡ ಜಿಲ್ಲೆ ನಿರ್ಮಿಸುವ ಆಶಯ ನನ್ನದು. ವಿಕಸಿತ ಭಾರತಕ್ಕೆ ಕೊಡುಗೆ ನೀಡುವ ಎಲ್ಲ ಶಕ್ತಿ ದಕ್ಷಿಣ ಕನ್ನಡ ಜಿಲ್ಲೆಗಿದೆ ಎಂದು ಸಂಸದ ಬ್ರಿಜೇಶ್‌ ಚೌಟ ಹೇಳಿದರು.

 ಮಂಗಳೂರು :  ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ವೇಳೆಗೆ ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕವನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಉತ್ತಮವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರಿನಲ್ಲಿ ಸೈನಿಕ ಶಾಲೆ ತೆರೆಯಲು ಪ್ರಯತ್ನ ಆಗಬೇಕಿದೆ ಎಂದು ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾರಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ. ಸಮರ್ಪಕವಾದ ರೂಪುರೇಷೆ ಇಲ್ಲದ ಕಾರಣ ಅನುಷ್ಠಾನ ಹಂತದಲ್ಲಿ ಯೋಜನೆ, ಕಾಮಗಾರಿಗಳು ವಿಳಂಬವಾಗುತ್ತಿವೆ. ಸಮಗ್ರವಾಗಿ ಯೋಜನೆ ರೂಪಿಸುವುದು ಇದಕ್ಕೆ ಪರಿಹಾರ ಎಂದರು.

ವಿಕಸಿತ ದಕ್ಷಿಣ ಕನ್ನಡ ಜಿಲ್ಲೆ ನಿರ್ಮಿಸುವ ಆಶಯ ನನ್ನದು. ವಿಕಸಿತ ಭಾರತಕ್ಕೆ ಕೊಡುಗೆ ನೀಡುವ ಎಲ್ಲ ಶಕ್ತಿ ದಕ್ಷಿಣ ಕನ್ನಡ ಜಿಲ್ಲೆಗಿದೆ. ಜಿಲ್ಲೆಯಲ್ಲಿ 9 ಫೋಕಸ್ ಏರಿಯಾ ಆಧಾರಿತವಾಗಿ ಎಲ್ಲ ಜನಪ್ರತಿನಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಸೇವಕರಾದರೆ, ಬ್ರಿಜೇಶ್ ಚೌಟ ಅವರು ಜಿಲ್ಲೆಯ ಜನರ ಪ್ರಧಾನ ಸೇವಕರಾಗಿ ಅಭಿವೃದ್ಧಿಗೆ ದುಡಿಯಲಿದ್ದಾರೆ. 

ನಗರದ ನಂತೂರು, ಕೆಪಿಟಿ ಮೇಲ್ಸೆತುವೆ ನಿರ್ಮಾಣ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದ್ದು, ತಮ್ಮ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ ಎಂದರು.ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ವರುಣ್ ಚೌಟ, ಶ್ವೇತಾ ಪೂಜಾರಿ, ದಿವಾಕರ ಪಾಂಡೇಶ್ವರ, ಕಿರಣ್‌ಕುಮಾರ್ ಕೋಡಿಕಲ್, ಸಂಗೀತಾ ನಾಯಕ್, ನವೀನ್ ಡಿಸೋಜಾ, ಭಾಸ್ಕರ ಮೊಯಿಲಿ, ಜಗದೀಶ ಶೆಟ್ಟಿ, ಎ.ಸಿ. ವಿನಯರಾಜ್, ಶಶಿಧರ ಹೆಗ್ಡೆ ಅವರು ಅಭಿನಂದಿಸಿ ಮಾತನಾಡಿ, ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು.ಉಪಮೇಯರ್ ಸುನಿತಾ, ಪಾಲಿಕೆ ಆಯುಕ್ತ ಆನಂದ್ ಇದ್ದರು. ಶರಣ್ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

Share this article