ಮರ್ಯಾದಾ ಹತ್ಯೆ ತಡೆಗೆ ಕಠಿಣ ಕಾನೂನಿಗೆ‌ ಚಿಂತನೆ

KannadaprabhaNewsNetwork |  
Published : Jan 02, 2026, 03:15 AM IST
ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿರುವ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಇನಾಂವೀರಾಪುರದಲ್ಲಿ ನಡೆದಿದ್ದು ಮರ್ಯಾದೆ ಹತ್ಯೆಯಲ್ಲ, ಉಗ್ರವಾದ ಕೊಲೆ. ಕರ್ನಾಟಕ ಮುಂದುವರಿದ ರಾಜ್ಯ. ರಾಜಸ್ಥಾನ, ಹರಿಯಾಣ ಸೇರಿ‌ ಇತರ ರಾಜ್ಯದಲ್ಲಿ ಇಂತಹ ಘಟನೆಗಳು ಕಂಡು ಬರುತ್ತಿದ್ದವು ಎಂದು ಸಚಿವ ಎಚ್‌.ಸಿ. ಮಹಾದೇವಪ್ಪ ಹೇಳಿದರು.

ಹುಬ್ಬಳ್ಳಿ:

ಮರ್ಯಾದಾ ಹತ್ಯೆಯಂತಹ ಪ್ರಕರಣಗಳ ತಡೆಗೆ ಕಠಿಣ ಕಾನೂನಿನ ಅಗತ್ಯವಿದ್ದು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಕುರಿತು ಪರಿಶೀಲಿಸಲಾಗುವುದು. ಅಲ್ಲದೇ ಮಾನ್ಯಾ ಪಾಟೀಲ್ ಹೆಸರಿನಲ್ಲೇ ಕಾಯ್ದೆ ತರುವ ಕುರಿತು ಚರ್ಚಿಸಲಾಗುವುದು ಎಂದು ಸಮಾಜ‌ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ತಿಳಿಸಿದರು

ತಾಲೂಕಿನ ಇನಾಂವೀರಾಪುರದಲ್ಲಿ ಮರ್ಯಾದಾ ಹತ್ಯೆಗೀಡಾದ ಮಾನ್ಯಾ ಪತಿ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ‌ ಕೃತ್ಯವನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ. ಇಂತಹ ಮನುವಾದದ ಮನಸ್ಸುಗಳನ್ನು ಹತ್ತಿಕ್ಕಲೇಬೇಕು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರೆಲ್ಲ ಉತ್ತೇಜನ ಕೊಟ್ಟಿದ್ದಾರೋ ಅದರಲ್ಲಿ ಒಬ್ಬರನ್ನೂ ಬಿಡುವುದಿಲ್ಲ ಎಂದ ಅವರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವೈಫಲ್ಯದ ಕುರಿತು ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ಬಳಿಕ ತಪ್ಪು ಎಸಗಿದ‌ ಅಧಿಕಾರಿಗಳ‌ ವಿರುದ್ಧ ಶಿಸ್ತು ಕ್ರಮ‌ ಜರುಗಿಸಲಾಗುವುದು. ಇದಕ್ಕೂ‌ ಮಿಗಿಲಾದ ಘಟನೆ ನಡೆದಿರುವುದರಿಂದ ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಉಗ್ರವಾದ ಕೊಲೆ:

ಇದು ಮರ್ಯಾದೆ ಹತ್ಯೆಯಲ್ಲ, ಉಗ್ರವಾದ ಕೊಲೆ. ಕರ್ನಾಟಕ ಮುಂದುವರಿದ ರಾಜ್ಯ. ರಾಜಸ್ಥಾನ, ಹರಿಯಾಣ ಸೇರಿ‌ ಇತರ ರಾಜ್ಯದಲ್ಲಿ ಇಂತಹ ಘಟನೆಗಳು ಕಂಡು ಬರುತ್ತಿದ್ದವು. ಪ್ರಾಯಕ್ಕೆ ಬಂದ ಯುವತಿ ತನ್ನ ಮದುವೆಯ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ. ಅದು ಆಕೆಯ ಮೂಲಭೂತ ಹಕ್ಕು. ಅಂತಹ ಹಕ್ಕನ್ನು ಹತ್ತಿಕ್ಕುವ ವ್ಯಕ್ತಿಗಳನ್ನು ಹಾಗೂ ಬೆಂಬಲಿಸುವವರನ್ನು ಸರ್ಕಾರ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಕೋರಲಾಗುವುದು. ಈ ತರಹದ ಘಟನೆಗಳು ಮರುಕಳಿಸದಂತೆ ಮುಂದೇನು‌ ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದರು.

₹16 ಲಕ್ಷದ ಚೆಕ್‌ ವಿತರಣೆ:

ಇನಾಂವೀರಾಪುರದಲ್ಲಿ ಇರುವ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಅರ್ಧಗಂಟೆಗೂ ಹೆಚ್ಚುಕಾಲ ಕುಟುಂಬದವರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಈ ವೇಳೆ ಕುಟುಂಬದವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು, ಸೂಕ್ತ ರಕ್ಷಣೆಗೆ ಮನವಿ ಮಾಡಿದರು. ಇಡೀ ಸರ್ಕಾರವೇ ನಿಮ್ಮೊಂದಿಗಿದ್ದು, ಕುಟುಂಬಕ್ಕೆ ಬೇಕಾದ ರಕ್ಷಣೆ ನೀಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಹಲ್ಲೆಗೊಳಗಾದ 8 ಜನರಿಗೆ ತಲಾ ₹2 ಲಕ್ಷದಂತೆ ಒಟ್ಟು 16 ಲಕ್ಷ ಮೊತ್ತದ ಚೆಕ್‌ಗಳನ್ನು ಸಚಿವರು ಕುಟುಂಬದವರಿಗೆ ಹಸ್ತಾಂತರಿಸಿದರು.

ಆಸ್ಪತ್ರೆಗೆ ಭೇಟಿ:

ಬಳಿಕ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ತಾಯಿ ರೇಣವ್ವ ದೊಡ್ಡಮನಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ. ರಣದೀಪ್‌, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು