ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮೂರನೇ ಉಪಚುನಾವಣೆ ಎದುರಾಗಿದೆ. ಈ ಹಿಂದೆ ನಡೆದಿದ್ದ ಎರಡು ಉಪಚುನಾಣೆಯಲ್ಲಿ ಒಮ್ಮೆ ಜೆಡಿಎಸ್‌ಗೆ ಹಾಗೂ ಮತ್ತೊಮ್ಮೆ ಬಿಜೆಪಿಗೆ ಲಾಭವಾಗಿದೆ. ಆದರೆ, ಈ ಬಾರಿ ಎನ್‌ಡಿಎ ಕೂಟದಲ್ಲಿ ಇರುವ ಈ ಎರಡು ಪಕ್ಷಗಳೇ ಕ್ಷೇತ್ರದ ಟಿಕೆಟ್‌ಗಾಗಿ ಪರಸ್ಪರ ಪೈಪೋಟಿ ನಡೆಸುವಂತಾಗಿದೆ.
ಮೊದಲ ಉಪಚುನಾವಣೆ: ೨೦೦೮ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ೨೦೦೯ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಸೋಲು ಅನುಭವಿಸಿದರು.
ಅದೇ ವರ್ಷ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಂ.ಸಿ.ಅಶ್ವತ್ಥ್, ಕಾಂಗ್ರೆಸ್‌ನಿಂದ ಟಿ.ಕೆ.ಯೋಗೇಶ್, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಸಿ.ಅಶ್ವತ್ಥ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿ.ಪಿ.ಯೋಗೇಶ್ವರ್ ವಿರುದ್ಧ ಜಯಗಳಿಸಿದ್ದು, ಮೊದಲ ಉಪಚುನಾವಣೆ ಜೆಡಿಎಸ್‌ಗೆ ಲಾಭ ತಂದುಕೊಟ್ಟಿತ್ತು.೨೦೧೧ರಲ್ಲಿ ಬಿಜೆಪಿ ಜಯ:
ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಎಂ.ಸಿ.ಅಶ್ವತ್ಥ್ ೨೦೧೧ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿತ್ತು. ಆ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಿಂ.ಲಿಂ.ನಾಗರಾಜು, ಕಾಂಗ್ರೆಸ್‌ನಿಂದ ರಘುನಂದನ್ ರಾಮಣ್ಣ ಹಾಗೂ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿದರು. ಆ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಂ.ಲಿಂ.ನಾಗರಾಜು ವಿರುದ್ಧ ಸ್ಪರ್ಧಿಸಿದ್ದ ಯೋಗೇಶ್ವರ್ ಗೆಲುವು ಸಾಧಿಸಿದ್ದು, ತಾಲೂಕಿನಲ್ಲಿ ಮೊದಲ ಬಾರಿ ಬಿಜೆಪಿಗೆ ಗೆಲುವು ಒಲಿದಿತ್ತು.ಇದೀಗ ಮತ್ತೊಂದು ಉಪಚುನಾವಣೆ:
ಇದೀಗ ಮಂಡ್ಯ ಲೋಕಸಭಾ ಚುನಾವಣೆಯ ಗೆಲುವು ಸಾಧಿಸಿ ಕ್ಷೇತ್ರದ ಶಾಸಕತ್ವಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮೂರನೇ ವಿಧಾನಸಭೆ ಉಪಚುನಾವಣೆ ಎದುರಾಗುವಂತಾಗಿದೆ. ಮೊದಲ ಎರಡು ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಾಗಿ ಸೆಣಸಾಟ ನಡೆಸಿದ್ದ ಬಿಜೆಪಿ-ಜೆಡಿಎಸ್ ಇಂದು ಮಿತ್ರಪಕ್ಷಗಳಾಗಿವೆ.ವಿಪರ್ಯಾಸವೆಂದರೆ ಅಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪರಸ್ಪರ ಸೆಣಸಾಟ ನಡೆಸಿದ್ದ ಬಿಜೆಪಿ-ಜೆಡಿಎಸ್ ಇಂದು ಕ್ಷೇತ್ರದ ಎನ್‌ಡಿಎ ಟಿಕೆಟ್‌ಗಾಗಿ ಗುದ್ದಾಟ ನಡೆಸಿವೆ. ಜೆಡಿಎಸ್ ಗೆಲುವು ಸಾಧಿಸಿದ್ದ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಳ್ಳಬೇಕು ಎಂಬ ಇರಾದೆ ಕುಮಾರಸ್ವಾಮಿ ಅವರದು. ಇದೇ ವೇಳೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿರುವ ಯೋಗೇಶ್ವರ್ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂದು ಹರಸಾಹಸ ಪಡುತ್ತಿದ್ದು, ಎನ್‌ಡಿಎ ಟಿಕೆಟ್ ಯಾವ ಪಕ್ಷದ ಪಾಲಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕ್ಷೇತ್ರ ಕಳೆದುಕೊಂಡ ಕಾಂಗ್ರೆಸ್:೨೦೦೯ರಲ್ಲಿ ಕ್ಷೇತ್ರದ ಶಾಸಕತ್ವಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿದ ನಂತರ ಕ್ಷೇತ್ರವನ್ನು ಕಳೆದುಕೊಂಡ ಕಾಂಗ್ರೆಸ್‌ಗೆ ಇಲ್ಲಿಯವರಗೆ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಗಿಲ್ಲ. ೨೦೦೯-೨೦೧೧ರ ಉಪಚುನಾವಣೆ, ೨೦೧೩, ೨೦೧೮, ೨೦೨೩ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದು, ಅಂದಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.
ಇದೀಗ ಮತ್ತೊಂದು ಉಪಚುನಾವಣೆ ಎದುರಾಗಿದ್ದು, ಈ ಚುನಾವಣೆ ಯಾವ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.ಪೊಟೋ:
ಮೂರು ಪಕ್ಷದ ಲೋಗೋ ಬಳಸಿಕೊಳ್ಳುವುದು.