ಧಾರವಾಡ: ಇಲ್ಲಿಯ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ಮಹಿಳೆಯೋರ್ವಳ ಕೊಲೆಯಾಗಿದ್ದು, ಮೂರು ದಿನದಲ್ಲಿ ಇದು ಮೂರನೇ ಹತ್ಯೆಯಿಂದ ಧಾರವಾಡ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಕಳೆದ ಎರಡು ದಿನದಲ್ಲಿ ಇಬ್ಬರು ಯುವಕರನ್ನು ಬರ್ಭರವಾಗಿ ಹತ್ಯೆಗೈಯ್ಯಲಾಗಿದ್ದು, ಮಂಗಳವಾರ ಆಸ್ತಿ ವಿಚಾರವಾಗಿ ಸಂಬಂಧಿಕರೇ ಮಹಿಳೆಯೋರ್ವಳನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.ಸಮೀಪದ ನವಲೂರಿನ ಕರೆವ್ವ ಇರಬಗೇರಿ (58) ಎಂಬುವರನ್ನು ಆಸ್ತಿ ಆಸೆಗಾಗಿ ಅವರ ಸಂಬಂಧಿಕರು ಬೆಳ್ಳಂಬೆಳಗ್ಗೆ ಕಂದಲಿಯಿಂದ ಬರ್ಭರವಾಗಿ ಹೊಡೆದು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಕರೆವ್ವ ಹಲವಾರು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದರು. ಅವರಿಗಿದ್ದ ಇಬ್ಬರು ಮಕ್ಕಳು ಬೇರೆ ಬೇರೆ ಕಾರಣದಿಂದ ಮೃತಪಟ್ಟಿದ್ದರು. ಹೀಗಾಗಿ ತನ್ನ ಸಹೋದರಿ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕರೆವ್ವಗೆ ದೇವರೆಂದರೆ ಸಾಕಷ್ಟು ಭಕ್ತಿ. ನಿತ್ಯ ಬೆಳಗ್ಗೆ ಎಲ್ಲ ದೇವಸ್ಥಾನಗಳಿಗೆ ಹೋಗಿ ದರ್ಶನ ತೆಗೆದುಕೊಂಡು ಬರೋದು ರೂಢಿ. ಮಂಗಳವಾರವೂ ಅದೇ ರೀತಿ ದೇವರಿಗೆ ಹೋದ ಕರೆವ್ವ ಮರಳಿ ಬರಲಿಲ್ಲ. ಕರೆವ್ವಳ ಪತಿಯ ಸಹೋದರರ ಮಕ್ಕಳು ಕೊಂದಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದು, ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಪತಿ ತೀರಿಕೊಂಡ ಬಳಿಕ ಆತನಿಗೆ ಸೇರಿದ್ದ ಎಲ್ಲ ಆಸ್ತಿ ಕರೆವ್ವಳ ಹೆಸರಿಗೆ ವರ್ಗಾವಣೆಯಾಗಿತ್ತು. ಪುಣೆ-ಬೆಂಗಳೂರು ರಸ್ತೆಯ ಬದಿಯಲ್ಲಿ ಆರು ಎಕರೆ ಜಮೀನು ಹಾಗೂ ತೋಟ ಸೇರಿದಂತೆ ಹತ್ತಾರು ಕೋಟಿ ಆಸ್ತಿ ಇತ್ತು. ಇಬ್ಬರು ಮಕ್ಕಳು ತೀರಿ ಹೋಗಿದ್ದರಿಂದ ಸಂಬಂಧಿಕರೊಬ್ಬರ ಮಗನನ್ನು ಕರೆ ತಂದು, ಆತನಿಗೆ ಮದುವೆ ಮಾಡಿಸಿ ಸಾಕುತ್ತಿದ್ದಳು. ಇದು ಆಕೆಯ ಪತಿಯ ಸಹೋದರರು ಹಾಗೂ ಅವರ ಮಕ್ಕಳ ಕಣ್ಣು ಕೆಂಪಾಗಿಸಿತ್ತು. ತಮ್ಮ ಕುಟುಂಬದ ಆಸ್ತಿಯನ್ನು ಕರೆವ್ವ ತನ್ನ ಸಂಬಂಧಿಕರಿಗೆ ಕೊಡುತ್ತಾಳೆ ಎಂದು ಸಿಟ್ಟಾಗಿ ಹಲವಾರು ಬಾರಿ ಜಗಳ ಸಹ ಮಾಡಿದ್ದರು. ಆದರೆ, ಇದಕ್ಕೆ ಜಗ್ಗದ ಕರೆವ್ವ ತನ್ನಷ್ಟಕ್ಕೆ ತಾನಿದ್ದಳು. ಅಲ್ಲದೇ, ಗ್ರಾಮದಲ್ಲಿನ ಅನೇಕ ದೇವಸ್ಥಾನ, ಅಭಿವೃದ್ಧಿ ಕಾರ್ಯಗಳಿಗೆ ದಾನ ಸಹ ಮಾಡಿದ್ದಳು. ಇದನ್ನೆಲ್ಲಾ ಸಹಿಸದೇ ಅವರೇ ಈ ಕೃತ್ಯ ಎಸಗಿದ್ದಾರೆಂದು ಕರೆವ್ವಳ ಸಹೋದರ ಮಾರುತಿ ಆರೋಪಿಸಿದರು.
ಪ್ರಸ್ತುತ ಈ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸಂಬಂಧಿಕರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಇದೇ ವೇಳೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳಲ್ಲಿ ಮೂರನೇ ಕೊಲೆ ನಡೆದಿರುವ ಬಗ್ಗೆಯೂ ಚರ್ಚೆ ಶುರುವಾಗಿದೆ. ಮೊದಲನೇ ಕೊಲೆ ಯುವತಿಯ ವಿಚಾರವಾಗಿ ನಡೆದಿದ್ದರೆ, ಎರಡನೇ ಕೊಲೆ ಕ್ಷುಲ್ಲಕ ಕಾರಣಕ್ಕೆ ನಡೆದಿದೆ. ಮೂರನೇ ದಿನ ನಡೆದ ಕೊಲೆ ಆಸ್ತಿ ವಿಚಾರವಾಗಿ ನಡೆದಿದ್ದು, ಮೂರು ದಿನಗಳಲ್ಲಿ ನಡೆದ ಮೂರು ಕೊಲೆಗಳಿಂದಾಗಿ ಧಾರವಾಡದ ಜನರು ಬೆಚ್ಚಿ ಬಿದ್ದಿದ್ದಾರೆ.