\ಕೇಂದ್ರ ಬಜೆಟ್ ನಿರಾಶಾದಾಯಕ: ರಮಾನಾಥ ರೈ

KannadaprabhaNewsNetwork |  
Published : Feb 02, 2024, 01:02 AM IST
ಹರೀಶ್‌ ಕುಮಾರ್‌ | Kannada Prabha

ಸಾರಾಂಶ

ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ನಿರಾಶಾದಾಯಕವಾಗಿದೆ. ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

ಪ್ರಗತಿ, ಬೆಳವಣಿಗೆ, ಧ್ಯೇಯ, ಆದ್ಯತೆ, ಗಮನ, ಸಹಾಯ, ಬೆಂಬಲ, ಸಹಕಾರ, ಕ್ರಮ, ಕಾರ್ಯಕ್ರಮ, ಮಂತ್ರ ಎಂಬ ಪದಗಳನ್ನು ವಿತ್ತ ಮಂತ್ರಿ ಹೇಳಿದ್ದಾರೆಯೇ ಹೊರತು, ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಈ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ವಲಯಗಳನ್ನು ಕಡೆಗಣಿಸಿದೆ. ವರ್ಗಗಳನ್ನು ನಿರ್ಲಕ್ಷ್ಯ ಮಾಡಿದೆ. ಯುವಕರು, ಅನ್ನದಾತರು, ಬಡವರು, ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ವರ್ಗಕ್ಕೆ ವಿಶೇಷವಾದ ಘೋಷಣೆಗಳನ್ನು ಮಾಡಿಲ್ಲ. ಅಲ್ಲದೆ, ಮೋದಿ ಸರ್ಕಾರದ ಬಜೆಟ್‌ನಲ್ಲಿ ಸಮಗ್ರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಜೆಟ್‌ನಲ್ಲಿ ವಿಶೇಷ ಅನಿಸುವಂಥದ್ದು ಏನೂ ಇಲ್ಲ. ಇದು ಮೋದಿ ಸರ್ಕಾರದ ಅಂತಿಮ ಬಜೆಟ್ ಆಗಲಿದೆ ಎಂದಿದ್ದಾರೆ.

ಪ್ರಗತಿ ಹಿನ್ನಡೆಯ ಸಂಕೇತ: ಕೆ ಹರೀಶ್ ಕುಮಾರ್

ಮಂಗಳೂರು: ದೇಶದ ಬಿಜೆಪಿ ಸರ್ಕಾರ ಹೇಳುತ್ತಿರುವ ದೇಶದ ಅಭಿವೃದ್ಧಿ ಶಕೆ ಕನ್ನಡಿಯೊಳಗಿನ ಗಂಟು ಇದ್ದಂತೆ. ದೇಶದ ಪ್ರಗತಿ ಹಿನ್ನಡೆ ಕಂಡಿರುವ ಈ ಕಾಲಘಟ್ಟದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಥ ರೀತಿಯ ಬಜೆಟ್ ಅಲ್ಲದೆ ಬೇರೇನೂ ಮಂಡಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಶಾಸಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿರುವ ಕೇಂದ್ರ ಸರ್ಕಾರ, ಈ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲ. ಈ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಆದಾಯ ತೆರಿಗೆದಾರರಿಗೆ ಹೇಳುವಂತಹ ಯಾವುದೇ ಘೋಷಣೆಯಿಲ್ಲ. ನಿಜಕ್ಕೂ ನಿರಾಶದಾಯಕ ಬಜೆಟ್ ಇದಾಗಿದ್ದು, ಮುಂದೆ ಆಡಳಿತಕ್ಕೆ ಬರುವ ವಿಶ್ವಾಸ ಬಿಜೆಪಿಯವರಿಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹರೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ