ರಾಜ್ಯ ಬಜೆಟ್‌ - 24: ಮೂಲಸೌಕರ್ಯಕ್ಕೆ ₹2000 ಕೋಟಿ ವೆಚ್ಚ ಗುರಿ

KannadaprabhaNewsNetwork |  
Published : Feb 17, 2024, 01:18 AM ISTUpdated : Feb 17, 2024, 01:01 PM IST
Karnataka Budget

ಸಾರಾಂಶ

ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಆದ್ಯತೆ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಆದ್ಯತೆ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. 

ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮೂಲಸೌಕರ್ಯ ಯೋಜನೆಗಳ ಪ್ರಗತಿ ಮೇಲ್ವಿಚಾರಣೆಗೆ ಹಾಗೂ ಎದುರಾಗುವ ಅಂತರ್‌ ಇಲಾಖಾ ಮತ್ತು ಹಣಕಾಸಿನ ತೊಡಕುಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರತ್ಯೇಕ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದ 320 ಕಿ.ಮೀ. ಉದ್ದದ ಕರಾವಳಿ ತೀರವನ್ನು ಆರ್ಥಿಕ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು. ಬಂದರು, ರೈಲು, ವಿಮಾನ ಸಂಪರ್ಕವನ್ನು ಒದಗಿಸುವ ಮೂಲಕ ಕೆಲವು ವರ್ಷಗಳಲ್ಲಿ ಅಂದಾಜು 20 ಸಾವಿರ ಕೋಟಿ ರು.ಗಳ ಹೂಡಿಕೆಯೊಂದಿಗೆ ಸಮುದ್ರ ಸಾರಿಗೆ, ಸರಕು ಸಾಗಣೆ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುವ ಗುರಿ ಇದೆ. 

ರಾಜ್ಯದಲ್ಲಿ ಜಲಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿಯನ್ನು ಹಾಗೂ ಒಳನಾಡು ಜಲಸಾರಿಗೆ ನಿಯಮಗಳನ್ನು ರೂಪಿಸುವುದಾಗಿ ಘೋಷಿಸಿದ್ದಾರೆ.

ಸಾಗರಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸುಮಾರು 1,017 ಕೋಟಿ ರು. ವೆಚ್ಚದಲ್ಲಿ ಒಟ್ಟು 26 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. 

ಈ ಪೈಕಿ ರಾಜ್ಯದ ಪಾಲು 530 ಕೋಟಿ ರು. ಇರಲಿದೆ. ಇನ್ನೂ 1,145 ಕೋಟಿ ರು. ಮೊತ್ತದ 12 ಕಾಮಗಾರಿಗಳ ವಿಸ್ತೃತ ಯೋಜನಾ ವರದಿಗಳನ್ನು ಕೇಂದ್ರದ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ. 

ಹಳೇ ಮಂಗಳೂರು ಮತ್ತು ಹಂಗಾರಕಟ್ಟೆ ಬಂದರುಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. 

ಈ ವಲಯದಲ್ಲಿ ಇನ್ನೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಲಾಗುವುದು. ಮೂಲಸೌಕರ್ಯ ಅಭಿವೃದ್ದಿ ಇಲಾಖೆಯಡಿಯಲ್ಲಿ ವರದಿಗಳ ತಯಾರಿಕೆಗಾಗಿ ಕರ್ನಾಟಕ ಪ್ರಾಜೆಕ್ಟ್‌ ಡೆವಲಪ್‌ಮೆಂಟ್‌ ಫಂಡ್‌(ಕೆಐಪಿಡಿಎಫ್‌) ಸ್ಥಾಪಿಸಲಾಗಿದ್ದು, ಇದನ್ನು ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸುವುದಾಗಿ ಘೋಷಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರನ್ನು (ಐಸಿಟಿಪಿ) ಅಭಿವೃದ್ಧಿಪಡಿಸಲು ಐಐಟಿ ಮದ್ರಾಸ್ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು. ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು.

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿ ತಯಾರಿಸುವುದಾಗಿ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕೆ 126 ಕೋಟಿ ರು. ಬಿಡುಗಡೆಗೊಳಿಸಿದೆ. 

ಪ್ರಸಕ್ತ ಸಾಲಿನಲ್ಲಿ ಬಾಕಿ 43 ಕೋಟಿ ರು. ಬಿಡುಗಡೆಗೊಳಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು. ವಿಜಯಪುರದಲ್ಲಿ 350 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರವೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 2023-24ನೇ ಸಾಲಿನಲ್ಲಿ 55 ಕೋಟಿ ರು. ಬಿಡುಗಡೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 30 ಕೋಟಿ ರು. ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. 

220 ಕೋಟಿ ರು. ವೆಚ್ಚದ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯ ತೊಡಕುಗಳನ್ನು ನಿವಾರಿಸಿ ಕಾಮಗಾರಿಗಳನ್ನು ಪ್ರಾರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 817 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಗ್ನೇಚರ್ ಬಿಸಿನೆಸ್‌ ಪಾರ್ಕ್‌ ಮುಂದಿನ ದಿನಗಳಲ್ಲಿ 5 ಸಾವಿರ ಕೋಟಿ ರು. ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ಇದೆ. 

ರಾಜ್ಯದಲ್ಲಿ ರೈಲ್ವೆ ಇಲಾಖೆಯೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ 12,147 ಕೋಟಿ ರು. ವೆಚ್ಚದ 9 ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯ ಕಾಮಗಾರಿಗಳು ಹಾಗೂ ಭೂಸ್ವಾಧೀನಕ್ಕಾಗಿ 9,915 ಕೋಟಿ ರು. ರಾಜ್ಯ ಸರ್ಕಾರ ಭರಿಸಲಿದೆ.

ರಾಜ್ಯದ ಮೂಲಸೌಕರ್ಯ ಯೋಜನೆಗಳನ್ನು ಖಾಸಗಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲು ಚಾಲ್ತಿಯಲ್ಲಿರುವ ಮೂಲಸೌಕರ್ಯ ಯೋಜನೆಗಳ ಪಿಪಿಪಿ ನೀತಿ-2018ರ ಮಧ್ಯಂತರ ಪರಿಷ್ಕರಣೆ ಮಾಡಲಾಗುವುದು. 

ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಎಲ್ಲಾ ಪಿಪಿಪಿ ಮಾದರಿಯ ಯೋಜನೆಗಳ ಮಾಹಿತಿ ಸಂಗ್ರಹಣೆ, ಮೇಲ್ವಿಚಾರಣೆ ಮತ್ತು ಪರಿಶೀಲನೆಗಾಗಿ ತಂತ್ರಜ್ಞಾನ ಆಧಾರಿತ ಮಾಹಿತಿ ನಿರ್ವಹಣಾ ವ್ಯವಸ್ಥೆ ಅಳವಡಿಸುವುದಾಗಿ ಹೇಳಿದ್ದಾರೆ.

ರಾಜ್ಯದ ತೆರಿಗೆಯೇತರ ರಾಜಸ್ವ ಸಂಗ್ರಹದ ಸಾಮರ್ಥ್ಯದ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಆಸ್ತಿ ನಗದೀಕರಣದ ಅವಕಾಶಗಳನ್ನು ಗುರುತಿಸಲು ಹಾಗೂ ಈ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ವಿಧಾನವನ್ನು ರೂಪಿಸಲು ತಜ್ಞರ ಸಮಿತಿ ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''