ಈದು: ಕಾಲರ ಜ್ವರ ಪ್ರಕರಣ ಪತ್ತೆ!

KannadaprabhaNewsNetwork |  
Published : Sep 11, 2024, 01:00 AM IST
ಕಾಲರ | Kannada Prabha

ಸಾರಾಂಶ

ಈದು ಗ್ರಾಮದ ಚಾಲಕನೊಬ್ಬ ಜ್ವರ ಉಲ್ಬಣಗೊಂಡಾಗ ಕಾರ್ಕಳದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಆತನಿಗೆ ಕಾಲರ ದೃಢಪಟ್ಟಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಈದುವಿನಲ್ಲಿ ಕಾಲರ ಜ್ವರ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾ ಆರೋಗ್ಯ, ತಾಲೂಕು ಆರೋಗ್ಯ ಅಧಿಕಾರಿಗಳು ಈದುವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈದು ಗ್ರಾಮದ ಚಾಲಕನೊಬ್ಬ ಮಂಗಳೂರು ಸೇರಿದಂತೆ ವಿವಿಧೆಡೆ ಸಂಚರಿಸಿ ಆಹಾರ ಸೇವನೆ ಮಾಡುತ್ತಿದ್ದು, ಸ್ಥಳೀಯ ಕಾರ್ಯಕ್ರಮದಲ್ಲಿಯೀ ಆಹಾರ ಸೇವಿಸಿದ್ದ. ಜ್ವರ ಉಲ್ಬಣಗೊಂಡಾಗ ಕಾರ್ಕಳದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಆತನಿಗೆ ಕಾಲರ ದೃಢಪಟ್ಟಿರುವ ಬಗ್ಗೆ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ರವಾನಿಸಿದ್ದರು.

ತಕ್ಷಣ ಸ್ಪಂದಿಸಿದ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡದ್ ಅವರು ಈದು ಗ್ರಾಮಕ್ಕೆ ಧಾವಿಸಿ ಮನೆಯ ಎಲ್ಲರ ಮಾಹಿತಿ ಪಡೆದು ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ಆದರೆ ಒಂದು ಪ್ರಕರಣ ಮಾತ್ರ ಕಾಲರ ಜ್ವರ ಇರುವುದು ಸಾಬೀತಾಗಿದೆ.

ಹೇಗೆ ಹರಡುತ್ತದೆ?: ಕಾಲರ ರೋಗವು ವೈಬ್ರಿಯೋ ಕಾಲರೇ ಎನ್ನುವ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗವಾಗಿದೆ. ಸಾಂಕ್ರಾಮಿಕವಾಗಿ ಮಾನವನ ದೇಹದ ಸಣ್ಣ ಕರುಳಿಗೆ ಆಗುವ ಸೋಂಕು. ಕಾಲರ ರೋಗವು ಮೊದಲು ರಷ್ಯಾ ದೇಶಕ್ಕೆ ಸುಮಾರು ೧೮೧೭ರಲ್ಲಿ ಹರಡಿ, ಯೂರೋಪಿನ ಅಮೆರಿಕಾ ಬಳಿಕ ವಿಶ್ವಾದ್ಯಂತ ಹರಡಿ ಲಕ್ಷಾಂತರ ಜನರ ಮೃತಪಟ್ಟಿದ್ದರು. ಕೊಳೆತ ತಿಂಡಿ ಪದಾರ್ಥಗಳು, ಕೊಳೆತ ನೀರು, ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದೆ. ಲಕ್ಷಣಗಳು: ಕಾಲರ ರೋಗದಿಂದ ತೀವ್ರ ನಿರ್ಜಲೀಕರಣ ಹಾಗೂ ವಾಂತಿ ಭೇದಿ ಅಸ್ವಸ್ಥತೆ ಕಿರಿಕಿರಿ, ಆಯಾಸ, ಗುಳಿಬಿದ್ದ ಕಣ್ಣುಗಳು, ಒಣ ಬಾಯಿ, ವಿಪರೀತ ಬಾಯಾರಿಕೆ, ಒಣ ಮತ್ತು ಸುಕ್ಕುಗಟ್ಟಿದ ಚರ್ಮ, ಸ್ನಾಯು ಸೆಳೆತ, ಸ್ವಲ್ಪ ಮೂತ್ರ ವಿಸರ್ಜನೆ, ಕಡಿಮೆ ರಕ್ತದೊತ್ತಡ ಮತ್ತು ಅನಿಯಮಿತ ಹೃದಯ ಬಡಿತ, ತೀವ್ರ ನಿರ್ಜಲೀಕರಣ ಉಂಟಾಗಿ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ. ತಡೆಗಟ್ಟುವ ಕ್ರಮಗಳು: ಕಾಲರ ರೋಗ ಸೋಂಕಿತ ವ್ಯಕ್ತಿ ಉಪಯೋಗಿಸಿದ ಹಾಸಿಗೆಗಳನ್ನು ಸರಿಯಾಗಿ ವಿಲೆವಾರಿ ಮಾಡಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವ ಎಲ್ಲ ವಸ್ತುಗಳನ್ನು ಬಿಸಿ ನೀರಿನಲ್ಲಿ ಕ್ಲೋರಿನ್ ಬ್ಲೀಚಿನ ಜೊತೆ ತೊಳೆಯುವುದರಿಂದ ಕ್ರಿಮಿ ಶುದ್ಧೀಕರಿಸಬಹುದು. ಕಾಲರ ರೋಗಿಯ ಅಥವಾ ಅವರ ಬಟ್ಟೆ, ಹಾಸಿಗೆ ಇತ್ಯಾದಿಯನ್ನು ಮುಟ್ಟಿದ ಕೈಗಳನ್ನು ಸ್ವಚ್ಛವಾಗಿ ಕ್ಲೋರಿನ್ಯುಕ್ತ ನೀರಿನಿಂದ ತೊಳೆಯಬೇಕು. ...................

ಎಲ್ಲೆಂದರಲ್ಲಿ ನೈರ್ಮಲ್ಯವಿಲ್ಲದ ಆಹಾರ ಸೇವನೆಯಿಂದ ಕಾಲರ ರೋಗ ಹರಡುತ್ತದೆ. ಈಗಾಗಲೇ ಕಾರ್ಕಳದ ಈದುವಿನಲ್ಲಿ ವರದಿಯಾಗಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಶುದ್ಧ ಆಹಾರ ಸೇವನೆ, ಬಿಸಿ ನೀರನ್ನು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು

- ಈಶ್ವರ್ ಗಡದ್ ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

PREV

Recommended Stories

ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮ
ಹಾಲುಮತ ಸಮಾಜದವರ ಕನಸು ನನಸಾಗುತ್ತಿದೆ