ಪ್ರಾಣಿಗಳನ್ನು ಗೌರವಿಸುವುದಕ್ಕೆ ಈ ನಾಯಿ ಶಾಸನವೇ ಸಾಕ್ಷಿ: ಡಾ.ಕುಮಾರ

KannadaprabhaNewsNetwork |  
Published : Feb 15, 2025, 12:31 AM IST
೧೪ಕೆಎಂಎನ್‌ಡಿ-೫ಮಂಡ್ಯ ಜಿಪಂ ಕಾವೇರಿ ಸಭಾಂಗಣದಲ್ಲಿ ಆತಗೂರು ಕಾಳಿ ಹೆಸರಿನ ನಾಯಿ ಶಾಸನ ಪ್ರತಿಷ್ಠಾಪನಾ ಸಮಾರಂಭದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಹೆಚ್.ಗೋಪಾಲಕೃಷ್ಣೇಗೌಡ ಅವರನ್ನು ಅಭಿನಂದಿಸಿದರು. | Kannada Prabha

ಸಾರಾಂಶ

ಶಾಸನಗಳ ಮೌಲ್ಯದ ಬಗ್ಗೆ ಅನೇಕರಿಗೆ ಅರಿವಿಲ್ಲ, ಶಾಸನಗಳ ಮೌಲ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಶಾಸನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವುಗಳನ್ನು ಸಂರಕ್ಷಿಸಬೇಕು. ಸಾರ್ವಜನಿಕರು ನಮ್ಮ ನೆಲದ ಶಾಸನಗಳನ್ನು ಹೆಮ್ಮೆಯಿಂದ ಕಾಳಜಿಯಿಂದ ಕಾಣುವಂತಾಗಬೇಕು.

ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಶಾಸನಗಳು ಲಭ್ಯ । ‘ಕಾಳಿ’ ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಾಣಿಗಳನ್ನು ಗೌರವದಿಂದ ಕಾಣಬೇಕು ಎನ್ನುವುದಕ್ಕೆ ಈ ಒಂದು ಶಾಸನ ನಿಜಕ್ಕೂ ಸಾಕ್ಷಿಯಾಗಿದೆ. ಶಾಸನಗಳನ್ನು ಒಂದು ಕಲ್ಲು ಎಂದು ಪರಿಗಣಿಸದೆ ಅದರಲ್ಲಿರುವ ಒಳಾರ್ಥವನ್ನು ಅರಿತಾಗ ಅದರ ಮಹತ್ವವೇನೆಂದು ತಿಳಿಯುತ್ತದೆ. ನಮ್ಮ ಪರಂಪರೆ, ಇತಿಹಾಸಗಳಿಗೆ ಸಾಕ್ಷಿಯಾಗಿರುವ ಶಾಸನಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಪ್ರಸಿದ್ಧ ಆತಗೂರು ‘ಕಾಳಿ’ ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಸಮಾರಂಭ ಹಾಗೂ ಕೆರೆ- ಕಟ್ಟೆಗಳ ಅಳಿವು, ಉಳಿವು ಕುರಿತು ಅಧಿಕಾರಿಗಳೊಂದಿಗೆ ಒಂದು ಚಿಂತಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಡ್ಯ ಜಿಲ್ಲೆ ಕಲೆ, ಸಂಸ್ಕೃತಿ ಇತಿಹಾಸದಲ್ಲಿ ಶ್ರೀಮಂತಿಕೆ ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಶಾಸನಗಳು ಲಭ್ಯವಿದ್ದು, ಎಲ್ಲವೂ ಸಹ ನಮ್ಮ ಸಂಸ್ಕೃತಿ, ಇತಿಹಾಸದ ಮಹತ್ವವನ್ನು ತಿಳಿಸಿ ಹೇಳುವ ಶಾಸನಗಳಾಗಿವೆ. ನಾವು ಮುಂದಿನ ಪೀಳಿಗೆಗೆ ಶಾಸನಗಳನ್ನು ಉಳಿಸಿಕೊಡಲು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಕೆರೆಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಗ್ರಾಮಗಳು ಹಾಗೂ ಕೆರೆಗಳಿಗೆ ಅವಿಭಾಜ್ಯ ಸಂಬಂಧವಿದೆ. ಕೆರೆಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ, ಅದರ ಉಳಿವಿಗೆ ನಾವು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿವಳಿಕೆ ಹೇಳಿದರು.

ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ತೆಗೆಯುವುದರಿಂದಲೂ ಕೆರೆಗಳಿಗೆ ಹಾನಿವುಂಟಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಸಾರ್ವಜನಿಕರಿಗೆ ಕೆರೆ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಲೇಖಕ ಹಾಗೂ ಸಂಶೋಧಕ ತೈಲೂರು ವೆಂಕಟಕೃಷ್ಣ ಮಾತನಾಡಿ, ಇತಿಹಾಸದ ವೈಭವವನ್ನು ಸಾರುವ ಅನೇಕ ದೇವಾಲಯಗಳು, ಸ್ಮಾರಕಗಳು, ಶಾಸನಗಳನ್ನು ಸಂರಕ್ಷಣೆ ಮಾಡಬೇಕಿದೆ. ಆತಗೂರು ನಾಯಿ ಶಾಸನವನ್ನು ಅಮೆರಿಕಾದ ಒಂದು ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದಲ್ಲಿ ನೂರು ವರ್ಷಗಳ ಹಿಂದೆಯೇ ಅದರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ ಎಂದರೆ ಇದರ ಮಹತ್ವ ಅರಿತುಕೊಳ್ಳಿ ಎಂದರು.

ಕೆರೆಗಳನ್ನು ಸಂರಕ್ಷಿಸಿಕೊಳ್ಳದೆ ಹೋದರೆ ಮುಂದಿನ ಪೀಳಿಗೆಗೆ ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ, ಕೆರೆ- ಕಟ್ಟೆಗಳನ್ನು ಕನ್ನಡಿಯಂತೆ ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಶಾಸನಗಳ ಮೌಲ್ಯದ ಬಗ್ಗೆ ಅನೇಕರಿಗೆ ಅರಿವಿಲ್ಲ, ಶಾಸನಗಳ ಮೌಲ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಶಾಸನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವುಗಳನ್ನು ಸಂರಕ್ಷಿಸಬೇಕು. ಸಾರ್ವಜನಿಕರು ನಮ್ಮ ನೆಲದ ಶಾಸನಗಳನ್ನು ಹೆಮ್ಮೆಯಿಂದ ಕಾಳಜಿಯಿಂದ ಕಾಣುವಂತಾಗಬೇಕು ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಎಚ್. ಗೋಪಾಲಕೃಷ್ಣೇಗೌಡ ಮಾತನಾಡಿ, ನಗರೀಕರಣದಿಂದ ಕೆರೆ- ಕಟ್ಟೆಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ, ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದ್ದು, ಜನಜೀವನಕ್ಕೆ ಕೆರೆಗಳು ಎಷ್ಟು ಮುಖ್ಯ ಎಂಬುದು ಸಾರ್ವಜನಿಕರು ಅರ್ಥೈಸಿಕೊಳ್ಳಬೇಕು ಹಾಗೂ ಆತಗೂರು ಶಾಸನದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ