ಇದು ಬಡವರು ಸಂಭ್ರಮಿಸುವ ಕಾರ್ಯಕ್ರಮ: ಸಚಿವ ಜಮೀರ್‌

KannadaprabhaNewsNetwork |  
Published : Jan 24, 2026, 03:00 AM IST
ಜಮೀರ್‌ ಅಹ್ಮದ್‌ಖಾನ್‌ | Kannada Prabha

ಸಾರಾಂಶ

ಮನೆಗಳ ಹಸ್ತಾಂತರ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಡಿ.ಕೆ. ಶಿವಕುಮಾರ ಪಾಲ್ಗೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಎಂದಲ್ಲ ಎಂದು ಸಚಿವ ಜಮೀರ್‌ ಅಹಮದ್‌ಖಾನ್‌ ಹೇಳಿದರು.

ಹುಬ್ಬಳ್ಳಿ:

ಇದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಬಡವರು ಸಂಭ್ರಮಿಸುವ ಕಾರ್ಯಕ್ರಮವಾಗಿದ್ದು, ಇದನ್ನು ನೋಡಿ ಬಿಜೆಪಿಯವರು ಅಭಿನಂದಿಸಬೇಕು ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿಸಿದರು.

ನಗರದಲ್ಲಿ ಶುಕ್ರವಾರ ಸಂಜೆ ಕಾರ್ಯಕ್ರಮದ ತಯಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡ ಮನೆಗಳ ಹಸ್ತಾಂತರ ಕಾರ್ಯಕ್ರಮ ಬಡವರ ಕಾರ್ಯಕ್ರಮವೇ ಹೊರತು ರಾಜಕೀಯವಲ್ಲ. ಅನ್ಯ ಕಾರ್ಯಕ್ರಮದ ಹಿನ್ನೆಲೆ ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬರುತ್ತಿಲ್ಲ ಇದು ವೇಳೆ ಸ್ಪಷ್ಟಪಡಿಸಿದರು.

ಶಕ್ತಿ ಪ್ರದರ್ಶನದ ಅವಶ್ಯಕತೆಯಿಲ್ಲ:

ಮನೆಗಳ ಹಸ್ತಾಂತರ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿ.ಕೆ. ಶಿವಕುಮಾರ ಪಾಲ್ಗೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಎಂದಲ್ಲ. ಅವರು ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಕೊಂಡಿರುವುದರಿಂದ ಬರಲು ಆಗುವುದಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ. ಎಲ್ಲರೂ ಅವರವರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮೇಲಾಗಿ ಸಿದ್ದರಾಮಯ್ಯ ರಾಜಕೀಯವಾಗಿ ಬಹಳ ಎತ್ತರಕ್ಕೆ ಬೆಳೆದಿದ್ದು, ಶಕ್ತಿ ಪ್ರದರ್ಶನದ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನರೇಗಾ ವಿಚಾರಕ್ಕಾಗಿ ರಾಜ್ಯಪಾಲರು ಭಾಷಣ ಮಾಡದೇ ಹೋಗಿದ್ದಾರೆ. ಇದನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ನೋಡಿದ್ದೇವೆ. ಮುಂದೊಂದು ದಿನ ನೋಟಿನಲ್ಲಿರುವ ಮಹಾತ್ಮ ಗಾಂಧಿ ಚಿತ್ರವನ್ನು ಕೂಡ ಇವರು ತೆಗೆಯಬಹುದು ಎಂದು ವ್ಯಂಗ್ಯವಾಡಿದರು.

3 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ:

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬರುವುದಾಗಿ ತಿಳಿಸಿದ್ದರು. ಗುರುವಾರ ಅವರ ಕಚೇರಿಯಿಂದ ಮಾಹಿತಿಯನ್ನೂ ಪಡೆದಿದ್ದರು. ಆದರೆ, ಶುಕ್ರವಾರ ಸಂಜೆ ವರೆಗೂ ಅವರ ಬರುವಿಕೆಯ ಸುಳಿವು ಬಂದಿಲ್ಲ. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯಲ್ಲದೇ ಸುತ್ತಮುತ್ತಲಿನ 10ಕ್ಕೂ ಅಧಿಕ ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದರು.

ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮುಖಂಡ ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ:

ಈ ಹಿಂದೆ ಬಿಜೆಪಿ ಅವಧಿಯಲ್ಲಿ ಭೂಮಿಪೂಜೆ ಮಾಡಿದ ಜಾಗದಲ್ಲಿ ಮನೆ ನಿರ್ಮಾಣ ಮಾಡಿ ಕಾಂಗ್ರೆಸ್‌ ಹೆಸರು ಪಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿ ಅವಧಿಯಲ್ಲಿ ಮಾಡದ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ ಎಂಬ ಅಭಿಮಾನವನ್ನು ಬಿಜೆಪಿಯವರು ಇಟ್ಟುಕೊಳ್ಳಲಿ. ಅವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಹಾಗಾಗಿ ಮನೆ ನೀಡಿಲ್ಲ. ಆದರೆ, ನಮಗೆ ಬಡವರ ಬಗ್ಗೆ ಕಾಳಜಿ ಇದ್ದಿದ್ದಕ್ಕೆ ನಾವು 42 ಸಾವಿರ ಮನೆ ನೀಡುತ್ತಿದ್ದೇವೆ ಎಂದರು. ಕಾರ್ಯಕ್ರಮದ ದಿನದಂದು ಬಿಜೆಪಿ ಕಪ್ಪುಬಟ್ಟೆ ಪ್ರದರ್ಶನಕ್ಕೆ ಮುಂದಾಗಿರುವ ಕ್ರಮಕ್ಕೆ ವಾಗ್ದಾಳಿ ನಡೆಸಿದ ಸಚಿವರು, ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತದೆ. ಅವರಿಗೆ ಪ್ರತಿಭಟಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ