ಇದು ಸುಳ್ಳರು-ಸತ್ಯವಂತರ ಚುನಾವಣೆ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Apr 25, 2024 1:08 AM

ಸಾರಾಂಶ

ಬಿಜೆಪಿಯವರು ೨೦೧೪ರ ಚುನಾವಣೆಯಲ್ಲಿ ಆಡಿದ ಭಾಷಣವನ್ನು ಮರು ಕೇಳಿದರೇ ಅವರೇ ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲ.

ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಸಾರ್ವಜನಿಕ ಸಭೆ । ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದ್ದು, ಈ ಹಿಂದೆ ಕಪ್ಪು ಹಣ ತಂದು ಎಲ್ಲರ ಖಾತೆಗೆ ₹೧೫ ಲಕ್ಷ ಹಾಕುತ್ತೇನೆ ಎಂದು ಹೇಳಿ ೧೫ ಪೈಸೆ ಕೂಡ ಹಾಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಪ್ರಚಾರಾರ್ಥ ನಡೆದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯವರು ೨೦೧೪ರ ಚುನಾವಣೆಯಲ್ಲಿ ಆಡಿದ ಭಾಷಣವನ್ನು ಮರು ಕೇಳಿದರೇ ಅವರೇ ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲ. ಕಪ್ಪು ಹಣಕ್ಕೆ ೩ ತಿಂಗಳ ಸಮಯ ನೀಡಿ, ಎಲ್ಲರಿಗೆ ₹೧೫ ಲಕ್ಷ ಹಾಕುತ್ತೇವೆ ಎಂದು ಬರೀ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ. ಬಿಜೆಪಿ ವಾಷಿಂಗ್‌ಮಸಿನ್ ಇಟ್ಟುಕೊಂಡಿದ್ದು, ಬಿಜೆಪಿ ಸೇರಿದಂತೆ ಎಲ್ಲರೂ ಸ್ವಚ್ಛವಾಗುತ್ತಾರೆ ಎಂದರು.

ಈ ಹಿಂದೆ ಸ್ಮಾರ್ಟ್‌ಸಿಟಿ ಮಾಡುತ್ತೇವೆ ಎಂದು ಹೇಳುವ ಮೂಲಕ ಜನರಿಗೆ ಮೋಸ ಮಾಡಿದ್ದು, ಕೇವಲ ೧ ರಿಂದ ೨ ಸ್ಮಾರ್ಟ್‌ಸಿಟಿ ಮಾಡಿರುವುದನ್ನು ತೋರಿಸಿ, ಅಲ್ಲದೇ ಯುವಕರಿಗೆ ಪ್ರತಿ ವರ್ಷ ೨ ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಯುವಕರಿಗೆ ಪಕೋಡ ಮಾಡುವಂತೆ ಹೇಳಿದರು. ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ನಾವು ವಿಧಾನಸಭಾ ಚುನಾವಣೆಯಲ್ಲಿ ೫ ಗ್ಯಾರಂಟಿ ಹೇಳಿದ್ದು, ಅದರಂತೆ ಅಧಿಕಾರ ಗದ್ದುಗೆ ಏರಿದ ತಕ್ಷಣವೇ ಜನರ ಮನೆ ಬಾಗಿಲಿಗೆ ಐದು ಗ್ಯಾರಂಟಿಗಳನ್ನು ತಲುಪಿಸಲಾಗಿದೆ. ನಾವು ಸತ್ಯ ಹೇಳಲು ಬಂದಿದ್ದೇವೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಾಂಗ್ರೆಸ್ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ನರೇಗಾ ಯೋಜನೆ ಜಾರಿಗೊಳಿಸುವ ಮೂಲಕ ಜನರಿಗೆ ಉದ್ಯೋಗ ನೀಡಿದ್ದರು. ನರೇಗಾ ಯೋಜನೆ ಇಲ್ಲದಿದ್ದರೇ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿತ್ತು. ಅಲ್ಲದೇ ಮಾಹಿತಿ ಹಕ್ಕು ಜಾರಿಗೊಳಿಸಿದ್ದು, ಕಾಂಗ್ರೆಸ್. ಅಭಿವೃದ್ಧಿ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಜನರ ಸೇವೆಗೆ ಕಾಂಗ್ರೆಸ್ ಸದಾ ಅಣಿಯಾಗಿರುತ್ತದೆ. ವರ್ಷಕ್ಕೆ ₹55 ಸಾವಿರ ಕೋಟಿ ಕೊಡುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಹಾಗೆ ಉತ್ತಮ ಬಜೆಟ್ ಸಹ ಮಂಡಿಸಿದೆ. ನಾವು ಬಿಜೆಪಿಯವರ ತರಹ ಬರೀ ಸುಳ್ಳು ಆಶ್ವಾಸನೆ ನೀಡುವುದಿಲ್ಲ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ ಮತಯಾಚನೆ ಮಾಡಿದರು. ಯಲಬುರ್ಗಾ-ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ, ಪ್ರಮುಖರಾದ ಖಾಸಿಂಸಾಬ್ ತಳಕಲ್, ವೀರನಗೌಡ ಪೊಪಾ, ಕೆರಿಬಸಪ್ಪ ನಿಡಗುಂದಿ, ಮಂಜುನಾಥ ಕಡೆಮನಿ, ಬಸವಪ್ರಭು ಪಾಟೀಲ್, ಮಹೇಶ ದೊಡ್ಮನಿ, ಅಶೋಕ ತೋಟದ, ಈರಪ್ಪ ಕುಡಗುಂಟಿ ಇತರರಿದ್ದರು.

Share this article