ಖಾಜು ಸಿಂಗೆಗೋಳ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಅರ್ಧಕ್ಕೆ ನಿಂತಿದ್ದು, ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ಘಟಕ ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ.
ತಾಲೂಕಿನ ಮಿರಗಿ ಗ್ರಾಮ, ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ ಹೊಂದಿದೆ. ಸುಮಾರು 4 ಸಾವಿರ ಮತದಾರರನ್ನು ಹೊಂದಿದ್ದು, 9 ಜನ ಗ್ರಾಮ ಪಂಚಾಯತಿ ಸದಸ್ಯ ಸ್ಥಾನ ಹೊಂದಿದೆ. ಗೋಳಸಾರ ಗ್ರಾಮ ಮಿರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ.ಕಸ ವಿಲೆವಾರಿ ಘಟಕ ಪೂರ್ಣಗೊಳ್ಳದೇ ಇರುವುದರಿಂದ ಅದು ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದ್ದು, ಆಸರೆಗಾಗಿ ಎತ್ತು, ದನಗಳನ್ನು ಕಟ್ಟುತ್ತಿದ್ದಾರೆ.
ಘಟಕದಲ್ಲಿ ಕಸ ಸಂಸ್ಕರಣೆ ನಡೆಯದೇ ಕಸ ಗ್ರಾಮದ ಅಗಸಿ ಮುಂದಿನ ಹಳ್ಳದ ಬದಿಯಲ್ಲಿ ಎಸೆಯಲಾಗುತ್ತದೆ. ಇದರಿಂದಾಗಿ ತ್ಯಾಜ್ಯ ವಿಲೆವಾರಿ ವೈಜ್ಞಾನಿಕವಾಗಿ ನಡೆಯದೇ ಸುತ್ತಲಿನ ಹಲವೆಡೆ ರೋಗಭೀತಿ ಉಂಟಾಗಿದೆ.ಕಸವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಕಸದಿಂದ ರಸ ತೆಗೆದು ಲಾಭಮಾಡಿಕೊಳ್ಳುವ ಯೋಜನೆ ಇಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ.
ಗ್ರಾಮದ ಸುತ್ತಲೂ ರಾಶಿಗಟ್ಟಲೇ ಕಸ ಹರಡಿಕೊಂಡಿದೆ. ಗ್ರಾಮದಿಂದ ಸಂಗ್ರಹಿಸಲಾಗುವ ಕಸವನ್ನು ತಂದು ಹಳ್ಳದ ದಂಡೆಯಲ್ಲಿ ಸುರುವುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿದೆ.ತ್ಯಾಜ್ಯದಿಂದ ದುರ್ವಾಸನೆ ಆವರಿಸಿ ಸ್ಥಳೀಯರ ನೆಮ್ಮದಿ ಹಾಳು ಮಾಡುತ್ತಿದೆ.
ಹಳ್ಳ ಹಿಡಿದ ಯೋಜನೆ: ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ₹10 ಲಕ್ಷ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಪೂರ್ಣಗೊಳ್ಳದೆ ಹಳ್ಳಹಿಡಿದಿದೆ. ಗ್ರಾಮದ ರಸ್ತೆಗಳ ಬದಿ ತ್ಯಾಜ್ಯ ತುಂಬಿ ತುಳುಕುತ್ತಿದೆ.
ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕ ಸೇರಿದಂತೆ ವಾಹನ, ತ್ಯಾಜ್ಯ ಸಂಗ್ರಹ ಡಬ್ಬಿಗಳಿಗಾಗಿ ಪಂಚಾಯತ್ ರಾಜ್ ಇಲಾಖೆ 2022-23ರಲ್ಲಿ ಹಣ ಬಿಡುಗಡೆ ಮಾಡಿದ್ದು, ಹೆಚ್ಚಿನ ಅನುದಾನಕ್ಕೆ ನರೇಗಾ ಯೋಜನೆ ಬಳಸಿಕೊಂಡು ಘನ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಹಣ ಬಿಡುಗಡೆ ಮಾಡಿದೆ. ಆದರೆ ತಾಲೂಕಿನ ಮಿರಗಿ ಗ್ರಾಪಂನಲ್ಲಿ ಘಟಕ ನಿರ್ಮಾಣ ಅರ್ಧಕ್ಕೆ ನಿಂತಿದೆ.
-ರಮೇಶ ಕನಮಡಿ, ತಾಪಂ ಮಾಜಿ ಸದಸ್ಯ,ಮಿರಗಿ
ಮಹಾದೇವಪ್ಪ ಏವೂರ, ಇಒ,ತಾಪಂ ಇಂಡಿ