ಕೃಷ್ಣ ಎನ್. ಲಮಾಣಿ ಹಂಪಿ
ಹಂಪಿ ಉತ್ಸವದ ಮೊದಲ ದಿನವಾದ ಶುಕ್ರವಾರವೇ ಜನಸಾಗರ ಹರಿದುಬಂದಿತ್ತು. ಹಂಪಿ ಬೈ ಸ್ಕೈ, ಎತ್ತುಗಳ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ರಂಗೋಲಿ ಸ್ಪರ್ಧೆ, ಪುಸ್ತಕ ಮೇಳ, ಶಿಲ್ಪಕಲೆ, ಚಿತ್ರಕಲೆಗಳ ಪ್ರದರ್ಶನ, ಗಜಶಾಲೆ ಆವರಣದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ಬಗೆ ಬಗೆಯ ರಂಗೋಲಿ ಚಿತ್ತಾರಗಳನ್ನುಸ್ಪರ್ಧಿಗಳು ಬಿಡಿಸಿದರು. ಹೊಸೂರು ಗ್ರಾಮದ 76 ವರ್ಷದ ಹಿರಿಯ ಅಜ್ಜಿ ಬಿ. ಶಾರದಮ್ಮ, ಕಡ್ಡಿರಾಂಪುರದ 12 ವರ್ಷದ ಪೋರಿ ಕೈರವಿ ಕೂಡ ಪಾಲ್ಗೊಂಡು ರಂಗೋಲಿ ಚಿತ್ತಾರ ಬಿಡಿಸಿದ್ದು, ವಿಶೇಷ. ಈ ರಂಗೋಲಿ ಚಿತ್ತಾರಗಳನ್ನು ವಿದೇಶಿ ಪ್ರವಾಸಿಗರು ಕೂಡ ಕಂಡು ಖುಷಿಪಟ್ಟರು. ಹಂಪಿ ಉತ್ಸವ ಬರೀ ವೇದಿಕೆಗಳ ಉತ್ಸವವಲ್ಲ, ಪ್ರತಿಭಾವಂತ ಕಲಾವಿದರಿಗೂ ಅವಕಾಶ ಇದೆ ಎಂಬ ಸಂದೇಶವನ್ನೂ ಉತ್ಸವ ನೀಡಿತು.
ವಿದೇಶಿಗರ ಜತೆ ಚರ್ಚೆ: ಹಂಪಿ ಉತ್ಸವದಲ್ಲಿ ವಸ್ತುಪ್ರದರ್ಶನದಲ್ಲಿ ವಿದೇಶಿ ಪ್ರವಾಸಿಗರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಚರ್ಚಿಸಿ ಅವರಿಂದ ಮಾಹಿತಿಯನ್ನು ಪಡೆದರು. ಹಂಪಿ ಉತ್ಸವದಲ್ಲಿ ಪಾಲ್ಗೊಂಡು ಎಲ್ಲ ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮ ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದರು.ಹಂಪಿ ಉತ್ಸವದ ಮೊದಲ ದಿನವೇ ಈ ಬಾರಿ ಜನರು ತಂಡೋಪತಂಡವಾಗಿ ಆಗಮಿಸಿದರು. ಜಿಲ್ಲಾಡಳಿತದ ನಿರೀಕ್ಷೆಯಂತೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಉತ್ಸವದಲ್ಲಿ ಉತ್ಸಾಹದಿಂದ ಜನರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.
ಹಂಪಿ ಉತ್ಸವದ ವೀಕ್ಷಣೆಗೆ ದೂರದ ಹರಪನಹಳ್ಳಿಯಿಂದ ಬಂದಿದ್ದೇವೆ. ಇಲ್ಲಿ ನೀವು ನೋಡಿದರೆ ಉತ್ಸವದ ವೀಕ್ಷಣೆಗೆ ಒಳಗಡೆ ಬಿಡುತ್ತಿಲ್ಲ. ನಿಮ್ಮ ಧೋರಣೆ ಸರಿಯಲ್ಲ ಎಂದು ಕೆಲ ಮಹಿಳೆಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.ಪುಸ್ತಕಗಳ ಖರೀದಿ: ಹಂಪಿ ಉತ್ಸವದಲ್ಲಿ ಜನರು ಪುಸ್ತಕಗಳು ಹಾಗೂ ತರೇವಾರಿ ವಸ್ತುಗಳನ್ನು ಖರೀದಿ ಮಾಡಿದರು. ಜನರು ಖುಷಿಯಿಂದ ಪುಸ್ತಕಗಳನ್ನು ಖರೀದಿ ಮಾಡುತ್ತಿದ್ದು, ಕಂಡುಬಂತು. ಉತ್ಸವದಲ್ಲಿ ಒಂದೆಡೆ ಶಾಸಕ ಎಚ್.ಆರ್. ಗವಿಯಪ್ಪ ಅವರು ವೈಯಕ್ತಿಕವಾಗಿ ಕೃಷ್ಣ ಬಜಾರ್‌ನಲ್ಲಿ ಊಟದ ವ್ಯವಸ್ಥೆ ಮಾಡಿದ್ದರೂ ಜನರು ಸ್ಟಾಲ್‌ಗಳಿಗೆ ತೆರಳಿ ಬಗೆ ಬಗೆಯ ಊಟ ಸವಿದರು.
ಹಂಪಿ ಉತ್ಸವದಲ್ಲಿ ಕಿಕ್ಕಿರಿದು ಜನರು ಸೇರಿದ್ದರಿಂದ ಮೊದಲ ದಿನವೇ ಉತ್ಸವ ಗರಿಗೆದರಿತು. ಕೊಪ್ಪಳ, ಗಂಗಾವತಿ, ಬಳ್ಳಾರಿ, ಸಂಡೂರು, ವಿಜಯನಗರ ಜಿಲ್ಲೆಯ ಆರೂ ತಾಲೂಕುಗಳಿಂದಲೂ ಜನರು ಆಗಮಿಸಿದ್ದರು. ಹಂಪಿ ಉತ್ಸವ ಬರೀ ಉತ್ಸವಲ್ಲ, ಇದು ಜನೋತ್ಸವ ಎಂಬುದನ್ನು ಉತ್ಸವ ಸಾಬೀತು ಪಡಿಸಿತು.