- ಗುಜರಾತ್ ಹೋರಾಟಗಾರ ಜಿಗ್ನೇಶ್ ಮೇವಾನಿ ವಾಗ್ದಾಳಿ । ಎದ್ದೇಳು ಕರ್ನಾಟಕ ಸಂಘಟನೆಯಿಂದ ಸಂವಿಧಾನ ಸಂರಕ್ಷಕರ ಸಮಾವೇಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಮಾನತೆ, ಸಾಮಾಜಿಕ ನ್ಯಾಯ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ, ಮುಗಿಸಲು ತೀರ್ಮಾನಿಸಿರುವ ನರೇಂದ್ರ ಮೋದಿ, ಆರ್‌ಎಸ್‌ಎಸ್, ಮೋಹನ್ ಭಾಗವತ್‌ರ ಭಾರತ ದೇಶ ಇದಲ್ಲ. ಇದು ಬಸವಣ್ಣ, ಅಂಬೇಡ್ಕರ್, ರವಿದಾಸ್, ಪೆರಿಯಾರ್ ದೇಶ ಎಂದು ಗುಜರಾತ್ ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದರು.ನಗರದ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶನಿವಾರ ಎದ್ದೇಳು ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಂವಿಧಾನವನ್ನು ಮುಗಿಸಲು ಬಂದವರ ವಿರುದ್ಧ ಸಂವಿಧಾನ ಹೋರಾಟದ ಧ್ವಜ ಹಿಡಿದು ಬಂದಿರುವ, ಸಂವಿಧಾನವನ್ನು ಉಳಿಸುವ ತೀರ್ಮಾನ ಮಾಡಿರುವ ನಿಮ್ಮ ಪ್ರಯತ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಎಂದರು.
ಇಡೀ ದೇಶದ ಬಂಡವಾಳಶಾಹಿಗಳು ಇಂದು ಅದಾನಿ, ಅಂಬಾನಿಯಂತೆ ಮೋದಿ ಪಡೆಯ ಬೆನ್ನಿಗೆ ನಿಂತಿದ್ದಾರೆ. ಶ್ರಮಜೀವಿಗಳು, ಬಡವರು, ದಲಿತರು ಇಂತಹವರ ದಾಳಿಗೆ ಗುರಿಯಾಗುತ್ತಿದ್ದಾರೆ. ಮುಂದಿರುವ ದಾರಿ ಒಂದೇ, ನಾವೆಲ್ಲಾ ಸಂವಿಧಾನ ಪ್ರೇಮಿಗಳು, ನಮ್ಮ ನಮ್ಮ ಊರು, ಕೇರಿ, ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ, ಸಂವಿಧಾನದ ಆಶಯಗಳನ್ನು ನಿಜವಾಗಿ ಜನರಿಗೆ ತಲುಪಿಸುವ ಕೆಲಸ ನಾವು, ನೀವೆಲ್ಲರೂ ಮಾಡೋಣ ಎಂದು ಹೇಳಿದರು.
(ಟಾಪ್ ಕೋಟ್)
- ಜಿಗ್ನೇಶ್ ಮೇವಾನಿ, ಯುವ ಹೋರಾಟಗಾರ, ಗುಜರಾತ್