ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಿಂದ ಭಾರೀ ಗಳಿಕೆ

KannadaprabhaNewsNetwork |  
Published : Jan 26, 2026, 03:30 AM IST
lalbagh

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸುತ್ತಿರುವ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಧಿಕ ಟಿಕೆಟ್ ಹಣ ಸಂಗ್ರಹವಾಗುವ ನಿರೀಕ್ಷೆ ತೋಟಗಾರಿಕೆ ಇಲಾಖೆಯದ್ದು.

 ಬೆಂಗಳೂರು :  ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸುತ್ತಿರುವ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಧಿಕ ಟಿಕೆಟ್ ಹಣ ಸಂಗ್ರಹವಾಗುವ ನಿರೀಕ್ಷೆ ತೋಟಗಾರಿಕೆ ಇಲಾಖೆಯದ್ದು.

ಹಲವು ವರ್ಷಗಳಿಂದ ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ 2 ಕೋಟಿ ರು.ಗಳಿಗೂ ಅಧಿಕ ಮೊತ್ತ ಸಂಗ್ರಹವಾಗಿರಲಿಲ್ಲ. ಆದರೆ ಈ ಬಾರಿ ಜ.15ರಿಂದ- 25ರ ಭಾನುವಾರದ ಪ್ರದರ್ಶನದ ಮುಕ್ತಾಯಕ್ಕೆ ಬರೋಬ್ಬರಿ 1.81 ಕೋಟಿ ರು. ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಇಂದು (ಸೋಮವಾರ) 1.50 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆಯಿದ್ದು, ಒಟ್ಟಾರೆಯಾಗಿ 2.50 ಕೋಟಿ ರು.ಗಳಿಗೂ ಹೆಚ್ಚು ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಭಾನುವಾರ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ

ರಜಾದಿನವಾದ ಭಾನುವಾರ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ತೋಟಗಾರಿಕೆ ಇಲಾಖೆ ಮಾಹಿತಿಯಂತೆ 88,977 ಮಂದಿ ವಯಸ್ಕರು, 15,564 ಮಕ್ಕಳು, 10,085 ವಿದ್ಯಾರ್ಥಿಗಳು ಸೇರಿದಂತೆ 1.14 ಲಕ್ಷ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. ಟಿಕೆಟ್‌ ಮಾರಾಟದಿಂದ ಒಂದೇ ದಿನ 46.41 ಲಕ್ಷ ರು. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ಮಾಹಿತಿ ನೀಡಿದರು.

ಈ ಬಾರಿ ವಿಶೇಷವಾಗಿ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಹಾಗೂ ಪ್ರಕೃತಿ ಜೊತೆಗಿನ ಅವರ ನಂಟಿನ ಬಗ್ಗೆ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳ ಮೂಲಕ ನೈಸರ್ಗಿಕವಾಗಿ ಕಟ್ಟಿ ಕೊಡಲಾಗಿದೆ. ಗಾಜಿನ ಮನೆಯೊಳಗೆ ಹೂಗಳಿಂದ ನಿರ್ಮಿಸಲಾಗಿ­ರುವ ಪೂರ್ಣಚಂದ್ರ ತೇಜಸ್ವಿಯವರ ನೆಚ್ಚಿನ ಪರಿಸರ, ಬೆಟ್ಟ-ಗುಡ್ಡ, ನೀರಿನ ಝರಿ, ಮಂತ್ರ ಮಾಂಗಲ್ಯದ ಚಿತ್ರಣ, ನಿರುತ್ತರ ಮನೆ, ಕ್ಯಾಮೆರಾದೊಂದಿಗೆ ನಿಂತಿರುವ ತೇಜಸ್ವಿಯನ್ನು ವೀಕ್ಷಿಸಿದ ಜನರು ಫೋಟೊಗಳನ್ನು ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು.

ನೋಡುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದುದರಿಂದ ಗಾಜಿನ ಮನೆ ಪ್ರವೇಶಿಸಲು ಉದ್ದನೆಯ ಸರತಿ ಸಾಲು ಕಂಡುಬಂತು. ಹೀಗಾಗಿ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ಗಳ ಬಳಿಯೂ ಜನಸಾಗರವೇ ನೆರೆದಿತ್ತು. ಹೀಗಾಗಿ ಸರತಿ ಸಾಲು ರಸ್ತೆ ತಲುಪಿತ್ತು. ಇದರಿಂದಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಲಾಲ್ ಬಾಗ್ ಸುತ್ತಮುತ್ತಲಿನ ರಸ್ತೆಗಳು ಇಡೀ ದಿನ ಸಂಚಾರ ದಟ್ಟಣೆಯಿಂದ ಕೂಡಿದ್ದವು. ಸಂಜೆ ವೇಳೆಗೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. 

6.50 ಲಕ್ಷ ಜನರಿಂದ ವೀಕ್ಷಣೆ

ಜ.15 ರಿಂದ 25 ರವರೆಗೆ ಶಾಲಾ ಮಕ್ಕಳು ಸೇರಿದಂತೆ 6.50 ಲಕ್ಷ ಮಂದಿ ಆಗಮಿಸಿದ್ದು 1.81 ಕೋಟಿ ರು. ಸಂಗ್ರಹವಾಗಿದೆ. ಸೋಮವಾರ ಪುಷ್ಪ ಪ್ರದರ್ಶನದ ಅಂತಿಮ ದಿನವಾಗಿದ್ದು ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ.

-ಎಚ್‌.ಟಿ.ಬಾಲಕೃಷ್ಣ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ