ಕನ್ನಡಪ್ರಭ ವಾರ್ತೆ ಹಾಸನ
ಬಿ.ಶಿವರಾಂರಿಗೆ ಬಿಜೆಪಿ ಜತೆ ಸಂಬಂಧ ಇರುವ ಹಿನ್ನೆಲೆ ಜಿಲ್ಲಾ ಸಚಿವರನ್ನು ಬ್ಲಾಕ್ ಮೇಲ್ ಮಾಡಿ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಸ್ನೇಹವು ಶಿವರಾಂ ಬಾಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡಿಸುತ್ತಿದೆ. ಶಿವರಾಂ ಸಾಮಾನ್ಯ ಕಾರ್ಯಕರ್ತ ಅಲ್ಲ, ಅವರೊಬ್ಬ ಹಿರಿಯರು.
ಅವರ ಬಗ್ಗೆ ಗೌರವವಿದೆ. ನಾಲ್ಕು ಬಾರಿ ಶಾಸಕರು, ಒಮ್ಮೆ ಮಂತ್ರಿಯಾಗಿದ್ದವರು. ಇಂತವರು ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದಾಗ ಪಕ್ಷದ ಗೆಲುವಿಗೆ ತಯಾರಾಗಬೇಕೇ ಹೊರತು, ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದರು.
ಅವರೆಂದೂ ಹಿಂದೆ ಮಾಧ್ಯಮಗಳ ಮುಂದೆ ಹೆಚ್ಚು ಬಂದವರಲ್ಲ. ಅಂಥವರೀಗ ಸಚಿವರು, ಶಾಸಕರ ಬಗ್ಗೆ ಮಾತನಾಡುತ್ತಿರುವುದು ಅನುಮಾನ ಹುಟ್ಟಿಸುತ್ತಿದೆ.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಉಸ್ತುವಾರಿ ಸಚಿವರನ್ನು ಬ್ಲಾಕ್ ಮೇಲ್ ಮಾಡಿ ಹಿಡಿದಿಟ್ಟುಕೊಳ್ಳಲೋ ಅಥವಾ ನನಗೆ ಟಿಕೆಟ್ ಸಿಗಲ್ಲ ಅಂತಾನೋ ಈ ರೀತಿ ಮಾಡುತ್ತಿದ್ದಾರೆ, ರಾತ್ರಿಯೆಲ್ಲಾ ನೀತಿ ಹೇಳಿ ಬೆಳಗ್ಗೆ ಏನೋ ಮಾಡಿದ್ರು ಎನ್ನುವಂತೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಅನಿಸುತ್ತಿದೆ ಎಂದು ಲೇವಡಿ ಮಾಡಿದರು.
ಶಿವರಾಂ ಅವರ ಬಗ್ಗೆ ಜನ ಬೇರೆ ಬೇರೆ ರೀತಿ ಮಾತನಾಡುತ್ತಿದ್ದಾರೆ. ಏಕಂದರೆ ರಾಜಣ್ಣ ಇವರ ವಿರುದ್ಧ ಮಾತನಾಡಿಲ್ಲ. ಪ್ರೆಸ್ ಮೀಟ್ ಮಾಡಿಲ್ಲ.
ಆದರೂ ಇವರೇಕೆ ಅರಸೀಕೆರೆಗೆ ಹೋಗಿ ಶಿವಲಿಂಗೇಗೌಡರೇ ಅಭ್ಯರ್ಥಿಯಾಗಲಿ ಎಂದರು? ಶಿವಲಿಂಗೇಗೌಡರು ಅರ್ಜಿ ಹಾಕಿದ್ದಾರಾ? ಎಂದು ಪ್ರಶ್ನಿಸಿದರು.
ಹಿರಿಯರಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಿಲ್ಲ,ಇವರು ಮಂತ್ರಿಗಳು ನೀತಿಗೆಟ್ಟವರು ಅಂದಿದ್ದು ಸರಿಯೇ? ಗೊಂದಲ, ಆರೋಪ ಶುರುವಾಗಿದ್ದು ಶಿವರಾಂ ಅವರಿಂದಲೇ, ಇನ್ನೂ ಕಾಲ ಮಿಂಚಿಲ್ಲ.
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ಮಹೇಶ್ ಮನವಿ ಮಾಡಿದರು.
ಅವರಿಗೆ ಬಿಜೆಪಿ ನೆಂಟು ಜಾಸ್ತಿ ಇದೆ, ಯಡಿಯೂರಪ್ಪನವರು ಕರೆದಿದ್ದರು ಎಂದು ಅವರೇ ಹೇಳಿದ್ದರು. ಹಾಗಾಗಿ ಶಿವರಾಂ ನಡೆಯ ಬಗ್ಗೆ ಜನರಂತೆ ನನಗೂ ಸಂಶಯ ಬಂದಿದೆ ಎಂದು ತಿಳಿಸಿದರು.
ನಾವೇ ಮೀಟಿಂಗ್ ಕರೆಯದೆ, ಸಚಿವರ ಮೇಲೆ ಆಪಾದನೆ ಮಾಡುವುದು ಸಲ್ಲದು ಎಂದ ಮಹೇಶ್, ಶಿವರಾಂ ಅವರಿಗೆ ಬೇಗ ಒಳ್ಳೆಯ ಬುದ್ಧಿ ಬರಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಡಾಕಡಿ ಪೀರ್ ಸಾಬ್, ಚಂದು, ನಯಾಜ್ ಮತ್ತಿತರರಿದ್ದರು.