ಗಮನ ಸೆಳೆಯುತ್ತಿದೆ ಈ ವಸ್ತು ಸಂಗ್ರಹಾಲಯ!

KannadaprabhaNewsNetwork |  
Published : May 20, 2026, 02:45 AM IST
ಹತ್ತಾರು ಮಾದರಿಯ ಬೈನಾಲಕೂಲರ ಮತ್ತು ಕ್ಯಾಮರಾಗಳು | Kannada Prabha

ಸಾರಾಂಶ

ರಬಕವಿ ನಗರದ ಕೃಷ್ಣಾ ನದಿ ರಸ್ತೆಯಲ್ಲಿನ ಬಸವರಾಜ ದಲಾಲ ಪರಿವಾರದವರ ಫಾರ್ಮಹೌಸ್‌ನಲ್ಲಿ ನಮ್ಮ ಪೂರ್ವಜರು ಬಳಸಿದ ಆಯಾ ಕಾಲಘಟ್ಟದ ಅನೇಕ ಅಪರೂಪದ ವಸ್ತುಗಳ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಅಪರೂಪದ ವಸ್ತುಗಳನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರದ ಕೊನೆಯ ದಿನವಾದ ಶನಿವಾರ ಮತ್ತು ಭಾನುವಾರ ಜನರು ಕಿಕ್ಕಿರಿದು ಸೇರುತ್ತಾರೆ.

ಶಿವಾನಂದ ಪಿ. ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ ನಗರದ ಕೃಷ್ಣಾ ನದಿ ರಸ್ತೆಯಲ್ಲಿನ ಬಸವರಾಜ ದಲಾಲ ಪರಿವಾರದವರ ಫಾರ್ಮಹೌಸ್‌ನಲ್ಲಿ ನಮ್ಮ ಪೂರ್ವಜರು ಬಳಸಿದ ಆಯಾ ಕಾಲಘಟ್ಟದ ಅನೇಕ ಅಪರೂಪದ ವಸ್ತುಗಳ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಅಪರೂಪದ ವಸ್ತುಗಳನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರದ ಕೊನೆಯ ದಿನವಾದ ಶನಿವಾರ ಮತ್ತು ಭಾನುವಾರ ಜನರು ಕಿಕ್ಕಿರಿದು ಸೇರುತ್ತಾರೆ.

ವಸ್ತು ಸಂಗ್ರಹಾಲಯದಲ್ಲಿ ಯಾವ ವಸ್ತುಗಳಿವೆ?: ಈ ವಸ್ತು ಸಂಗ್ರಹಾಲಯದಲ್ಲಿ ಹಳೆ ಕಾಲದ ಲಾಟೀನ್‌ಗಳು, ರೇಡಿಯೋಗಳು, ಕ್ಯಾಸೆಟ್, ಟೆಲಿಫೋನ್‌ಗಳು, ಅಮಿತಾಬ್ ಬಚ್ಚನ್, ವಿಜಯ ಮಲ್ಯ, ರಜನೀಕಾಂತ ಅವರು ಬಳಸಿದ ಹಳೆ ಕಾರುಗಳು, ಆಟಿಕೆ ಸಾಮಾನುಗಳು, ನೂರಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕ್ಯಾಮೆರಾಗಳು, ರಾಜಮಹಾರಾಜರು ಬಳಸಿದ ತಲವಾರಗಳು, ವಿದೇಶಿ ಕೀಲಿಗಳು, ಕಾಲಾನುಕ್ರಮದಲ್ಲಿನ ಟೈಪ್‌ರೈಟಿಂಗ್‌ ಮಷಿನ್, ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳು ಹೀಗೆ ಹತ್ತು ಹಲವು ಮಾದರಿಯ ಇತಿಹಾಸ ಸಾರುವ ಮುಂದಿನ ಪೀಳಿಗೆಗೆ ಪರಿಚಯಾತ್ಮಕವಾಗಿರುವ ವಸ್ತು ಸಂಗ್ರಹಾಲಯ ನೋಡುಗರನ್ನು ಆಕರ್ಷಿಸುತ್ತಿದೆ.

ಸಂಸ್ಕೃತಿಯ ಪರಿಚಯ, ವಿನಿಮಯ ಮತ್ತು ವಸ್ತು ಸಂಗ್ರಹಾಲಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಬಸವರಾಜ ದಲಾಲ. ಒಂದು ಎಕರೆ ತೋಟದ ಮೈದಾನದಲ್ಲಿ ಅನೇಕ ತೆಂಗಿನ ಮರಗಳು, ವಿವಿಧ ರೀತಿಯ ಹೂವುಗಳನ್ನು ನೆಟ್ಟಿದ್ದೇವೆ. ಇತಿಹಾಸದ ಅವಶೇಷಗಳನ್ನು ಸಂರಕ್ಷಿಸುವ, ಅಧ್ಯಯನ ಮಾಡುವ ಮತ್ತು ಪ್ರದರ್ಶಿಸುವ ಸಂಸ್ಥೆಗಳಾಗಿ ವಸ್ತು ಸಂಗ್ರಹಾಲಯಗಳ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ ಎನ್ನುತ್ತಾರೆ.

ಕರ್ನಾಟಕದಲ್ಲಿ ವಸ್ತುಸಂಗ್ರಹಾಲಯ ದಿನಾಚರಣೆ ದಿನ ಪುರಾತತ್ವ ಇಲಾಖೆ ವಿವಿಧ ಕಾರ್ಯಕ್ರಮ (ಉದಾ: ಮ್ಯೂಸಿಯಮ್ಸ್ ಆನ್ ವೀಲ್ಸ್) ಆಯೋಜಿಸುತ್ತದೆ. ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳ ಪ್ರದರ್ಶನವಲ್ಲ. ಅವು ನಮ್ಮ ಇತಿಹಾಸದ ರಾಯಭಾರಿಗಳಾಗಿವೆ. ವಸ್ತು ಸಂಗ್ರಹಾಲಯ ಸಾಂಸ್ಕೃತಿಕ, ವೈಜ್ಞಾನಿಕ, ಚಾರಿತ್ರಿಕ ಅಥವಾ ಅಲಂಕಾರಿಕ ಮೌಲ್ಯವುಳ್ಳ ವಸ್ತುಗಳನ್ನು ಸಂಗ್ರಹಿಸುವ, ರಕ್ಷಿಸುವ, ಅಧ್ಯಯನ ಮಾಡುವ, ಪ್ರದರ್ಶನ. ಈ ಹಿನ್ನೆಲೆಯಲ್ಲಿ ಅವಶೇಷಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಇಡುವಲ್ಲಿ ವಸ್ತು ಸಂಗ್ರಹಾಲಯಗಳು ವರದಾನವಾಗಿವೆ. ಯುರೋಪಿಯನ್ನರು ವಸ್ತು ಸಂಗ್ರಹಾಲಯದತ್ತ ಹೆಚ್ಚು ಗಮನ ಹರಿಸುತ್ತಿದ್ದರು ಎನ್ನುತ್ತಾರೆ ಬಸವರಾಜ.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಈ ಸ್ಥಳವನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ಅನೇಕ ಬಾರಿ ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರಿಗೆ ಒಂದು ಉತ್ತಮವಾದ ಕೊಠಡಿ ಕೂಡ ನಿರ್ಮಿಸಿದ್ದೆವು, ಅವರು ಬಳಸಿದ ಈ ಕೊಠಡಿಯನ್ನು ಇಂದಿಗೂ ನಾವು ದೇವಾಲಯದಂತೆ ಬಳಸುತ್ತೇವೆ ಎನ್ನುತ್ತಾರೆ ಇವರು.

ಒಟ್ಟಾರೆ ಸುಂದರ ಪರಿಸರದ ವಾತಾವರಣದಲ್ಲಿ ಕೃಷ್ಣಾ ನದಿ ರಸ್ತೆ ಬದಿಯಲ್ಲಿರುವ ಈ ಫಾರ್ಮಹೌಸ್ ನೋಡುಗರಿಗೆ ಒಂದು ಭೂಮಿ ಮೇಲಿನ ಸ್ವರ್ಗದಂತೆ ಅನಿಸಿದರೆ, ಇತಿಹಾಸ ಅರಸುವವವರಿಗೆ ನಮ್ಮ ಪೂರ್ವಜರು ಬಳಸುತ್ತಿದ್ದ ಅಗತ್ಯ ವಸ್ತುಗಳು, ಕ್ಯಾಮೆರಾಗಳು, ವಿವಿಧ ಪ್ರಕಾರದ ದೀಪಗಳು, ಭಿನ್ನ ಪ್ರದೇಶಗಳ ಚಿಣ್ಣರ ಪ್ರಾಚೀನ ಆಟಿಕೆಗಳು, ಕಾರುಗಳು ಸೇರಿ ಅನೇಕ ವಸ್ತುಗಳು ನೋಡುಗರ ಆಸಕ್ತಿ ಕೆರಳಿಸುತ್ತಿವೆ.

ಇದನ್ನು ನೋಡಲು ನಾಡಿನ ಅನೇಕ ಶ್ರೀಗಳು, ರಾಜಕೀಯ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದು, ಉಚಿತ ಪ್ರದರ್ಶನಕ್ಕೆ ದಲಾಲ್ ಸಹೋದರರು ವ್ಯವಸ್ಥೆಗೊಳಿಸಿದ್ದಾರೆ.

ಹಳೆಯ ಕಾಲದ ವಸ್ತುಗಳ ಸಂಗ್ರಹ, ಹಳೆಯ ಹಾಗೂ ಹೊಸ ಮಾದರಿಯ ಕಾರು ಸಂಗ್ರಹ ಮಾಡಿದ್ದೇವೆ. ವಸ್ತುಗಳನ್ನು ಸಂಗ್ರಹಿಸುವುದು ನನಗೆ ತೃಪ್ತಿದಾಯಕ ಕೆಲಸ. ಜೊತೆಗೆ ಆಯಾ ಕಾಲಘಟ್ಟದ ವಸ್ತುಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ನಮ್ಮ ಶ್ರಮ ಸಾರ್ಥಕಗೊಂಡರೆ ಅದೇ ನಮಗೆ ತೃಪ್ತಿ.

- ಬಸವರಾಜ ದಲಾಲ ವಸ್ತು ಸಂಗ್ರಹಾಲಯ ಮಾಲೀಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಶಕ್ತಿಗೆ ಗಾಂಧಿ ಚಿಂತನೆಗಳೇ ದಾರಿ ತೋರಲಿವೆ
ಜಮಖಂಡಿ ಕ್ಷೇತ್ರದ 23 ಗ್ರಾಮಗಳಲ್ಲಿ ನೀರಿನ ಸಮಸ್ಯೆ:ಶಾಸಕ ಜಗದೀಶ ಗುಡಗುಂಟಿ