ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಕ್ರೇಬೈಲು ಆನೆಗಳಿಗೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ಮೂರು ಆನೆಗಳಿಗೆ ತಾಲೀಮು ಕೂಡ ಶುರು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾವನ್ನು ಕಳೆದ ಬಾರಿಯಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಸರಾ ಆಚರಣೆ ಹಿನ್ನೆಲೆ ಸರ್ಕಾರಕ್ಕೆ ₹1.5 ಕೋಟಿ ಅನುದಾನ ಕೋರಿ ಮನವಿ ಮಾಡಲಾಗಿದೆ. ಕಳೆದ ಬಾರಿ ಸರ್ಕಾರ ನೀಡಿದ್ದ ₹1 ಕೋಟಿ ಅನುದಾನ ಜೊತೆ ಪಾಲಿಕೆಯಿಂದ ₹1.63 ಕೋಟಿ ಖರ್ಚು ಸೇರಿಸಿ ಒಟ್ಟು ₹2.63 ಕೋಟಿ ರು. ವೆಚ್ಚದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಸರ್ಕಾರ ಎಷ್ಟು ಅನುದಾನ ಕೊಡುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಪಾಲಿಕೆಯಿಂದ ₹2 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಬಂದರೆ ಇನ್ನೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ದಸರಾ, ಯೋಗದಸರಾ, ಆಹಾರ ದಸರಾ, ರಂಗದಸರಾ, ಚಲನಚಿತ್ರ ದಸರಾ, ರೈತ ದಸರಾ, ಪರಿಸರ ದಸರಾ, ಮಹಿಳಾ ದಸರಾ, ಕಲಾದಸರಾ ಆಯೋಜಿಸಿದ್ದು, ಈ ಬಾರಿ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾವನ್ನು ಅ.20ರಂದು ಹಮ್ಮಿಕೊಳ್ಳಲಾಗಿದೆ ಎಂದರು. ಆನೆಗಳಿಗೆ ಆಹ್ವಾನ: ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಕ್ರೇಬೈಲು ಆನೆಗಳಿಗೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ಮೂರು ಆನೆಗಳಿಗೆ ತಾಲೀಮು ಕೂಡ ಶುರುವಾಗಿದೆ. ಅ.20ರಂದು ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಆನೆಗಳ ತಂಡಕ್ಕೆ ಸ್ವಾಗತಿಸಲಾಗುವುದು. ಅನಂತರ ಮೂರು ದಿನಗಳ ಕಾಲ ನಗರದಲ್ಲಿ ಆನೆಗಳ ತಾಲೀಮು ನಡೆಯಲಿದೆ. ಈ ಬಾರಿ ಸಾಗರ, ನೇತ್ರಾವತಿ, ಹೇಮಾವತಿ ಆನೆಗಳು ಅಂಬಾರಿ ಮೆರವಣಿಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು. ಈ ಬಾರಿ ಚಾಮುಂಡೇಶ್ವರಿಗೆ ಸೊಂಟದ ಪಟ್ಟಿ: ದಸರಾ ಹಬ್ಬ ಅಂಗವಾಗಿ ಪ್ರತಿ ವರ್ಷ ಚಾಮುಂಡೇಶ್ವರಿ ಬೆಳ್ಳಿಯ ವಿಗ್ರಹಕ್ಕೆ ಚಿನ್ನದ ಆಭರಣ ತೊಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಈ ಬಾರಿ ಸೊಂಟದ ಪಟ್ಟಿ ಹಾಕಲಾಗುತ್ತಿದೆ. ಈ ಬಾರಿ ಶಿವಪ್ಪ ನಾಯಕ ಅರಮನೆಯಲ್ಲಿ ಕಲಾ ದಸರಾ ನಡೆಯುತ್ತಿದೆ. ಇದು ಈ ವರ್ಷದ ಆಕರ್ಷಣೆಯಾಗಿದೆ. ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ. ಅಂಬೇಡ್ಕರ್ ಭವನ, ಸುವರ್ಣ ಸಂಸ್ಕೃತಿ ಭವನಗಳಲ್ಲೂ ಹಲವು ಕಾರ್ಮಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಅ.15ಕ್ಕೆ ದಸರಾ ಉದ್ಘಾಟನೆ: ಅ.15ರಿಂದ 24ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2023ರನ್ನು ವೈಭವದಿಂದ ನಡೆಯಲಿದ್ದು, ಅ.15ರ ಬೆಳಗ್ಗೆ 11 ಗಂಟೆಗೆ ಕೋಟೆ ರಸ್ತೆಯ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾತಿ ವೈಜಯಂತಿ ಕಾಶಿ ಅವರು ದಸರಾ ಉದ್ಘಾಟಿಸಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಮೇಯರ್ ಎಸ್.ಶಿವಕುಮಾರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ಸಚಿವ ಡಿ.ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ, ವಿಧಾನ ಪರಿಷತ್ತು ಸದಸ್ಯರಾದ ಎಸ್. ರುದ್ರೇಗೌಡ, ಎಸ್.ಎಲ್. ಭೋಜೇಗೌಡ, ಭಾರತೀಶೆಟ್ಟಿ, ಡಿ.ಎಸ್. ಅರುಣ್, ಮಹಾನಗರ ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ವಿಪಕ್ಷ ನಾಯಕಿ ಮೆಹಕ್ ಷರೀಫ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅ.24ರಂದು ಮಧ್ಯಾಹ್ನ 2-30ಕ್ಕೆ ಶಿವಪ್ಪ ನಾಯಕ ಅರಮನೆ ಆವರಣದಿಂದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ದೇವಾನುದೇವತೆಗಳ ಉತ್ಸವ ಮೂರ್ತಿಗಳು ಸಾಗಲಿವೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಆಯಕ್ತ ಕೆ.ಮಾಯಣ್ಣ ಗೌಡ ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಸದಸ್ಯರಾದ ಎಸ್. ಜ್ಞಾನೇಶ್ವರ್, ಇ.ವಿಶ್ವಾಸ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಸುವರ್ಣಾ ಶಂಕರ್, ಅನಿತಾ ರವಿಶಂಕರ್, ಮಂಜುಳಾ ಶಿವಣ್ಣ, ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ವಿಶ್ವನಾಥ್, ಪ್ರಭಾಕರ್, ಧೀರರಾಜ್ ಹೊನ್ನವಿಲೆ ಮತ್ತಿತರರು ಇದ್ದರು. - - - ಬಾಕ್ಸ್ ಬನ್ನಿ, ರಾವಣದಹನ ಅಲಂಕೃತ ಚಾಮುಂಡಿದೇವಿ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರುವ ಆನೆಗಳಾದ ಸಾಗರ್, ನೇತ್ರಾವತಿ, ಹೇಮಾವತಿ ಇವರೊಂದಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಮಂಗಳವಾದ್ಯ, ನಂದಿಧ್ವಜ ಕುಣಿತ, ಸಮಾಳವಾದ್ಯ, ವೀರಗಾಸೆ, ಚಂಡ ಮದ್ದಳೆ, ಯಕ್ಷಗಾನ, ಗೊಂಬೆಗಳ ಕುಣಿತ, ಕೀಲು ಕುದುರೆ, ಮಹಿಳಾ ಡೊಳ್ಳು ಕುಣಿತ, ಹುಲಿವೇಷ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ಅಲ್ಲಿ ಸಂಜೆ 6.30ಕ್ಕೆ ತಹಸೀಲ್ದಾರ್ ಆರ್.ಪ್ರದೀಪ್ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬನ್ನಿ ಮುಡಿದ ನಂತರ ಆಕರ್ಷಕ ಪಟಾಕಿ ಸಿಡಿಮದ್ದು ರಾವಣದಹನ ನಡೆಯಲಿದೆ ಎಂದು ಶಾಸಕರು ವಿವರಿಸಿದರು. - - - -12ಎಸ್‌ಎಂಜಿಕೆಪಿ01: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.