ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಕೇಂದ್ರವಾಗಿರುವಂತೆ 2013 ರಲ್ಲೇ ಘೋಷಣೆಯಾಗಿರುವ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸತತ 5ನೇ ಬಾರಿಗೆ 1 ಸಾವಿರ ರುಪಾಯಿ ಅನುದಾನ ಮೀಸಲಿಡುತ್ತ ಹೊರಟಿದೆ.
ಸಾವಿರ ಕೋಟಿ ರುಪಾಯಿ ಯೋಜನೆಗೆ ವಾರ್ಷಿಕ ಬಜೆಟ್‌ನಲ್ಲಿ 1 ಸಾವಿರ ರುಪಾಯಿ ಹಣ ಮೀಸಲಿಡೋದು ಯಾವ ಪುರುಷಾರ್ಥಕ್ಕಾಗಿ? ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.ಪ್ರಸ್ತುತ ಯೋಜನೆ ಕಾರ್ಯಸಾಧುವಲ್ಲ ಎಂದು ಹೇಳುತ್ತ ಗುಲ್ಲೆಬ್ಬಿಸಿದ್ದ ಕೇಂದ್ರ ಸರ್ಕಾರ ಇದೀಗ ಯೋಜನೆ ಕೈಬಿಟ್ಟರೆ ಅದೆಲ್ಲಿ ಕಲಬುರಗಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗುವುದೋ ಎಂದು ಯೋಚಿಸಿ, ಸಾಯುವ ಕಾಲದಲ್ಲಿರುವವರಿಗೆ ಗುಟುಕು ಗುಟುಕು ನೀರು ಹಾಕುವಂತೆ ಯೋಜನೆಯನ್ನ ಹಾಗೇ ತಳ್ಳಿಕೊಂಡು ಹೊರಟಿರೋದು ಜನರನ್ನು ಕೆರಳಿಸಿದೆ.
ಕಲಬುರಗಿಯಲ್ಲಿ ಈಗಾಗಲೇ 20 ಎಕರೆ ಭೂಮಿ ನಿಗದಿಪಡಿಸಲಾಗಿದೆ. ಇಲ್ಲಿ 50 ಲಕ್ಷ ವೆಚ್ಚ ಮಾಡಿ ಬೇಲಿ ಸಹ ಹಾಕಲಾಗಿದೆ. ಆದರೆ ಯೋಜನೆಗೆ ಅಗತ್ಯ ಹಣಕಾಸು ಅನುದಾನ ಮೀಸಲಿಡದೆ, ಚಿಲ್ಲರೆ ಕಾಸು ಇಟ್ಟಲ್ಲಿ ಯೋಜನೆ ಪೂರ್ಣ ಆಗೋದು ಯಾವಾಗ? ಎಂದು ಕಲಬುರಗಿ ನಿವಾಸಿ ರೇಲ್ವೆ ಬಳಕೆದಾರರ ಸಂಘದ ಪ್ರತಿನಿಧಿ ಆನಂದ ದೇಶಪಾಂಡೆ ಕನ್ನಡಪ್ರಭ ಜೊತೆ ಮಾತನಾಡುತ್ತ ಲೇವಡಿ ಮಾಡಿದ್ದಾರೆ.ಕಲಬುರಗಿ ವಿಭಾಗೀಯ ಕಚೇರಿ ಕೇಂದ್ರಕ್ಕೆ ಬೇಡದ ಕೂಸುರೇಲ್ವೆ ವಿಭಾಗೀಯ ಕಚೇರಿ ಕಲಬುರಗಿಯಲ್ಲಿ ಆಗಲೇಬೇಕು ಎಂದು ಎಚ್‌ಸಿ ಸರೀನ್ ಕಮೀಟಿ ತನ್ನ ವರದಿಯಲ್ಲಿ ಹೇಳಿತ್ತು. ಈ ಸಮಿತಿಯ ವರದಿಯಂತೆಯೇ ಅದಾಗಲೇ ಹುಬ್ಬಳ್ಳಿಯಲ್ಲಿ ನೈರುತ್ಯ ರೇಲ್ವೆಯಾಗಿದೆ. ಆದರೆ ಕಲಬುರಗಿಯಲ್ಲಿ ವಿಭಾಗೀಯ ಕಚೇರಿಗೆ ಯೋಗ ಕೂಡಿ ಬರುತ್ತಿಲ್ಲವೆಂದು ರೇಲ್ವೆ ಬಳಕೆದಾರರು, ರೇಲ್ವೆ ಸವಲತ್ತುಗಳ ಬಗ್ಗೆ ಆಗ್ರಹಿಸುತ್ತ ಹೋರಾಟ ಮಾಡುವವರು ಅನೇಕರು ದೂರುತ್ತಿದ್ದಾರೆ.ಸ್ಥಳೀಯ ಸಂಸದರೇಕೆ ಮೌನ? ಪ್ರಿಯಾಂಕ್ ಖರ್ಗೆ ಆಕ್ರೋಶ
ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ಬಿಜೆಪಿಯವರಿಗೆ ಬೇಡದ ಕೂಸಾಗಿದೆ. 2013ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಕಲಬುರಗಿಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಈ ಯೋಜನೆ ಹಾಗೇ ಮೂಲೆ ಹಿಡಿದೆ ಕುಂತಿದೆ.ರೇಲ್ವೆ ಮೂಲ ಸವಲತ್ತಿಗೆ ಈ ಯೋಜನೆ ಅಗತ್ಯವಾಗಿದ್ದರೂ ಸಹ ನಮ್ಮ ಸಂಸದರು ಇದು ತಮಗೆ ಗೊತ್ತಿಲ್ಲವಂಬಂತೆ ನಟಿಸುತ್ತಿದ್ದಾರೆ. ಕೇಂದ್ರ ಕಳೆದ 5 ವರ್ಷದಿಂದ ಹೀಗೆ ಚಿಲ್ಲರೆ ಕಾಸು ಭಿಕ್ಷೆ ರೂಪದಲ್ಲಿ ಕೊಡೋದು ಗೊತ್ತಿದ್ದರೂ ಮಾತನಾಡದೆ ಮೌನ ತಾಳಿರೋದು ಯಾಕೆಂದು ಪ್ರಿಯಾಂಕ್ ಖರ್ಗೆ ಸ್ಥಳೀಯ ಬಿಜೆಪಿ ಸಂಸದ ಡಾ. ಜಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.