ಈ ಬಾರಿ ಸಂಗೀತ, ನೃತ್ಯ, ತಾಳವಾದ್ಯಕ್ಕೂ ಹೈಟೆಕ್‌ ಪರೀಕ್ಷೆ!

KannadaprabhaNewsNetwork | Published : Mar 9, 2025 1:47 AM

ಸಾರಾಂಶ

ಕಳೆದ ವರ್ಷ ಪ್ರಥಮ ಬಾರಿಗೆ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯ ಜವಾಬ್ದಾರಿ ಹೊತ್ತುಕೊಂಡ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಈ ಬಾರಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ವರ್ಷ ಪ್ರಥಮ ಬಾರಿಗೆ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯ ಜವಾಬ್ದಾರಿ ಹೊತ್ತುಕೊಂಡ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಈ ಬಾರಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

ಈಗಾಗಲೇ ಸಂಗೀತ, ನೃತ್ಯ ಶಿಕ್ಷಕರ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳಿಸಿದೆ. ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ಅಂತಿಮ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾರ್ಚ್‌ 15ರೊಳಗೆ ಅರ್ಜಿ ಸಲ್ಲಿಕೆಗೆ ಗಡುವು ವಿಧಿಸಿದೆ.

ಏನಿದು ಹೈಟೆಕ್‌ ಸ್ಪರ್ಶ?:

ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ, ಹಿಮ್ಮೇಳ ಕಲಾವಿದರು ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿ ನೋಂದಾಯಿತ ಎಲ್ಲರಿಗೂ ವಿವಿ ವತಿಯಿಂದ ಪ್ರತ್ಯೇಕ ಐಡಿ ಕಾರ್ಡ್‌ ನೀಡಲಾಗುತ್ತದೆ. ಐಡಿ ಕಾರ್ಡ್‌ ಹೊಂದಿದವರಿಗೆ ಮಾತ್ರ ಪರೀಕ್ಷಾ ಕೊಠಡಿಗೆ ಪ್ರವೇಶ ಇರಲಿದೆ.ಸ್ಥಳದಲ್ಲೇ ಅಪ್‌ಲೋಡ್‌:

ಲಿಖಿತ ಪರೀಕ್ಷೆ(ಥಿಯರಿ) ಬಳಿಕ ಅಂದೇ ಉತ್ತರ ಪತ್ರಿಕೆಗಳನ್ನು ವಿವಿ ತಂಡ ತನ್ನ ಸುರ್ದಿಗೆ ಪಡೆದುಕೊಳ್ಳಲಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರತ್ಯೊಬ್ಬರ ಅಂಕವನ್ನು ಪರೀಕ್ಷೆ ಮುಗಿದ ಕೂಡಲೇ ವಿವಿ ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲೇ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಿದ್ದಾರೆ.

ಈ ಬಾರಿ ಉತ್ತರ ಪತ್ರಿಕೆಯಲ್ಲಿ ಕೋಡ್‌ ಪದ್ಧತಿ ಇರಲಿದ್ದು, ಕ್ಯೂಆರ್‌ ಕೋಡ್‌ ಕೂಡ ಇರಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿಯನ್ನು ಬರೆಯಲು ಬಿಟ್ಟುಹೋದರೂ ಅವರ ಉತ್ತರ ಪತ್ರಿಕೆ ತಪ್ಪಿ ಹೋಗದೆ ನಿಖರ ಫಲಿತಾಂಶ ನೀಡಲು ಸಾಧ್ಯವಾಗಲಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು. -----------------ಈ ಬಾರಿ ಏಪ್ರಿಲ್‌ನಲ್ಲಿ ಪರೀಕ್ಷೆ

ಸಂಗೀತ, ನೃತ್ಯ ಮತ್ತು ತಾಳವಾದ್ಯಗಳ ಈ ಬಾರಿಯ ಪರೀಕ್ಷೆ ಏಪ್ರಿಲ್‌ನಲ್ಲಿ ಆರಂಭವಾಗಲಿದೆ. ಏಪ್ರಿಲ್‌ ಅಂತ್ಯಕ್ಕೆ ಲಿಖಿತ ಹಾಗೂ ಮೇ ಎರಡನೇ ವಾರ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದೆ. ಮೇ ಅಂತ್ಯಕ್ಕೆ ಮೌಲ್ಯಮಾಪನ ಆರಂಭಿಸಿ ಜೂನ್‌ 10ರೊಳಗೆ ಎಲ್ಲ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸುವ ಇರಾದೆಯನ್ನು ವಿವಿ ಹೊಂದಿದೆ.

-----------------ಪರೀಕ್ಷೆ ಬಾಯ್ಕಾಟ್‌ ಪ್ರಚಾರ: ಶಿಕ್ಷಕರ ಪೇಚಾಟ!

ಕಳೆದ ಬಾರಿಯ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಸಂಗೀತ, ನೃತ್ಯ ಪರೀಕ್ಷೆ ಬಹಿಷ್ಕರಿಸುವಂತೆ ಕರಾವಳಿಯ ನೃತ್ಯ ಕಲಾ ಪರಿಷತ್‌ ಕರೆಗೆ ಓಗೊಟ್ಟ ಕೆಲವು ಶಿಕ್ಷಕರು ಈಗ ಪೇಚಿಗೆ ಸಿಲುಕಿದ್ದಾರೆ.ಗಂಗೂಬಾಯಿ ವಿವಿ ಮೊದಲ ಬಾರಿಗೆ ಸಂಗೀತ, ನೃತ್ಯ ಪರೀಕ್ಷೆ ನಡೆಸಿದ್ದು, ಅದರಲ್ಲಿ ಗೊಂದಲ ಉಂಟಾಗಿದೆ. ಪರೀಕ್ಷಕರಿಗೆ ಸಂಭಾವನೆ, ಭತ್ಯೆ ಬಂದಿಲ್ಲ ಎಂದು ಆರೋಪಿಸಿ ಕರಾವಳಿ ನೃತ್ಯಕಲಾ ಪರಿಷತ್‌ ಉಡುಪಿ, ಮಂಗಳೂರು ಹಾಗೂ ಪುತ್ತೂರುಗಳಲ್ಲಿ ಸಭೆ ನಡೆಸಿ ಈ ಬಾರಿ ಪರೀಕ್ಷೆಯನ್ನೇ ಬಹಿಷ್ಕರಿಸುವಂತೆ ಕರೆ ನೀಡಿತ್ತು. ಪರೀಕ್ಷೆಯ ಬಹಿಷ್ಕಾರಕ್ಕೆ ಓಗೊಟ್ಟ ಸಂಗೀತ, ನೃತ್ಯ ಶಿಕ್ಷಕರು ನೋಂದಣಿಯಿಂದ ದೂರ ಉಳಿದಿದ್ದರು. ಕೊನೆ ಗಳಿಗೆಯಲ್ಲಿ ಪರೀಕ್ಷೆ ಬಹಿಷ್ಕಾರದಿಂದ ತುಸು ಹಿಂದೆ ಸರಿದ ಬಗ್ಗೆ ಸಭೆ ನಡೆಸಿ ಪ್ರಕಟಣೆ ಹೊರಡಿಸಿದರೂ ಆ ವೇಳೆ ಮರು ನೋಂದಣಿ ಅವಧಿ ಮುಕ್ತಾಯಗೊಂಡಿತ್ತು. ಇದರಿಂದಾಗಿ ಅನೇಕ ಮಂದಿ ಸಂಗೀತ, ನೃತ್ಯ ಶಿಕ್ಷಕರು ಮರು ನೋಂದಣಿಗೆ ಅವಕಾಶ ಸಿಗದೆ ಪೇಚಿಗೆ ಸಿಲುಕಿದ್ದರು. ಕೊನೆಗೂ ಶಿಕ್ಷಕರ ಕೋರಿಕೆ ಮೇರೆಗೆ ಶಿಕ್ಷಕರಿಗೆ ನೋಂದಣಿಗೆ ದಂಡ ಶುಲ್ಕ ಸಹಿತ ಮಾರ್ಚ್‌ 15 ರ ವರೆಗೆ ವಿವಿ ಅವಕಾಶ ಕಲ್ಪಿಸಿದೆ. ನೋಂದಾಯಿಸದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತಾವೇ ಪರೀಕ್ಷೆಗೆ ಕೂರಿಸುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತೆ ವಿವಿ ಮೊರೆ ಹೋಗಿದ್ದರು.

----------------ನಾವು ಕರಾವಳಿಯ ಮೂರು ಕಡೆ ಸಭೆ ನಡೆಸಿ ನಮ್ಮ ಬೇಡಿಕೆ ಈಡೇರುವ ವರೆಗೆ ಸಂಗೀತ, ನೃತ್ಯ ಪರೀಕ್ಷೆ ಬಹಿಷ್ಕರಿಸುವಂತೆ ಕರೆ ನೀಡಿದ್ದೇವೆ. ಮರು ನೋಂದಣಿ ಮಾಡಿಸಿಕೊಳ್ಳದ ಶಿಕ್ಷಕರು ನೋಂದಣಿ ಮಾಡಿಸಿಕೊಂಡ ಶಿಕ್ಷಕರ ಬಳಿ ತಮ್ಮ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸಲು ಸಾಧ್ಯವಿದೆ. ಪರೀಕ್ಷಕರ ಗೌರವಧನ ಪೂರ್ತಿ ಪಾವತಿಗೆ ವಿವಿ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೆ ನಾವು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕೂರಿಸುವುದಿಲ್ಲ.-ವಿದ್ವಾನ್‌ ಚಂದ್ರಶೇಖರ ನಾವಡ, ಉಪಾಧ್ಯಕ್ಷರು, ಕರಾವಳಿ ನೃತ್ಯಕಲಾ ಪರಿಷತ್‌, ದ.ಕ.ಕಲಾ ಸಂಯೋಜಕರ ಗೌರವಧನ ಹಂತ ಹಂತವಾಗಿ ಪಾವತಿಯಾಗುತ್ತಿದೆ. ಮರು ಪರೀಕ್ಷೆಯ ಫಲಿತಾಂಶವನ್ನೂ ಪ್ರಕಟಿಸಲಾಗಿದೆ. ವಿವಿಯಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದೆ. ವಿವಿ ವಿರುದ್ಧ ಗೊಂದಲದ, ಪರೀಕ್ಷೆ ಬಹಿಷ್ಕರಿಸುವ ಇತ್ಯಾದಿ ಹೇಳಿಕೆ ನೀಡಿ ಹಾದಿತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.-ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ, ಕುಲಪತಿ, ಸಂಗೀತ ವಿವಿ, ಮೈಸೂರು-----------------

Share this article