ಕೊಪ್ಪಳ:
ತಾಲೂಕಿನಲ್ಲಿ ಕಲ್ಯಾಣ ಪಥ ಯೋಜನೆಯಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹ 5.50 ಕೋಟಿ ವೆಚ್ಚದಲ್ಲಿ ಅಡಿಗಲ್ಲು ನೆರವೇರಿಸಿದ ಅವರು, ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಹದಗೆಟ್ಟಿರುವ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ಕಲ್ಯಾಣ ಪಥದಲ್ಲಿ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಈ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ ₹ 33 ಕೋಟಿ ಅನುದಾನ ಬಂದಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಶೀಘ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಹಾಸ್ಟೆಲ್ ಉದ್ಘಾಟನೆ:
ನಗರದ ಪೊಲೀಸ್ ಸ್ಟೇಷನ್ ಹಿಂಭಾಗದಲ್ಲಿ ಎಸ್ಸಿಪಿ-ಟಿಎಸ್ಸಿಪಿ ಅನುದಾನದಡಿ ₹ 6.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡವನ್ನು ಹಿಟ್ನಾಳ ಉದ್ಘಾಟಿಸಿದರು. ₹ 2.50 ಕೋಟಿ ವೆಚ್ಚದಲ್ಲಿ ಕೊಪ್ಪಳ ತಾಲೂಕಿನ ಕಲ್ಮಾಲ-ಶಿಗ್ಗಾವ್ ರಾಷ್ಟ್ರೀಯ ಹೆದ್ದಾರಿ, ₹ 1.50 ಕೋಟಿ ವೆಚ್ಚದಲ್ಲಿ ಕೊಪ್ಪಳ ತಾಲೂಕಿನ ಕಲ್ಮಾಲ-ಶಿಗ್ಗಾವ್ ರಸ್ತೆ ಅಭಿವೃದ್ಧಿ ಮತ್ತು ₹ 1. 50 ಕೋಟಿ ವೆಚ್ಚದಲ್ಲಿ ಕೊಪ್ಪಳ ತಾಲೂಕಿನ ಕಾಸನಕಂಡಿ-ತಿಮ್ಮಪ್ಪಮಟ್ಟಿ ರಸ್ತೆಗೆ ಅಡಿಗಲ್ಲು ನೆರವೇರಿಸಿದರು.ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಉದ್ಯಮಿ ವಿ.ಆರ್. ಪಾಟೀಲ್, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಹನುಮರೆಡ್ಡಿ ಅಂಗನಕಟ್ಟಿ, ರಾಮಣ್ಣ ಕಲ್ಲನ್ನವರ, ಕೇಶವರೆಡ್ಡಿ, ನಿಂಗಪ್ಪ ಯತ್ನಟ್ಟಿ, ಹನುಮೇಶ ಹೊಸಳ್ಳಿ, ಚಿನ್ನಿ ಆರ್.ಎಸ್., ಖಾಜಾ ಲಿಂಗಾಪುರ, ಮಾರುತಿ ಹೊಸಳ್ಳಿ, ಬಸಣ್ಣ ಬೆವೂರು, ಅಕ್ಬರ್ ಪಲ್ಟಾನ್ ಇತರರಿದ್ದರು.