ಈ ಬಾರಿ ಅವರ ಅಂತ್ಯ ಆಗಲೇಬೇಕು: ಎಚ್ ಡಿದೇವೇಗೌಡ

KannadaprabhaNewsNetwork | Published : Apr 24, 2024 2:19 AM

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿಕೂಟ 28 ಸ್ಥಾನಗಳನ್ನು ಗೆಲ್ಲಬೇಕು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ. ಈ ಸನ್ನಿವೇಶದಲ್ಲಿ ಚೀನಾ ,ರಷ್ಯಾವನ್ನು ಹೆದರಿಸುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ. ಆದ್ದರಿಂದ ಮೈತ್ರಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಈ ಕ್ಷೇತ್ರದಲ್ಲಿ ಅವರಿಗೆ ಸೆಡ್ಡು ಹೊಡೆಯಬೇಕು. ನೀವು ಯಾರಿಗೂ ಹೆದರಬೇಡಿ. ಈ ಸಲ ಅವರ ಅಂತ್ಯ ಆಗಲೇಬೇಕು ಎಂದು ಡಿಕೆ ಸಹೋದರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ತಾಲೂಕಿನ ಮರಳವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ. ಎನ್ .ಮಂಜುನಾಥ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾರವರ ಒತ್ತಾಯದ ಮೇರೆಗೆ ಸಿ.ಎನ್. ಮಂಜುನಾಥ್ ರನ್ನು ನಿಲ್ಲಿಸಲಾಗಿದೆ. ನೀವೆಲ್ಲ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಯದೇವ ಸಂಸ್ಥೆ ನಿರ್ದೇಶಕರಾಗಿದ್ದಾಗ ಡಾ. ಸಿ ಎನ್. ಮಂಜುನಾಥ್ ಅವರು ಸಾವಿರಾರು ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ದೇಶದಲ್ಲಿ ಅವರ ನೈಪುಣ್ಯತೆ ಬಳಸಿಕೊಳ್ಳಲು, ಕೇಂದ್ರ ಸಚಿವರನ್ನಾಗಿ ಮಾಡಿ ರಾಷ್ಟ್ರಕ್ಕೆ ಸೇವೆ ಬಳಸಿಕೊಳ್ಳಲು ಅವರನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಬಡ ಜನರಿಗೆ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ನಿಲ್ಲಿಸಿದ್ದು ಅವರ ನಿಷ್ಠೆ, ಪ್ರಾಮಾಣಿಕತೆಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮೋದಿ ಬಿಟ್ಟರೆ ಯಾರಿಲ್ಲ:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿಕೂಟ 28 ಸ್ಥಾನಗಳನ್ನು ಗೆಲ್ಲಬೇಕು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ. ಈ ಸನ್ನಿವೇಶದಲ್ಲಿ ಚೀನಾ ,ರಷ್ಯಾವನ್ನು ಹೆದರಿಸುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ. ಆದ್ದರಿಂದ ಮೈತ್ರಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ. ಆದ್ದರಿಂದಲೇ ಅವರನ್ನು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಿದ್ದಾರೆ. ಕುಮಾರಸ್ವಾಮಿ ರಾಮನಗರ, ಚಿಕ್ಕಬಳ್ಳಾಪುರವೆಂಬ ಎರಡು ಹೊಸ ಜಿಲ್ಲೆಗಳನ್ನು ಕೊಡುಗೆ ನೀಡಿದ್ದಾರೆ. ದೇಶದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಅಂದರೆ ಅದು ಕುಮಾರಸ್ವಾಮಿ ಎಂದರು.

ನಾನು ತೇರು ಬೀದಿ ಸೇರಿ ಕನಕಪುರದ ವಿವಿಧ ಕಡೆ ೭ ಕೆರೆಗಳನ್ನು ಕಟ್ಟಿಸಿದ್ದೇನೆ. ದೊಡ್ಡ ಬೆಟ್ಟಹಳ್ಳಿ ೭ ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದೇನೆ. ಆಗ ನನ್ನ ಕಾಲಿಗೆ ಪೆಟ್ಟದಾಗ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋದರು. ಅದು ನನಗೆ ಇನ್ನೂ ನೆನಪಿದೆ. ಕನಕಪುರ ಕ್ಷೇತ್ರದಲ್ಲಿ ನಾನು ಕೂಡ ಬಹಳಷ್ಟು ಸೇತುವೆಗಳು , ರಸ್ತೆಗಳನ್ನು ನಿರ್ಮಾಣ ಮಾಡಿಸಿದ್ದೇನೆ ಎಂದು ಹೇಳಿದರು.

ಜಿಲ್ಲಾ , ತಾಲೂಕು ಪಂಚಾಯತ್ ಗಳಲ್ಲಿ ಮೀಸಲಾತಿ ಕೊಟ್ಟವನು ನಾನು. ಯಾವುದೇ ಸಣ್ಣ ಜಾತಿಗಳನ್ನೂ ಕೈ ಬಿಟ್ಟಿಲ್ಲ, ಎಲ್ಲರ ಒಗ್ಗೂಡಿಸುವ ಕೆಲಸ ಮಾಡಿದ್ದೇನೆ. ನಿಖಿಲ್ ಒಬ್ಬ ಯುವಕ, ಹೋರಾಟ ಮಾಡುವ ಕೆಚ್ಚಿದೆ, ಮುಂದೆ ಚಿತ್ರರಂಗದಲ್ಲಿ ನಟನಾಗಿ ಬೆಳೆಯುವುದು ಸತ್ಯ. ಯಾರೂ ಹೆದರಬೇಡಿ, ಜನರ ಸೇವೆ ಹಾಗೂ ಹೋರಾಟ ಮಾಡುವುದಕ್ಕಾಗಿ ಈ ಕುಟುಂಬ ಇದೆಯೇ ಹೊರತು ಸ್ವಾರ್ಥಕ್ಕಲ್ಲ ಎಂದು ತಿಳಿಸಿದರು.

ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಾದ ಗಬ್ಬಾಡಿ ಮಲ್ಲಪ್ಪ , ಕೊಳ್ಳಿಗನಹಳ್ಳಿ ರಾಮ ಲಕ್ಷ್ಮಣ, ಮಹದೇವಯ್ಯ, ಅನಂತ್ ಕುಮಾರ್ , ಕೋಟೆ ರಾಜು, ಮೇಗಳ ಬೀದಿ ಕುಮಾರಣ್ಣ, ಮೇಡಮಾರನಹಳ್ಳಿ ಕುಮಾರ್, ತಾಮಸಂದ್ರ ಪುಟ್ಟಸ್ವಾಮಿ, ಮಲ್ಲಪ್ಪ, ಮುರಳೀಧರ್ , ಚಂದ್ರು, ಸೋಮಣ್ಣ ಮತ್ತಿತರರು ಹಾಜರಿದ್ದರು.

Share this article