ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಳೆದ 3 ವರ್ಷಗಳಿಗೆ ಹೋಲಿಸಿದರೆ, ತಾಲೂಕಿನಲ್ಲಿ ಈ ವರ್ಷವೂ ಶೇ.3 ಹೆಚ್ಚು ಪ್ರಮಾಣದಲ್ಲಿ ಡೆಂಘೀ ಪ್ರಕರಣಗಳು ವರದಿಯಾಗಿದ್ದು, ರೋಗದ ನಿಯಂತ್ರಣಕ್ಕೆ ಪುರಸಭೆ, ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ, ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಸಹಕಾರದಿಂದ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದು ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ತಿಳಿಸಿದರು.ತಾಲೂಕು ಮಟ್ಟದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 54 ಡೆಂಘೀ ಮತ್ತು 29 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿದ್ದು, ವಿಶೇಷವಾಗಿ ಪಟ್ಟಣದಲ್ಲಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಲಾರ್ವ ಸಮೀಕ್ಷೆ ನಡೆಸಿ ಚಿಕ್ಕದಿದ್ದಾಗಲೇ ಸಂಪೂರ್ಣ ನಾಶಪಡಿಸಿ. ಗುಜರಿ ವಸ್ತುಗಳ ಇರುವಿಕೆಗಳ ಪತ್ತೆ ಹಚ್ಚಿ ಸ್ವಚ್ಛ ಮತ್ತು ನಿರ್ಮೂಲನೆಗೊಳಿಸಿ ಟಯರ್ ಎಳನೀರು, ತೆಂಗಿನಕಾಯಿ ಚಿಪ್ಪು ಹಾಗೂ ಆಟದ ಮೈದಾನದ ಅಕ್ಕಪಕ್ಕದ ಗುಂಡಿಗಳಲ್ಲಿ ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ:ಪಶು ವೈದ್ಯ ಇಲಾಖೆಗೆ ಸಂಬಂಧಿಸಿದ ಹಾಗೂ ರೇಬಿಸ್ ನಿಂದಾಗುವ ಜೀವ ಹಾನಿಯ ಕುರಿತು ಚರ್ಚಿಸಿ ಪುರಸಭೆ ಅಧಿಕಾರಿಗಳಿಗೆ ಬೀದಿ ನಾಯಿ ಹಾವಳಿಗಳ ಕಾಟ ತಪ್ಪಿಸಲು ಸೂಚಿಸಿದ ಅವರು ಡೆಂಘೀ, ಹಾವು ಕಡಿತ ಹಾಗೂ ರೇಬಿಸ್ ನಿಂದ ಜೀವ ಹಾನಿ ತಡೆಗಟ್ಟಬೇಕೆಂದು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಲು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಸ್ವಚ್ಛತೆ ಬಗ್ಗೆ ಅರಿವು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಸಬೇಕೆಂದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಾಗ ಮಾತ್ರ ರೋಗಗಳಿಂದ ಸಾರ್ವಜನಿಕರ ರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ವೈದ್ಯ ರಾಮ್ ಪ್ರಕಾಶ್ ಮಾತನಾಡಿ, ಹಳೆಯ ಸಂಗ್ರಹದ ನೀರಿಗಿಂತ ಹೊಸ ನೀರಿನಲ್ಲಿ ಡೆಂಘೀ ಸೊಳ್ಳೆಗಳು ಗೋಚರಿಸಲಿದ್ದು ಸೊಳ್ಳೆ ನಿರ್ಮೂಲನವೇ ಗುರಿಯಾಗಬೇಕು ಸ್ವಚ್ಛತೆಯ ಜೊತೆಗೆ ಸೊಳ್ಳೆಗಳ ನಾಶಪಡಿಸಬೇಕೆಂದು ಸೂಚಿಸಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ರಾಜಣ್ಣ, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್ ಸಹಿತ ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಇಲಾಖೆಗಳ ನಡುವೆ ಸಮನ್ವಯತೆ ಇರಲಿಕೆಲ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಮತ್ತು ಸಿಬ್ಬಂದಿ ಕೊರತೆ ಇರುವ ಮಾಹಿತಿ ಪಡೆದು ಜಿಲ್ಲಾಧಿಕಾರಿಯವರ ಗಮನಕ್ಕೆ ತರುವ ಕೆಲಸ ಮಾಡಲಾಗುವುದು. ಸರ್ಕಾರಿ ಇಲಾಖೆ ಜವಾಬ್ದಾರಿ ಅರಿತು ಕೆಲಸ ಮಾಡಿ ಒಂದು ಇಲಾಖೆ ಮತ್ತೊಂದು ಇಲಾಖೆ ಜತೆ ಪರಸ್ಪರ ಸಹಕರಿಸಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
ಮಲ್ಲೇಶ್ ಬಿ.ಪೂಜಾರ್, ತಹಸೀಲ್ದಾರ್