ಈ ಬಾರಿ ಕರಾವಳಿ, ಕದಂಬೋತ್ಸವ ನಡೆಯುತ್ತಾ?

KannadaprabhaNewsNetwork |  
Published : Jan 25, 2025, 01:01 AM IST
ಕಾರವಾರದಲ್ಲಿ 2017ರಲ್ಲಿ  ನಡೆದ ಕರಾವಳಿ ಉತ್ಸವದ ಆಮಂತ್ರಣ. | Kannada Prabha

ಸಾರಾಂಶ

ಪ್ರಸಕ್ತ ವರ್ಷ ಜನವರಿ ತಿಂಗಳು ಕಳೆಯಲು ವಾರ ಬಾಕಿಯಿದ್ದರೂ ಕರಾವಳಿ ಅಥವಾ ಕದಂಬೋತ್ಸವದ ಆಚರಣೆಯ ಜಿಲ್ಲಾಡಳಿತದಿಂದ ಸಿದ್ಧತೆ ನಡೆದಿಲ್ಲ.

ಜಿ.ಡಿ. ಹೆಗಡೆ

ಕಾರವಾರ: ಜಿಲ್ಲಾಡಳಿತದಿಂದ ನಡೆಯುವ ಪಂಪ ಪ್ರಶಸ್ತಿ ಪ್ರದಾನ, ಕದಂಬೋತ್ಸವ ಹಾಗೂ ಕರಾವಳಿ ಉತ್ಸವ ಪ್ರಸಕ್ತ ವರ್ಷ ಆಯೋಜನೆಯಾಗುವುದು ಈ ಬಾರಿಯೂ ಅನುಮಾನ.ಸಾಮಾನ್ಯವಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ಕರಾವಳಿ ಉತ್ಸವ, ಜನವರಿ ಅಥವಾ ಫೆಬ್ರವರಿಯಲ್ಲಿ ಪಂಪ ಪ್ರಶಸ್ತಿ ಪ್ರದಾನ, ಕದಂಬೋತ್ಸವ ನಡೆಸಲಾಗುತ್ತಿತ್ತು. ಪ್ರಸಕ್ತ ವರ್ಷ ಜನವರಿ ತಿಂಗಳು ಕಳೆಯಲು ವಾರ ಬಾಕಿಯಿದ್ದರೂ ಕರಾವಳಿ ಅಥವಾ ಕದಂಬೋತ್ಸವದ ಆಚರಣೆಯ ಜಿಲ್ಲಾಡಳಿತದಿಂದ ಸಿದ್ಧತೆ ನಡೆದಿಲ್ಲ.

ಸಾಮಾನ್ಯವಾಗಿ ಕರಾವಳಿ ಉತ್ಸವ ಮೂರು ಅಥವಾ ನಾಲ್ಕು ದಿನಗಳ ಕಾಲ, ಕದಂಬೋತ್ಸವ ೨ ದಿನಗಳ ಕಾಲ ಆಯೋಜನೆ ಮಾಡಲಾಗುತ್ತದೆ. ವಿವಿಧ ಕಾರ್ಯಕ್ರಮ ಸಂಘಟನೆ, ನಾಮಾಂಕಿತ ಕಲಾವಿದರ ಆಯ್ಕೆ ಮಾಡಬೇಕಾದ ಕಾರಣ ತಿಂಗಳ ಮೊದಲಿನಿಂದಲೇ ಸಿದ್ಧತೆ ಆರಂಭಿಸಬೇಕಾಗುತ್ತದೆ. ಏಕಾಏಕಿ ನಿರ್ಧರಿಸಿ ಆಯೋಜನೆ ಮಾಡುವುದು ಕಷ್ಟವಾಗಲಿದೆ.

ಸಭೆ ಮಾತ್ರ ಸಡೆಯಿತು: ೨೦೧೭ರ ಡಿಸೆಂಬರ್, ೨೦೧೮ರ ಡಿಸೆಂಬರ್‌ನಲ್ಲಿ ಎರಡು ವರ್ಷ ಕರಾವಳಿ ಉತ್ಸವವನ್ನು ಕಾರವಾರದಲ್ಲಿ ಸಂಘಟಿಸಲಾಗಿತ್ತು. ಶ್ವಾನ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಬಳಿಕ ಕೋವಿಡ್, ಪ್ರಾಕೃತಿ ವಿಕೋಪ ಹೀಗೆ ಬೇರೆ ಬೇರೆ ಕಾರಣದಿಂದ ಈ ಉತ್ಸವ ನಡೆದಿಲ್ಲ. ೨೦೨೩ರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಿದ್ದಾಗ ಕರಾವಳಿ ಉತ್ಸವ ನಡೆಸಲು ಅಧಿಕಾರಿಗಳ ಸಭೆ ನಡೆಸಿದ್ದರು. ಆದರೆ ಕಾರ್ಯಕ್ರಮ ಮಾತ್ರ ನಡೆಯಲಿಲ್ಲ.

ಕನ್ನಡದ ಪ್ರಥಮ ರಾಜಧಾನಿ ಎಂಬ ಖ್ಯಾತಿ ಹೊಂದಿರುವ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಪ್ರದಾನ, ಕದಂಬೋತ್ಸವ ಏರ್ಪಡಿಸಲಾಗುತ್ತದೆ. ಬಹುತೇಕ ಜನವರಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಉತ್ಸವ ಆಯೋಜನೆಗೊಳ್ಳುತ್ತಿತ್ತು. ಇದಕ್ಕಾಗಿ ಎರಡು ತಿಂಗಳ ಮುಂಚಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಸಿದ್ಧತೆ ನಡೆಯುತ್ತಿಲ್ಲ.

ಕದಂಬೋತ್ಸವ ೨೦೨೦ರಲ್ಲಿ ನಡೆದಿತ್ತು. ೨೦೧೮ರಲ್ಲಿ ಮಂಗನ ಕಾಯಿಲೆ, ೨೦೨೧, ೨೦೨೨ರಲ್ಲಿ ಕೋವಿಡ್, ನೆರೆ ಕಾರಣದಿಂದ ಕದಂಬೋತ್ಸವ ಆಯೋಜನೆ ಮಾಡಿರಲಿಲ್ಲ. ಇದಾದ ಬಳಿಕ ೨೦೨೪ ಮಾರ್ಚ್‌ನಲ್ಲಿ ಆಯೋಜನೆ ಮಾಡಲಾಗಿತ್ತು. ಫೆಬ್ರವರಿ ತಿಂಗಳು ಸಮೀಪಿಸುತ್ತಿದ್ದರೂ ಜಿಲ್ಲಾಡಳಿತ ಕದಂಬೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ನಾಮಾಂಕಿತ ಕಲಾವಿದರನ್ನು ಆಹ್ವಾನಿಸುವುದಾದರೆ ಸಾಕಷ್ಟು ಮೊದಲೇ ಅವರ ಒಪ್ಪಿಗೆ ಪಡೆದು ಸಮಯ ನಿಗದಿ ಮಾಡಿಕೊಳ್ಳಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ಆಹ್ವಾನಿಸಲು ಆಗುವುದಿಲ್ಲ. ಸಾಂಸ್ಕೃತಿಕ, ಸ್ಪರ್ಧೆ ಇತ್ಯಾದಿ ಆಯೋಜನೆ ಮಾಡುವುದು ಸುಲಭವಲ್ಲ.

ಫೆಬ್ರವರಿ ಅಂತ್ಯದಲ್ಲಿ, ಮಾರ್ಚ್‌ನಲ್ಲಿ ಎಸೆಸ್ಸೆಲ್ಸಿ, ಪಿಯುಸಿ ಒಳಗೊಂಡು ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯವಾಗುವುದರಿಂದ ಆಯೋಜನೆ ಮಾಡುವುದು ಸೂಕ್ತವಲ್ಲ. ಉತ್ಸವ ನಡೆಸಬೇಕಾದರೆ ಫೆಬ್ರವರಿ ಎರಡನೇ ವಾರದೊಳಗೆ ಮಾಡಬೇಕಿದ್ದು, ಸಮಯಾವಕಾಶ ಕಡಿಮೆಯಿದೆ. ಹೀಗಾಗಿ ಈ ಬಾರಿ ಕದಂಬೋತ್ಸವ, ಕರಾವಳಿ ಉತ್ಸವ ನಡೆಯುವುದು ಅನುಮಾನವಿದೆ.

ಸಾಂಸ್ಕೃತಿಕ ಲೋಕದ ಅನಾವರಣ...

ಉತ್ಸವಗಳು ಮನರಂಜನೆ ನೀಡುವುದರ ಜತೆಗೆ ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತು ಸಾಂಸ್ಕೃತಿಕ ಲೋಕದ ಅನಾವರಣಕ್ಕೆ, ಸ್ಥಳೀಯ ಕಲೆಗಳ ಪರಿಚಯವಾಗಲು, ಸಂಸ್ಕೃತಿ ದರ್ಶನಕ್ಕೆ ಅನುಕೂಲವಾಗುತ್ತಿತ್ತು. ಉತ್ಸವ ನಡೆಯದೇ ಇವೆಲ್ಲದರ ಪರಿಚಯ ಆಗದಂತಾಗುತ್ತದೆ.

ಸರ್ಕಾರಕ್ಕೆ ಪ್ರಸ್ತಾವನೆ: ಕರಾವಳಿ ಹಾಗೂ ಕದಂಬೋತ್ಸವ ಆಯೋಜನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ನಡೆಸಿದ್ದು, ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!