ಮೂರ್ನಾಲ್ಕು ವರ್ಷಗಳಿಂದ ಬದಲಾದ ವಾತಾವರಣದಿಂದ ತೀವ್ರ ಸಂಕಷ್ಟ - ಈ ಬಾರಿ ರಾಜ್ಯದಲ್ಲಿ ಭರಪೂರ ಮಾವಿನ ಬೆಳೆ

KannadaprabhaNewsNetwork |  
Published : Apr 02, 2025, 01:06 AM ISTUpdated : Apr 02, 2025, 01:02 PM IST
ಮಾವಿನ ಹಣ್ಣು | Kannada Prabha

ಸಾರಾಂಶ

ಮೂರ್ನಾಲ್ಕು ವರ್ಷಗಳಿಂದ ಬದಲಾದ ವಾತಾವರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು ಈ ಬಾರಿ ಕೊಂಚ ಖುಷಿಯಾಗಿದ್ದಾರೆ. ಜಿಗಿಹುಳು ಉಪಟಳವೂ ಕಡಿಮೆಯಿದ್ದು, ಮರಗಳಲ್ಲಿ ಭರ್ಜರಿ ಹೂವು ಬಿಟ್ಟು ಕಾಯಿಕಟ್ಟಲು ಆರಂಭಿಸಿರುವುದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಸಂಪತ್‌ ತರೀಕೆರೆ

  ಬೆಂಗಳೂರು : ಮೂರ್ನಾಲ್ಕು ವರ್ಷಗಳಿಂದ ಬದಲಾದ ವಾತಾವರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು ಈ ಬಾರಿ ಕೊಂಚ ಖುಷಿಯಾಗಿದ್ದಾರೆ. ಜಿಗಿಹುಳು ಉಪಟಳವೂ ಕಡಿಮೆಯಿದ್ದು, ಮರಗಳಲ್ಲಿ ಭರ್ಜರಿ ಹೂವು ಬಿಟ್ಟು ಕಾಯಿಕಟ್ಟಲು ಆರಂಭಿಸಿರುವುದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಇದು ಏರು ಹಂಗಾಮು ಅಥವಾ ಇಳಿ ಹಂಗಾಮು ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಗುಣಮಟ್ಟದ ಮಾವು ಸಿಗಲಿದ್ದು, ರಾಜ್ಯದಲ್ಲಿ 9ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಮಾವು ಇಳುವರಿ ನಿರೀಕ್ಷಿಸಬಹುದು ಎಂದಿರುವುದು ಮಾವು ಬೆಳೆಗಾರರಲ್ಲಿ ಉತ್ಸಾಹ ದ್ವಿಗುಣಗೊಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮರಗಳು ಬೇಗನೆ ಹೂವು ಬಿಟ್ಟಿದ್ದವು. ಇದರಿಂದ ಬೆಳೆಗಾರರು ಕೂಡ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಫೆಬ್ರವರಿಯಲ್ಲಿ ಸುರಿದ ಮಳೆಗೆ ಹೂವು ಮತ್ತು ಕಾಯಿ ಉದುರಿ ತೊಂದರೆ ಆಗಿತ್ತು. ಹಾಗಾಗಿ ಈ ಬಾರಿ ಬಂಪರ್‌ ಅಲ್ಲದಿದ್ದರೂ ಸಾಧಾರಣ ಇಳುವರಿಗೆ (9ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ) ತೃಪ್ತಿಪಟ್ಟುಕೊಳ್ಳಬೇಕಿದೆ. ಸಾಮಾನ್ಯವಾಗಿ ಇಳಿ ಹಂಗಾಮಿನಲ್ಲಿ ಮಾವಿನ ಇಳುವರಿ 6 ಲಕ್ಷದಿಂದ 7 ಲಕ್ಷ ಮೆಟ್ರಿಕ್‌ ಟನ್‌ ಇದ್ದರೆ, ಏರು ಹಂಗಾಮಿನಲ್ಲಿ 12ರಿಂದ 15 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ಇರುತ್ತದೆ. 

ಜಿಗಿಹುಳು ತಾಪತ್ರಯವಿಲ್ಲ:

ಕಳೆದ ವರ್ಷ ವಾತಾವರಣದಲ್ಲಿ ಮಿತಿಮೀರಿದ ತಾಪಮಾನ ಮತ್ತು ಮಾವು ಬೆಳೆಗೆ ಆವರಿಸಿದ್ದ ರೋಗದಿಂದ ಮಾವು ಬೆಳೆ ಬಹುತೇಕ ಹಾಳಾಗಿತ್ತು. ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಸ್ವಲ್ಪ ಮಟ್ಟಿಗೆ ಮಾವು ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ, ಮಾವು ಬೆಳೆಯನ್ನು ಹೆಚ್ಚಾಗಿ ಬಾಧಿಸುವ ಜಿಗಿಹುಳು ಉಪಟಳ ಕಡಿಮೆಯಿದೆ. ರೋಗಗಳು ಕೂಡ ಕಡಿಮೆಯಿದೆ. ಏಪ್ರಿಲ್‌- ಮೇ ತಿಂಗಳಲ್ಲಿ ಆಲಿಕಲ್ಲು ಮಳೆ, ಬಿರುಗಾಳಿ ಸಹಿತ ಮಳೆ ಅಥವಾ ಹೆಚ್ಚಿನ ಗಾಳಿ ಬಾಧಿಸದಿದ್ದರೆ ಉತ್ತಮ ಇಳುವರಿ ಬೆಳೆಗಾರರ ಕೈಸೇರಲಿದೆ. ಏಪ್ರಿಲ್‌ ಮೂರನೇ ವಾರ ಇಲ್ಲವೇ ಕೊನೆಯ ವಾರದಲ್ಲಿ ಹೆಚ್ಚಿನ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಲಿದೆ ಎನ್ನುತ್ತಾರೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್‌. 

ಜಿಲ್ಲಾವಾರು ಇಳುವರಿ:

ರಾಜ್ಯದಲ್ಲಿ ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ ಸೇರಿ 31 ಜಿಲ್ಲೆಗಳಲ್ಲಿ 1.49 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಪೈಕಿ ಕೋಲಾರದಲ್ಲಿ 3.5 ಲಕ್ಷ ಮೆಟ್ರಿಕ್‌ ಟನ್‌ಗೂ ಹೆಚ್ಚು ಇಳುವರಿ ಬರುವ ಸಾಧ್ಯತೆ ಇದೆ. ರಾಮನಗರದಲ್ಲಿ ಅಂದಾಜು 2.1 ಲಕ್ಷ ಮೆಟ್ರಿಕ್‌ ಟನ್‌, ಚಿಕ್ಕಬಳ್ಳಾಪುರದಲ್ಲಿ 1.10 ಲಕ್ಷ ಮೆಟ್ರಿಕ್‌ ಟನ್‌, ಬೆಳಗಾವಿ 45 ಸಾವಿರ ಮೆಟ್ರಿಕ್‌ ಟನ್‌, ಬೆಂಗಳೂರು ಗ್ರಾಮಾಂತರ 40ರಿಂದ 45 ಸಾವಿರ ಮೆಟ್ರಿಕ್‌ ಟನ್‌, ಹಾವೇರಿ 42 ಸಾವಿರ ಮೆಟ್ರಿಕ್‌ ಟನ್‌, ಧಾರವಾಡ 70ರಿಂದ 75 ಸಾವಿರ ಮೆಟ್ರಿಕ್‌ ಟನ್‌, ಉತ್ತರ ಕನ್ನಡ 35ರಿಂದ 37 ಸಾವಿರ, ಚಿಕ್ಕಮಗಳೂರು 30 ಸಾವಿರ ಮೆಟ್ರಿಕ್‌ ಟನ್‌ ಇಳುವರಿಯಾಗುವ ಸಾಧ್ಯತೆ ಇದೆ. ಹೀಗೆ ಒಟ್ಟಾರೆ ರಾಜ್ಯದಲ್ಲಿ 9ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷಿಸಬಹುದು ಎಂದು ಮಾವು ನಿಗಮದ ಮೂಲಗಳು ತಿಳಿಸಿವೆ.

ಈ ಮಾವು ಹಂಗಾಮಿನಲ್ಲಿ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ. ಈಗಾಗಲೇ ಮಾವು ನಿರ್ವಹಣೆ ಕುರಿತು ರೈತರಿಗೆ ಕೈಗೊಳ್ಳಬೇಕಾದ ನಿಯಮಗಳ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ರೋಗಬಾಧೆ ಕಡಿಮೆ ಇರಲಿದ್ದು ಗುಣಮಟ್ಟದ ಹಣ್ಣುಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್‌ನಿಂದ ಜೂನ್‌ ವರೆಗೂ ವಿವಿಧ ತಳಿಯ ಮಾವು ಮಾರುಕಟ್ಟೆಯಲ್ಲಿ ಸಿಗಲಿದೆ.

- ನಾಗರಾಜ್‌, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಮಾವು ಅಭಿವೃದ್ಧಿ ನಿಗಮ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ