ಈ ಬಾರಿಯೂ ಸ್ಥಾಪನೆಯಾಗಲಿಲ್ಲ ಕೇಂದ್ರೀಯ ವಿದ್ಯಾಲಯ!

KannadaprabhaNewsNetwork |  
Published : Aug 31, 2025, 02:00 AM IST
ಪೋಟೋ ಇಧೆ. | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಬೇಕು ಎನ್ನುವ ದಶಕಗಳ ಕೂಗಿಗೆ ಮತ್ತೆ ನಿರಾಸೆ. ಪ್ರಸ್ತುತ ರಾಜ್ಯದಲ್ಲಿ ನೂತನವಾಗಿ 3 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮತಿ ದೊರೆತಿದ್ದರೂ, ಗದಗ ಜಿಲ್ಲೆಯ ಹೆಸರೇ ಪ್ರಸ್ತಾಪ ಆದದಿರುವುದು ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಬೇಕು ಎನ್ನುವ ದಶಕಗಳ ಕೂಗಿಗೆ ಮತ್ತೆ ನಿರಾಸೆ. ಪ್ರಸ್ತುತ ರಾಜ್ಯದಲ್ಲಿ ನೂತನವಾಗಿ 3 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮತಿ ದೊರೆತಿದ್ದರೂ, ಗದಗ ಜಿಲ್ಲೆಯ ಹೆಸರೇ ಪ್ರಸ್ತಾಪ ಆದದಿರುವುದು ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಸಿಂಧನೂರ, ಯಾದಗಿರಿ ಮತ್ತು ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಮಂಜೂರಾತಿ ದೊರೆತಿದೆ. ಸಿಂಧನೂರಿನಲ್ಲಿ ಈ ವರ್ಷ ಕಾರ್ಯಾರಂಭ ಮಾಡಲಿದೆ. ಯಾದಗಿರಿ ಮತ್ತು ಚಿತ್ರದುರ್ಗಕ್ಕೆ ಮಂಜೂರಾಗಿದ್ದರೂ ಜಾಗದ ಸಮಸ್ಯೆಯಿಂದಾಗಿ ನನೆಗುದಿಗೆ ಬಿದ್ದಿವೆ.

15 ವರ್ಷದಿಂದ ನನೆಗುದಿಗೆ: ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಮಂಜೂರಾತಿ ಸಿಕ್ಕು ಬರೊಬ್ಬರಿ 15 ವರ್ಷ ಕಳೆದಿದೆ. ಸಂಸದರಾಗಿದ್ದ ಶಿವಕುಮಾರ ಉದಾಸಿ, ಹಾವೇರಿ ಮತ್ತು ಗದಗ ಜಿಲ್ಲೆಗೆ ತಲಾ ಒಂದೊಂದು ಕೆವಿ ಮಂಜೂರಾತಿ ಪಡೆದುಕೊಂಡಿದ್ದರು. ಹಾವೇರಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ 10ನೇ ತರಗತಿ ವರೆಗೆ ಶಾಲೆ ನಡೆಯುತ್ತಿದೆ. ಆದರೆ ಗದಗ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕನಿಷ್ಠ, ತಾತ್ಕಾಲಿಕ ಕಟ್ಟಡದಲ್ಲಾದರೂ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ.

ಅದ್ಯಾಕೆ ವಿಳಂಬ ?: ಮಂಜೂರಾಗಿದ್ದರೂ ಅದರ ನಿರ್ಮಾಣಕ್ಕೆ ಬೇಕಾಗುವ ಭೂಮಿಯನ್ನು ಗುರುತಿಸುವಲ್ಲಿ ಅಧಿಕಾರಿಗಳು ಮಾಡುತ್ತಿರುವ ದಿವ್ಯ ನಿರ್ಲಕ್ಷ್ಯ ಈ ವಿಳಂಬಕ್ಕೆ ಪ್ರಮುಖ ಕಾರಣ. ಮಾಜಿ ಸಂಸದ ಉದಾಸಿ 2ನೇ ಅವಧಿಯಲ್ಲಿ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಹರ್ತಿ ಗ್ರಾಮದ ಹತ್ತಿರ ಜಾಗ ಗುರುತಿಸಿ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಲಾಗಿತ್ತು. ರಾಜಕೀಯ ಕಾರಣದಿಂದಾಗಿ ಜಾಗ ದೊರೆಯಲಿಲ್ಲ. ಉದಾಸಿ ಅವರ 3ನೇ ಅವಧಿಯಲ್ಲಿಯೂ ರಾಜಕೀಯ ಕಾರಣಕ್ಕಾಗಿಯೇ ಭೂಮಿ ದೊರೆಯಲಿಲ್ಲ ಎನ್ನುವುದು ಜಗಜ್ಜಾಹೀರ. ಉದಾಸಿ ಅವರ ಅಧಿಕಾರಾವಧಿ ಮುಗಿದ ನಂತರ ಗದಗ ತಾಲೂಕಿನ ಶಿರುಂಜ ಗ್ರಾಮದ ಬಳಿ 10 ಎಕರೆ ಜಾಗ ಗುರುತಿಸಿ ಕೇಂದ್ರೀಯ ವಿದ್ಯಾಲಯ ಸಂಘಟನೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಡಳಿತ ಪತ್ರ ಬರೆದಿರುವುದು ಕೊಂಚ ಸಮಾಧಾನದ ಸಂಗತಿ.

ತಾತ್ಕಾಲಿಕ ಕಟ್ಟಡ ಗುರುತು: ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಲು ಭೀಷ್ಮ ಕೆರೆ ಹತ್ತಿರದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯನ್ನು ಜಿಲ್ಲಾಡಳಿತ ಗುರುತಿಸಿದೆ. ತಾತ್ಕಾಲಿಕ ಕಟ್ಟಡದಲ್ಲಿ ಕೊಠಡಿಗಳ ಸಂಖ್ಯೆ, ಅಳತೆ ಹಾಗೂ ಮೂಲ ಸೌಕರ್ಯಗಳ ಮಾಹಿತಿಯನ್ನೂ ಒದಗಿಸಿದೆ ಎನ್ನುವ ಚರ್ಚೆಗಳಿವೆ.

ಕೇಂದ್ರೀಯ ವಿದ್ಯಾಲಯ ಗದಗ ಜಿಲ್ಲೆಯಲ್ಲಿ ಸ್ಥಾಪನೆಗೆ ಬೇಕಾದ ಸ್ಥಳ ಗುರುತಿಸಲಾಗಿದೆ. ಕೇಂದ್ರೀಯ ವಿದ್ಯಾಲಯ ಸಂಘಟನ್ ಅಧಿಕಾರಿಗಳಿಗೆ ಜಾಗ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ