ದೇಶದ ಜನರ ನೆಮ್ಮದಿಗಾಗಿ ಈ ನ್ಯಾಯಯಾತ್ರೆ..!

KannadaprabhaNewsNetwork | Updated : Jan 15 2024, 05:23 PM IST

ಸಾರಾಂಶ

ಈ ದೇಶದಲ್ಲಿರುವ ಎಲ್ಲ ಜನರಿಗೆ ನ್ಯಾಯ ಸಿಗಬೇಕು, ಜನತೆ ಸುಖಃ ಶಾಂತಿಯಿಂದ ಬದುಕಬೇಕೆಂಬ ಮಹದಾಸೆಯಿಂದ ಎರಡನೇಯ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡು, ಇದಕ್ಕೆ ನ್ಯಾಯಯಾತ್ರೆ ಎಂದು ಹೆಸರಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರು ನ್ಯಾಯಕ್ಕಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಭಾರತ್ ಜೋಡೊ ನ್ಯಾಯಯಾತ್ರೆ ಆರಂಭಗೊಂಡ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿ, ಸಿಹಿ ಹಂಚಿ ಯಾತ್ರೆಗೆ ಶುಭ ಕೋರಲಾಯಿತು.

ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಕುರಿತು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಶಪಿ ಅಹಮದ್, ನಮ್ಮ ನಾಯಕ ರಾಹುಲ್‌ ಗಾಂಧಿ ಅವರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ, ಈ ದೇಶದಲ್ಲಿರುವ ಎಲ್ಲ ಜನರಿಗೆ ನ್ಯಾಯ ಸಿಗಬೇಕು. 

ಜನತೆ ಸುಖಃ ಶಾಂತಿಯಿಂದ ಬದುಕಬೇಕೆಂಬ ಮಹದಾಸೆಯಿಂದ ಎರಡನೇಯ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡು, ಇದಕ್ಕೆ ನ್ಯಾಯಯಾತ್ರೆ ಎಂದು ಹೆಸರಿಟ್ಟಿದ್ದಾರೆ.

ಕಳೆದ ಒಂದು ವರ್ಷದಿಂದ ಜಾತಿ ತಾರತಮ್ಯದ ಅಗ್ನಿಕುಂಡದಲ್ಲಿ ಬೇಯುತ್ತಿರುವ ಮಣಿಪುರದಿಂದ- ಮುಂಬೈನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರ ಯಾತ್ರೆ ಯಶ್ವಸಿಯಾಗಿ ಈ ನಾಡಿನ ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಲಿ ಎಂದು ಶುಭ ಹಾರೈಸಿದರು.

ನಗರಪಾಲಿಕೆ ಮಾಜಿ ಮೇಯರ್ ಅಸ್ಲಾಂ ಪಾಷ ಮಾತನಾಡಿ, ಬಿಜೆಪಿ ಒಂದು ಸುಳ್ಳಿನಪಕ್ಷ. ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿದೆ. ಶ್ರೀರಾಮ ನಮ್ಮೆಲ್ಲರ ಎದೆಯಲ್ಲೂ ಇದ್ದಾನೆ. 

ಈಗಾಗಲೇ ಕೋಟ್ಯಾಂತರ ರಾಮಮಂದಿರಗಳು ನಮ್ಮಲ್ಲಿವೆ. ಆದರೂ ಸಹ ೨೦೨೪ರ ಲೋಕಸಭಾ ಚುನಾವಣೆ ಗೆಲುವಿಗೆ ಪೂರ್ಣಗೊಳ್ಳದ ದೇವಾಲಯದ ಉದ್ಘಾಟನೆಗೆ ಇಡೀ ಆಡಳಿತವಲಯವನ್ನು ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. 

ಜನರು ಕಳೆದ ೧೦ ವರ್ಷಗಳಿಂದ ಅನುಭವಿಸಿದ ಬೆಲೆ ಹೆಚ್ಚಳ, ಇಂದನ ಹೆಚ್ಚಳ, ಅಗತ್ಯವಸ್ತುಗಳ ಬೆಲೆ ಹೆಚ್ಚಳ ಹಾಗೂ ದುರಾಡಳಿತವನ್ನು ಮರೆ ಮಾಚಲು ರಾಮಮಂದಿರದ ಹಿಂದೆ ಬಿದ್ದಿದ್ದಾರೆ. ಜನರು ತಾವು ಅನುಭವಿಸಿದ ಸಂಕಟಗಳನ್ನು ಈ ಚುನಾವಣೆಯಲ್ಲಿ ಹೊರಹಾಕಲಿದ್ದಾರೆ. 

ನಮ್ಮ ನಾಯಕರು ಇಂತಹ ದುರಾಡಳಿತದ ವಿರುದ್ಧ ಜನರನ್ನು ಸಂಘಟಿಸಲು ಭಾರತ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದು,ಇದು ನಿಶ್ಚಿತ ಯಶಸ್ಸು ಪಡೆಯಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ನಮ್ಮ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯಯಾತ್ರೆಯನ್ನು ತಡೆಯುವ ಹಲವಾರು ಷಡ್ಯಂತ್ರಗಳನ್ನು ಬಿಜೆಪಿ ರೂಪಿಸಿತ್ತು. 

ಆದರೆ ಅವುಗಳೆಲ್ಲವನ್ನೂ ಮೀರಿ ಇಂದಿನಿಂಧ ನ್ಯಾಯಯಾತ್ರೆ ಆರಂಭಗೊಂಡಿದೆ. ಇದು ಸತ್ಯ,ಧರ್ಮ ಮತ್ತು ಭಾರತೀಯ ಸಂಸ್ಕೃತಿ,ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಹಾ ಆಂದೋಲನ. 

ನ್ಯಾಯಾಯಾತ್ರೆಯ ಯಶಸ್ವಿಗಾಗಿ ರಾಹುಲ್‌ಗಾಂಧಿ ಅವರೊಂದಿಗೆ ಇಡೀ ಎಐಸಿಸಿ ತಂಡ ನಿಂತಿದೆ. ಕರ್ನಾಟಕದ ಮೂಲಕ ಹಾದು ಹೋದ ಭಾರತ ಜೋಡೋ ಯಾತ್ರೆ ಯಶಸ್ವಿಯಾದಂತೆ,ಮಣಿಪುರದಿಂದ ಮುಂಬೈವರೆಗೆ ನಡೆಯುವ ಭಾರತ್ ಜೋಡೋ ನ್ಯಾಯಯಾತ್ರೆ ಸಹ ನಿಶ್ಚಿತ ಗುರಿಯನ್ನು ತಲುಪಲಿದೆ ಎಂಬ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಈ ದೇಶದ ಜನಸಾಮಾನ್ಯರ ಅಭ್ಯುದಯಕ್ಕಾಗಿ ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯಯಾತ್ರೆ ಸುಮಾರು ೬೭೦೦ ಕಿಮೀ ಚಲಿಸಲಿದ್ದು, ಅದರ ಯಶಸ್ವಿಗಾಗಿ ಇಂದು ನಾವೆಲ್ಲರೂ ಶುಭ ಹಾರೈಸುವ ಸಲುವಾಗಿ ಸೇರಿದ್ದೇವೆ ಎಂದರು.

ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರು ಮೋದಿ ಆಡಳಿತದಲ್ಲಿ ಭ್ರಷ್ಟಾಚಾರವೇ ಇಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ಗಮನಿಸಿದರೆ ಹಾಸ್ಯಾಸ್ಪದ ಎನಿಸುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೇ ಭ್ರಷ್ಟಾಚಾರಕ್ಕೆ ಒಳಗಾಗಿ ಜೈಲು ಪಾಲಾಗಿದ್ದರು.

ಅವರಂತಹ ಅನೇಕರು ಜೈಲಿನಲ್ಲಿದ್ದಾರೆ. ಅತ್ಯಾಚಾರಿಗಳು, ಅನಾಚಾರಗಳಿಂದ ಬಿಜೆಪಿ ಪಕ್ಷ ತುಂಬಿ ಹೋಗಿದೆ. ಇದಕ್ಕೆ ಇತ್ತೀಚಿನ ಬಲ್ಕೀಸ್ ಭಾನು ಪ್ರಕರಣವೇ ಸಾಕ್ಷಿ. ಚುನಾವಣೆ ಬರುವವರೆಗೂ ಉಸಿರಾಡಲು ಪರದಾಡುತ್ತಿದ್ದ ಸಂಸದ ಆನಂತಕುಮಾರ್ ಹೆಗಡೆ ನಮ್ಮ ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಇದು ಅವರ ಪಕ್ಷದ ಸಿದ್ದಾಂತವನ್ನು ತೋರಿಸುತ್ತದೆ. ಕಾಂಗ್ರೆಸ್ ಎಂದಿಗೂ ಅಷ್ಟು ಕೀಳು ಮಟ್ಟಕ್ಕೆ ಇಳಿಯದು. ನಮಗೂ ಮಾತನಾಡಲು ಬರುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಅದಕ್ಕೆ ಅವಕಾಶವಿಲ್ಲ. ಇನ್ನು ಮುಂದಾದರೂ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ಚಂದ್ರಶೇಖರಗೌಡ ನುಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಮಹೇಶ್,ಮುಖಂಡರಾದ ಪಂಚಾಕ್ಷರಯ್ಯ,ಶ್ರೀನಿವಾಸ್,ಸಿಮೆಂಟ್ ಮಂಜಣ್ಣ,ಅಸ್ಲಾಂಪಾಷ, ಶಿವಾಜಿ, ಆತೀಕ ಅಹಮದ್, ನಾಗರಾಜು, ನರಸಿಂಹಯ್ಯ, ಬಿ.ಜಿ.ಲಿಂಗರಾಜು, ವಾಲೆಚಂದ್ರು,ಕೆಂಪಣ್ಣ,ಎಂ.ವಿ.ರಾಘವೇಂದ್ರಸ್ವಾಮಿ, ದಿನೇಶ್, ಷಣ್ಮುಖಪ್ಪ, ನಟರಾಜಶೆಟ್ಟಿ, ಶೆಟ್ಟಾಳಯ್ಯ, ಮರಿಚನ್ನಮ್ಮ, ಸುಜಾತ, ಆದಿಲ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಭಾರತ್ ಜೋಡೊ ನ್ಯಾಯಯಾತ್ರೆ ಆರಂಭಗೊಂಡ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

Share this article