ಅಪರಾಧ ಪ್ರಕರಣಗಳಲ್ಲೂ ಗಮನ ಸೆಳೆದ ವರ್ಷವಿದು

KannadaprabhaNewsNetwork | Published : Dec 30, 2024 1:01 AM

ಸಾರಾಂಶ

ಕೊಲೆ ಆರೋಪದಡಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲಿನಲ್ಲಿದ್ದ ನಟ ದರ್ಶನ್, ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್‌ ಆದರು.

ಮಂಜುನಾಥ ಕೆ.ಎಂ.

ಬಳ್ಳಾರಿ: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆದ ಆರೋಪದಡಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್, ದೇಶದ್ರೋಹಿಗಳ ಸೆರೆಗೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳ ದಾಳಿ, ಬಳ್ಳಾರಿಯ ರಾಜಕೀಯ ನಾಯಕರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ, ಪರಿಶೀಲನೆ, ರಸ್ತೆ ಅಪಘಾತದಲ್ಲಿ ನಗರದ ಬಿಮ್ಸ್ ಆಸ್ಪತ್ರೆಯ ನುರಿತ ವೈದ್ಯರ ಸಾವು ಪ್ರಕರಣಗಳು 2024ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಮುಖ ಘಟನಾವಳಿಗಳಲ್ಲಿ ದಾಖಲಾದವು.

ಕೊಲೆ ಆರೋಪದಡಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲಿನಲ್ಲಿದ್ದ ನಟ ದರ್ಶನ್, ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್‌ ಆದರು. ಬಳ್ಳಾರಿ ಜೈಲಿನಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ನಟನ ಮನವಿ, ಅಧಿಕಾರಿಗಳ ನಿರಾಕರಣೆ, ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚು ಚರ್ಚಿತಗೊಂಡವು. ಬಳ್ಳಾರಿ ಜೈಲಿನಿಂದ ಜಾಮೀನು ಪಡೆದು ತೆರಳುವವರೆಗೆ ದರ್ಶನ್ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದರು.

ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ 2024ರ ಆಗಸ್ಟ್‌ 29ರಂದು ಶಿಫ್ಟ್ ಆದ ದರ್ಶನ್ ಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿನ ಬಿಗಿ ನಿಯಮ ನುಂಗದ ತುತ್ತಾಯಿತು. ಸಮಯ ಕಳೆಯಲು ಟಿವಿ, ಮೆತ್ತನೆ ಹಾಸಿಗೆ, ದಿಂಬು, ಸರ್ಜಿಕಲ್ ಚೇರ್, ಶೌಚಕ್ಕೆ ವೆಸ್ಟನ್ ಕಮೋಡ್‌ ಬೇಕು ಎಂಬ ನಟ ದರ್ಶನ್‌ ಬೇಡಿಕೆಗಳನ್ನು ಜೈಲಿನ ಅಧಿಕಾರಿಗಳು ತಿರಸ್ಕರಿಸಿದರು. ಬೆನ್ನುನೋವಿನ ಸಮಸ್ಯೆ ಕುರಿತು ವೈದ್ಯರು ಖಚಿತಪಡಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲಾಯಿತು.

ದರ್ಶನ್ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟ ಜೈಲಿನ ಅಧಿಕಾರಿಗಳು, ನಿಯಮ ಮೀರಿ ಯಾವುದೇ ಸೌಲಭ್ಯ ನೀಡದಿರುವುದು ದರ್ಶನ್‌ಗೆ ನುಂಗದ ತುತ್ತಾಗಿತ್ತು. ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಿಸಲಾಯಿತು. ದರ್ಶನ್ ಬೆನ್ನುನೋವು ಉಲ್ಬಣಗೊಂಡಿದೆ. ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದು ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ದರ್ಶನ್‌ಗೆ ನ್ಯಾಯಾಲಯದಲ್ಲಿ ಷರತ್ತುಬದ್ಧ ಮಧ್ಯಂತರ ಜಾಮೀನು ದೊರೆಯಿತು. 2024ರ ಅಕ್ಟೋಬರ್ 30ರಂದು ದರ್ಶನ್ ಬಳ್ಳಾರಿ ಜೈಲಿಂದ ಬಿಡುಗಡೆಗೊಂಡು ಬೆಂಗಳೂರಿಗೆ ತೆರಳಿದರು.

ರಾಷ್ಟ್ರೀಯ ತನಿಖಾ ದಳ ದಾಳಿ:

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಜಾಡು ಹಿಡಿದು ಹೊರಟ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದಲ್ಲಿ ಅಡಗಿದ್ದ ನಿಷೇಧಿತ ಪಿಎಫ್‌ಐ ಸಂಘಟನೆ ಜತೆ ನಂಟು ಹೊಂದಿದ್ದ ಮಿನಾಜ್ ಅಲಿಯಾಸ್ ಎಂ.ಡಿ. ಸುಲೇಮಾನ್ ಹಾಗೂ ಸೈಯದ್ ಸಮೀರ್ ಎಂಬುವರನ್ನು ಕಳೆದ ಮಾರ್ಚ್ 12 ರಂದು ಬಂಧಿಸಿದ್ದರು. ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಸುಧಾರಿತ ಬಾಂಬ್‌ಗಳನ್ನು ತಯಾರಿಸಿ ದೇಶದಲ್ಲಿ ಉಗ್ರ ಕೃತ್ಯ ಎಸಗಲು ಇವರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಬಹಿರಂಗಗೊಂಡಿತ್ತು.

ಬಳ್ಳಾರಿ ಘಟಕದ ಐಸಿಸ್‌ ಶಂಕಿತರು ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದರು. ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಜಿಹಾದ್ ಬೋಧನೆ ಮತ್ತು ಮತೀಯವಾದವನ್ನು ತಲೆಯಲ್ಲಿ ತುಂಬಿ ಐಸಿಸ್‌ಗೆ ನೇಮಕಾತಿ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಜಿಹಾದ್ ಸಂಬಂಧಿ ಪೋಸ್ಟರ್‌, ಪುಸ್ತಕಗಳು, ಪ್ರಿಂಟರ್ ಮತ್ತಿತರ ವಸ್ತುಗಳನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಜಾರಿ ನಿರ್ದೇಶನಾಲಯ ದಾಳಿ:

ನಗರ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿ, ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಕಚೇರಿ ಸೇರಿದಂತೆ ಶಾಸಕರ ಸಂಪರ್ಕ ಇರುವ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ ಫೆ. 9ರಂದು ಏಕಕಾಲದಲ್ಲಿ ದಾಳಿ ನಡೆಸಿದ್ದರು. ನೆಹರು ಕಾಲನಿಯಲ್ಲಿರುವ ಶಾಸಕ ರೆಡ್ಡಿ ನಿವಾಸ, ಗಾಂಧಿನಗರದಲ್ಲಿರುವ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ನಾಲ್ಕೈದು ತಾಸುಗಳ ಕಾಲ ತಪಾಸಣೆ ನಡೆಸಿ, ದಾಖಲೆಗಳನ್ನು ಸಂಗ್ರಹಿಸಿದ್ದರು. ದಾಳಿ ಕ್ರಮವನ್ನು ಖಂಡಿಸಿದ್ದ ಕಾಂಗ್ರೆಸ್ ನಾಯಕರು, ಕಲ್ಯಾಣ ಕರ್ನಾಟಕದ ಯುವ ಐಕಾನ್ ಆಗಿ ಬೆಳೆಯುತ್ತಿರುವ ಶಾಸಕ ಭರತ್ ರೆಡ್ಡಿ ಅವರ ರಾಜಕೀಯ ಬೆಳವಣಿಗೆಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಇಡಿ ಬಳಸಿಕೊಂಡಿದೆ ಎಂದು ದೂರಿದ್ದರು.

ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ನಿವಾಸ, ಆಪ್ತರ ನಿವಾಸಗಳ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿರುವ ನಾಗೇಂದ್ರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ, ಮಾಹಿತಿಯನ್ನು ಸಂಗ್ರಹಿಸಿದ್ದರು. ಕಳೆದ ನವೆಂಬರ್ 30ರಂದು ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮ ಮತ್ತು ಆಂಧ್ರಪ್ರದೇಶದ ವಿಡಪನಕಲ್ಲು ಗ್ರಾಮದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಮ್ಸ್‌ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮೃತಪಟ್ಟರು. ವೈದ್ಯರಾದ ಗೋವಿಂದರಾಜುಲು, ಯೋಗೀಶ್‌ ಅವರ ಸಾವು ಬೆಚ್ಚಿಬೀಳಿಸಿತ್ತು.

Share this article