ಹಾವೇರಿ: ಮೆಕ್ಕೆಜೋಳದಲ್ಲಿ ಬೆಳೆದಿರುವ ಮುಳ್ಳುಸಜ್ಜೆ ಕಳೆ ನಿಯಂತ್ರಿಸಲು ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀನಿವಾಸ ಆಗ್ರೋ ಸೆಂಟರ್‌ನವರು ನೀಡುತ್ತಿದ್ದ ಕಳೆನಾಶಕ ಉತ್ಪನ್ನದ ಗುಣಮಟ್ಟದ ಪರೀಕ್ಷೆಯ ಲ್ಯಾಬ್ ವರದಿ ಬಹಿರಂಗವಾಗಿದ್ದು, ಅದರಲ್ಲಿ ಯಾವುದೇ ಕಳೆನಾಶಕ ಅಂಶ ಇಲ್ಲ ಎಂಬ ಅಂಶ ದೃಢಪಟ್ಟಿದೆ.ಮೆಕ್ಕೆಜೋಳ ಬೆಳೆಯಲ್ಲಿ ಬೆಳೆದಿರುವ ಮುಳ್ಳುಸಜ್ಜೆ ನಿರ್ಮೂಲನೆಗೆ ಶ್ರೀನಿವಾಸ ಆಗ್ರೋ ಸೆಂಟರ್‌ನವರು ಬಿಎಎಸ್‌ಎಫ್ ಕಂಪನಿಯ ಟಿಂಝರ್, ಅಟ್ರಾಜಿನ್ ಜತೆಗೆ ವೀಡ್ ಮಾಸ್ಟರ್ ಎಂಬ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಇದನ್ನು ಖರೀದಿಸಿದ್ದ ಕೆಲ ರೈತರು ಇದು ಉತ್ತಮ ಫಲಿತಾಂಶ ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಹೀಗಾಗಿ ಇದನ್ನು ಖರೀದಿಸಲು ಜಿಲ್ಲೆ ಸೇರಿದಂತೆ ಬೇರೆ- ಬೇರೆ ಜಿಲ್ಲೆಯ ರೈತರು ಮುಗಿ ಬಿದ್ದಿದ್ದರು. ಹೀಗಾಗಿ ಅಂಗಡಿ ಮುಂಭಾಗದಲ್ಲಿ ಸಾವಿರಾರು ರೈತರು ಮುಗಿಬಿದ್ದಿದ್ದರು.ಮುಳ್ಳುಸಜ್ಜೆ ಕಳೆಗೆ ವಿತರಿಸುತ್ತಿದ್ದ ಆಗ್ರೋ ಸೆಂಟರ್‌ಗೆ ಜು. 3ರಂದು ಕೃಷಿ ಅಧಿಕಾರಿಗಳಾದ ಬಸನಗೌಡ ಪಾಟೀಲ, ಧನಂಜಯ ನಾಗಣ್ಣನವರ ಭೇಟಿ ನೀಡಿ ಪರಿಶೀಲಿಸಿದ್ದರು. ಟಿಂಝರ್, ಅಟ್ರಾಜಿನ್ ಜತೆಗೆ ವೀಡ್ ಮಾಸ್ಟರ್ ಎಂಬ ಉತ್ಪನ್ನ ಸೇರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು. ಆದರೆ, ವೀಡ್ ಮಾಸ್ಟರ್ ಉತ್ಪನ್ನ ಮಾರಾಟಕ್ಕೆ ಅಧಿಕೃತ ದಾಖಲಾತಿ ಇರಲಿಲ್ಲ. ಹೀಗಾಗಿ ಸೆಂಟರ್ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಈ ಮೂರು ಕಳೆನಾಶಕ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈಗ ಅದರ ಪರೀಕ್ಷಾ ವರದಿ ಬಹಿರಂಗಗೊಂಡಿದೆ.ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ಮುಳ್ಳುಸಜ್ಜೆಗೆ ಶ್ರೀನಿವಾಸ ಆಗ್ರೋ ಸೆಂಟರ್‌ನವರು ಕೊಡುತ್ತಿದ್ದ ಕಳೆನಾಶಕ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದೆವು. ಅವರು ವೀಡ್ ಮಾಸ್ಟರ್ ಎಂಬ ಉತ್ಪನ್ನ ಮಾರಾಟ ಮಾಡುತ್ತಿದ್ದರು. ಅದರಲ್ಲಿ ಟೊಬ್ರೊಮಾಜಿನ್ ಎಂಬ ಕಳೆನಾಶಕದ ಅಂಶ ಇದೆ ಸ್ಟೀಕರ್ ಹಚ್ಚಿ ಮಾರಾಟ ಮಾಡುತ್ತಿದ್ದರು. ಪ್ರಯೋಗಾಲಯದಲ್ಲಿ ಟೊಬ್ರೊಮಾಜಿನ್ ಅಂಶ ಇಲ್ಲ ಎಂಬ ವರದಿ ಬಂದಿದೆ. ಕಳೆನಾಶಕ ಅಂಶವೂ ಇಲ್ಲ ಎಂದು ವರದಿಯಲ್ಲಿ ಗೊತ್ತಾಗಿದೆ. ಈಗ ವರದಿ ಆಧರಿಸಿ ದೂರು ದಾಖಲಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.ಮೆಕ್ಕೆಜೋಳದಲ್ಲಿ ಬೆಳೆದಿರುವ ಮುಳ್ಳು ಸಜ್ಜೆ ಕಳೆಗೆ ನಿಗದಿತವಾಗಿ ಯಾವುದೇ ಕಳೆನಾಶಕ ಇಲ್ಲ, ಹೀಗಾಗಿ ರೈತರು ಎಡೆಕುಂಟೆ ಹೊಡೆದೇ ಅದನ್ನು ನಿಯಂತ್ರಿಸಿಕೊಳ್ಳಬೇಕು. ಅಲ್ಲದೇ ಪ್ರತಿವರ್ಷ ಮೆಕ್ಕೆಜೋಳ ಬಿತ್ತನೆ ಮಾಡುವುದರಿಂದ ಮುಳ್ಳುಸಜ್ಜೆ ಕಳೆ ಹೆಚ್ಚಾಗಿ ಬೆಳೆಯುತ್ತೆ. ಕಾರಣ ಬೆಳೆ ಪರಿವರ್ತನೆ ಮಾಡಬೇಕು. ರೈತರು ಆತುರ ಪಡದೇ ಪ್ರಮಾಣಿತ ಔಷಧಿ ಖರೀದಿಸಬೇಕು. ರೈತರು ಕಳೆನಾಶಕವನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಅಲ್ಲದೇ ಬಿಲ್‌ಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ತಿಳಿಸಿದರು.