ತಿತಿಮತಿ: ಕಾಡಾನೆ ಹಾವಳಿ ಪರಿಹಾರ ಆಗ್ರಹಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jun 07, 2026, 02:45 AM IST
ಚಿತ್ರ :  6ಎಂಡಿಕೆ3 : ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಕಾಡಾನೆ ದಾಳಿಯಿಂದ ಮೃತಪಟ್ಟ ಮಾಜಿ ಐಪಿಎಸ್ ಅಧಿಕಾರಿ ಸುನೀಲ್‌ ಅಚ್ಚಯ್ಯ ಅವರ ಪತ್ನಿ ಸಾವಿಗೆ ಅರಣ್ಯ ಇಲಾಖೆ ನೇರ ಹೊಣೆ ಎಂದು ಆರೋಪಿಸಿ ಕೊಡಗು ಜಿಲ್ಲಾ ರೈತ ಸಂಘದಿಂದ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಹೆದ್ದಾರಿ ಬಂದ್ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕಾಡಾನೆ ದಾಳಿಯಿಂದ ಮೃತಪಟ್ಟ ಮಾಜಿ ಐಪಿಎಸ್ ಅಧಿಕಾರಿ ಸುನೀಲ್‌ ಅಚ್ಚಯ್ಯ ಅವರ ಪತ್ನಿ ಸಾವಿಗೆ ಅರಣ್ಯ ಇಲಾಖೆ ನೇರ ಹೊಣೆ ಎಂದು ಆರೋಪಿಸಿ ಕೊಡಗು ಜಿಲ್ಲಾ ರೈತ ಸಂಘದಿಂದ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಹೆದ್ದಾರಿ ಬಂದ್ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಿತಿಮತಿ ಗೋಣಿಕೊಪ್ಪ ರಸ್ತೆ ಮಾರ್ಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದ ಗೋಣಿಕೋಪ್ಪ- ಮೈಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಕಾಡಾನೆ ಹಾವಳಿ ಮಿತಿಮೀರಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಕ್ರೋಶ ಹೋರ ಹಾಕಿದರು. ಈ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ರೈತ ಸಂಘಟನೆಯ ಪ್ರಮುಖರ ನಡುವೆ ಮಾತಿನ ಚಕಮಕಿ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರ ನಿಯೋಜನೆ ಮಾಡಲಾಗಿತ್ತು.

ಬೆಳಗ್ಗೆ 11.15 ಕ್ಕೆ ಆರಂಭಗೊಂಡ ಹೆದ್ದಾರಿ ತಡೆ ಸುಮಾರು 4.30 ಗಂಟೆವರೆಗೂ ಮುಂದುವರಿಯಿತು. ನಂತರ ಪಾಲಿಬೆಟ್ಟ, ಮಾಲ್ದಾರೆ, ಪಿರಿಯಾಪಟ್ಟಣ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರಯಾಣಿಕರು ವಾಹನದಲ್ಲೇ ಕಾಲ ಕಳೆಯುವಂತಾಯಿತು. ಪ್ರತಿಭಟನೆಯಲ್ಲಿ ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜೀವ ಹಾನಿ ಬಗ್ಗೆ ಸರ್ಕಾರಗಳು ಸೂಕ್ತ ನಿರ್ಧಾರ ತೆಗೆದುಕೊಂಡು ಜನರ ಜೀವ ಉಳಿಸಲು ಪ್ರಯತ್ನ ನಡೆಸಬೇಕು. ಇದೇ ರೀತಿ ಮುಂದುವರಿದರೆ ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯುಕೋ ಸಂಘಟನೆ ಮುಖ್ಯಸ್ಥ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಆನೆಗಳ ಸಂಖ್ಯೆ ನಿಯಂತ್ರಣದಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಸರ್ಕಾರ ಸೆಕ್ಷನ್ 370, ಐಪಿಎಸ್ ಸೆಕ್ಷನ್ ಕೂಡ ಬದಲಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದೆ. ಇದೇ ರೀತಿ ಸಂಖ್ಯೆ ನಿಯಂತ್ರಣಕ್ಕೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಸಂಘಟನೆ ಮುಖ್ಯಸ್ಥ ಪಿ. ಆರ್. ಭರತ್ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾನವ ಹಾನಿಗೆ ಅರಣ್ಯ ಇಲಾಖೆ ಅವೈಜ್ಞಾನಿಕ ನೀತಿ ಕಾರಣ ಎಂದರು.

ರೈತ ಮುಖಂಡ ಚೆಟ್ರುಮಾಡ ಸುಜಯ್ ಬೋಪಯ್ಯ ಚೆಪ್ಪುಡೀರ ಕಾರ್ಯಪ್ಪ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಗೋಣಿಕೊಪ್ಪ ಚೇಂಬ‌ರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್‌ ಮಾದಪ್ಪ, ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ. ಚೆಪ್ಪುಡೀರ ಕುಶಾಲಪ್ಪ, ಮುಖಂಡ ಸಿ. ಕೆ. ಬೋಪಣ್ಣ ಪಿರಿಯಾಪಟ್ಟಣ ಮತ್ತು ಹೊರ ಜಿಲ್ಲೆಗಳ ರೈತ ಮುಖಂಡರು ಮಾತನಾಡಿ, ಆಕ್ರೋಶ ವ್ಯಕ್ತಪಡಿಸಿದರು. ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.ರಾಜ್ಯ ಸರ್ಕಾರದ ಕ್ರಮಕ್ಕೆ ಸಹಕಾರ: ಯದುವೀರ್ ಒಡೆಯರ್

ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಪರಿಹಾರಕ್ಕೆ ಆಗ್ರಹಿಸಿ ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆ ತಿತಿಮತಿಯಲ್ಲಿ ಮೈಸೂರು-ಗೋಣಿಕೊಪ್ಪ ಹೆದ್ದಾರಿ ತಡೆ ನಡೆಯುತ್ತಿದ್ದ ಸ್ಥಳಕ್ಕೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಕಾಫಿ ತೋಟಗಳಲ್ಲಿ ಜನರು ಭಯದಿಂದ ಬದುಕು ಸಾಗಿಸುತ್ತಿದ್ದಾರೆ. ದೇಶದಾದ್ಯಂತ ಹೋಲಿಸಿದಲ್ಲಿ‌ ಕರ್ನಾಟಕದಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕಾರ ನೀಡಲಾಗುವುದು‌ ಎಂದರು.

ಹಾವಳಿ ನಿಯಂತ್ರಣಕ್ಕೆ ಕ್ರಮ: ಎ.ಎಸ್ ಪೊನ್ನಣ್ಣ

ರೈತ ಸಂಘದ ವತಿಯಿಂದ ತಿಮತಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ ಶಾಸಕರಾದ ಎ.ಎಸ್ ಪೊನ್ನಣ್ಣರವರು ತಮ್ಮ ಬೆಂಗಳೂರು ಕಾರ್ಯಕ್ರಮವನ್ನು ಮುಂದೂಡಿ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಮಾತನಾಡಿಸಿದರು. ಕೂಡಲೇ ಶಾಸಕರು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಕರೆ ಮೂಲಕ ಸಂಪರ್ಕಿಸಿ, ಕೂಡಲೇ ಸಿಸಿಎಫ್ ರವರನ್ನು ಸ್ಥಳಕ್ಕೆ ಬರುವಂತೆ ಸೂಚಿಸಲು ತಿಳಿಸಿದರಲ್ಲದೆ, ಸಮಸ್ಯೆಯನ್ನು ಬಗೆಹರಿಸಿ ತನಗೆ ವರದಿ ನೀಡುವಂತೆ ಸೂಚಿಸಿದರು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ನಮ್ಮ ಸರ್ಕಾರ ಕ್ರಮ ಹಲವು ಕ್ರಮ ತೆಗೆದುಕೊಳ್ಳುತ್ತಿದೆ. ಆನೆ ಕಾರಿಡಾರ್ ಯೋಜನೆ ಕೂಡ ಸಿದ್ಧಗೊಳ್ಳುತ್ತಿದೆ. ಮುಂದಿನ ಅರಣ್ಯ ಸಚಿವರಲ್ಲಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಪೊನ್ನಣ್ಣ ಅರಣ್ಯ ಸಚಿವರಾಗಲಿ!: ಶಾಸಕ ಎ.ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವರಾಗಲಿ ಎಂದು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಹಾಗೂ ಪ್ರತಿಭಟನಾಕಾರರು ಪ್ರತಿಭಟನಾ ಸಂದರ್ಭ ಸರ್ಕಾರವನ್ನು ಒತ್ತಾಯಿಸಿದರು. ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯನವರು ಪ್ರತಿಭಟನೆ ಉದ್ದೇಶವನ್ನು ವಿವರಿಸಿ ಶಾಸಕ ಪೊನ್ನಣ್ಣ ರವರು ಅರಣ್ಯ ಸಚಿವರಾಗಿ ಬಂದಲ್ಲಿ ತಮ್ಮ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊನ್ನಣ್ಣ ಅವರಿಗೆ ಜವಾಬ್ದಾರಿ ನೀಡಿದರೆ ಅದನ್ನು ನಿಭಾಯಿಸುವ ಪ್ರಯತ್ನ ಖಂಡಿತಾ ಮಾಡುತ್ತಾರೆಂದು ಹೇಳಿದರು. ಪ್ರತಿಭಟನಾಕಾರರ ಪರವಾಗಿ ಪದೇ ಪದೇ ಅರಣ್ಯ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕೆಂದು ಹಠ ಹಿಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಪೈಪ್‌ಲೈನ್‌ ಸಂಪರ್ಕ ಮುಂದಿನ ವರ್ಷ ಪೂರ್ಣ
ಎನ್‌ಎಂಪಿಎಯಲ್ಲಿ ವಿಶ್ವ ಪರಿಸರ ದಿನಾಚರಣೆ