ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು

KannadaprabhaNewsNetwork |  
Published : Aug 30, 2026, 02:00 AM IST
ಹೂವಿನಹಡಗಲಿಯ ಕಾಯಕ ನಗರದಲ್ಲಿ ಎರಡು ಗುಡಿಸಲು ಬೆಂಕಿಗೆ ಆಹುತಿಯಾದ ಸ್ಥಳಕ್ಕೆ ಶಾಸಕ ಕೃಷ್ಣನಾಯ್ಕ ಭೇಟಿ ನೀಡಿ ಸಂತ್ರಸ್ತರಿಗೆ ಸಂತ್ವಾನ ಹೇಳಿದರು.  | Kannada Prabha

ಸಾರಾಂಶ

ಈ ಕ್ಷೇತ್ರದ ಮತದಾರರು ಯೋಗ್ಯ ಯಾರು? ಅಯೋಗ್ಯ ಯಾರು ಎಂಬುದನ್ನು ಈ ಹಿಂದೆಯೇ ನಿರ್ಧರಿಸಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷರಿಗೆ ಕನಿಷ್ಠ ಕಾನೂನಿನ ಅರಿವು ಇಲ್ಲ. ಬೆಂಗಾವಲು ವಾಹನ ಪಡೆದು ಕ್ಷೇತ್ರದಲ್ಲಿ ಶೋ ನಡೆಸಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಕುಟುಕಿದರು.

ಹೂವಿನಹಡಗಲಿ: ಈ ಕ್ಷೇತ್ರದ ಮತದಾರರು ಯೋಗ್ಯ ಯಾರು? ಅಯೋಗ್ಯ ಯಾರು ಎಂಬುದನ್ನು ಈ ಹಿಂದೆಯೇ ನಿರ್ಧರಿಸಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷರಿಗೆ ಕನಿಷ್ಠ ಕಾನೂನಿನ ಅರಿವು ಇಲ್ಲ. ಬೆಂಗಾವಲು ವಾಹನ ಪಡೆದು ಕ್ಷೇತ್ರದಲ್ಲಿ ಶೋ ನಡೆಸಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಕುಟುಕಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವರ ರೀತಿಯಲ್ಲಿ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ನೀರಾವರಿ ಅಧಿಕಾರಿಗಳಿಗೆ ಪತ್ರ ಬರೆಸಿ, ಅಧಿಕೃತವಾಗಿ ಸಭೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಇದ್ದರೆ ನೀರಾವರಿ ಇಲಾಖೆ ಸಚಿವರು, ಎಂಡಿ, ಸಿಎಸ್‌ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳಲಿ, ಅದು ಬಿಟ್ಟು, ನೀರಾವರಿ ಅಧಿಕಾರಿಗಳ ಸಭೆ ಮಾಡಿ, ಆ ಕುರಿತು ತಮ್ಮ ಹಿಂಬಾಲಕರಿಂದ ವಿಡಿಯೋ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಸಭೆಗೆ ನನಗೆ ಆಹ್ವಾನವಿರಲಿಲ್ಲ, ಈ ಸಭೆಯಲ್ಲಿ ತಮ್ಮ ಹಿಂಬಾಲಕರನ್ನು ಇರಿಸಿಕೊಂಡು ನೀರಾವರಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ. ಈ ಕುರಿತು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ 100ಕ್ಕೂ ಜನರಿಗೆ ಸಚಿವ ಸಂಪುಟ ಸ್ಥಾನಮಾನ ಇದೆ. ಆದರೆ, ಎಲ್ಲರಿಗೂ ಬೆಂಗಾವಲು ವಾಹನ ನೀಡಿಲ್ಲ. 4 ಬಾರಿ ಶಾಸಕರು, 2 ಬಾರಿ ಮಂತ್ರಿಯಾದವರಿಗೆ ಕಾನೂನು ತಿಳಿವಳಿಕೆ ಕಡಿಮೆ ಇದೆ. ಇದು ಮೂರ್ಖತನದ ಕೆಲಸ ಎಂದು ಕೃಷ್ಣನಾಯ್ಕ ಜರಿದರು.

ಗ್ಯಾರಂಟಿ ಯೋಜನೆಗಳ ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ರಾಜ್ಯ ಉಪಾಧ್ಯಕ್ಷ ಹುದ್ದೆ ನೀಡಿದ್ದಾರೆ. ಅಧಿಕಾರಿಗಳ ಸಭೆ ಮಾಡಲು ಅಲ್ಲ. ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ವೇತನ, ಪರಿಷ್ಕರಣೆ ಹೆಸರಿನಲ್ಲಿ 5 ತಿಂಗಳಿಂದ ಹಣ ನೀಡಿಲ್ಲ. ಗೃಹಲಕ್ಷ್ಮಿ ಹಣವನ್ನು ಕೊಡಿಸಲು ಸರ್ಕಾರಕ್ಕೆ ಒತ್ತಡ ತರಲಿ ಎಂದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಬನ್ನಿಕಲ್ಲು ಕೆರೆಗೆ 34 ಕಿಮೀ ಉದ್ದ ಪೈಪ್‌ಲೈನ್‌ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ನೀರಾವರಿ ಅಧಿಕಾರಿಗಳ ಬಳಿ ನಾನು ಹೇಳಿದ್ದೆ. ಆದರೆ, ಪಿ.ಟಿ. ಪರಮೇಶ್ವರ ನಾಯ್ಕ ಹಂಪಸಾಗರದಿಂದ ಪ್ರತ್ಯೇಕ ಪೈಪ್‌ಲೈನ್‌ ಕಾಮಗಾರಿ ಮಾಡಬೇಕು ಎಂದು ಈ ಹಿಂದೆ ನೀರಾವರಿ ಸಚಿವರಾಗಿದ್ದ ರಾಮಲಿಂಗರೆಡ್ಡಿ ಅವರಿಗೆ ಪತ್ರ ಬರೆದು ನೀಡಿದ್ದಾರೆ. ಪೈಪ್‌ಲೈನ್‌ ಕಾಮಗಾರಿ ಮಾಡುವಾಗ ಇವರೇ ಸಚಿವರಿದ್ದರು. ಆಗ ಯಾಕೆ ಅವೈಜ್ಞಾನಿಕ ಅಂತ ಅರ್ಥವಾಗಲಿಲ್ಲ? ಈಗ ಕೆರೆಗೆ ನೀರು ಹರಿಸಿದ್ದು ನಾನು ಎಂದು ಕೆರೆದಂಡದಲ್ಲಿ ಪಿ.ಟಿ. ಪರಮೇಶ್ವರನಾಯ್ಕ ಅವರಿಗೆ ಜೈಕಾರ ಹಾಕಿಸುವ ಕೆಲಸ ಮಾಡುತ್ತಾರೆ ಎಂದು ದೂರುತ್ತ, ಕ್ಷೇತ್ರದಲ್ಲಿ ಸಾಕಷ್ಟು ಕೆರೆಗಳ ಪೈಪ್‌ಲೈನ್‌ ಕಳಪೆಯಾಗಿವೆ. ರೈತರ ಜಮೀನುಗಳಲ್ಲಿ ಪೈಪ್‌ ಒಡೆದಾಗ ರೈತರಿಗೆ ನಾನು ಸ್ವಂತ ಹಣ ನೀಡಿದ್ದೇನೆ. ಕಳೆದ 2 ವರ್ಷದಿಂದ ಹಗಲು-ರಾತ್ರಿ ಅಧಿಕಾರಿಗಳ ಜತೆಗೆ ತಿರುಗಾಡಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ತಾಲೂಕಿನ ದಾಸನಹಳ್ಳಿ, ಹ್ಯಾರಡ, ಕೋಮಾರನಹಳ್ಳಿ ತಾಂಡಾ, ಕಗ್ಗಲಗಟ್ಟಿ ತಾಂಡಾ ಇತರ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಿದ್ದೇನೆ ಎಂದು ರೈತರಿಗೆ ಸುಳ್ಳು ಹೇಳುತ್ತಿರುವ ಇವರು, ಈ ಕುರಿತು ಅಂದಿನ ಸೆಟ್‌ಲೈಟ್‌ ಪೋಟೋ ಮತ್ತು ಅಧಿಕಾರಿಗಳ ಮಾಹಿತಿ ಪ್ರಕಾರ, ಅಲ್ಪ ಸ್ವಲ್ಪ ನೀರು ಹರಿಸಿ, ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಗುಡಿಸಲು ಸುಟ್ಟ ಸ್ಥಳಕ್ಕೆ ಶಾಸಕ ಕೃಷ್ಣನಾಯ್ಕ ಭೇಟಿ

ಹೂವಿನಹಡಗಲಿ: ಪಟ್ಟಣದ ಕಾಯಕ ನಗರದಲ್ಲಿ ಶುಕ್ರವಾರ ಎರಡು ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಭಸ್ಮವಾಗಿದ್ದ ಸ್ಥಳಕ್ಕೆ ಶಾಸಕ ಕೃಷ್ಣನಾಯ್ಕ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ಎರಡು ಕುಟುಂಬಗಳಿಗೆ ತಲಾ ₹50 ಸಾವಿರ ವೈಯಕ್ತಿಕ ಪರಿಹಾರ ನೀಡುವ ಭರವಸೆ ನೀಡಿದರು. ಅಂಗವಿಕಲ ದಂಪತಿ ಪ್ರಕಾಶ ವಿಶಾಲಾಕ್ಷಿ ಮತ್ತು ಗಂಟಿ ಬಸೀರ್‌ ಸಾಬ್‌ ಅವರ ಗುಡಿಸಲು ಸೇರಿ ಧವಸ ಧಾನ್ಯ, ಪಾತ್ರೆ, ಬಟ್ಟೆ ಬೆಂಕಿಗೆ ಆಹುತಿಯಾಗಿದ್ದವು. ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ, ಸರ್ಕಾರದ ನಿಯಮದ ಪ್ರಕಾರ ನಿವೇಶನ ಕೊಡಿಸುವ ಭರವಸೆ ನೀಡಿ, ಧರ್ಮಸ್ಥಳ ಸಂಘದಿಂದ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ಜೆಡಿಎಸ್‌ ಮುಖಂಡ ಕೆ.ಪುತ್ರೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಸಿದ್ದಾಪುರ ಟಿಎಂಎಸ್‌ಗೆ ₹೪.೫೫ ಕೋಟಿ ನಿವ್ವಳ ಲಾಭ: ಆರ್.ಎಂ. ಹೆಗಡೆ