ಕಳೆದ ಮಾರ್ಚ್ ೩೧ಕ್ಕೆ ಮುಕ್ತಾಯಗೊಂಡ ಸಾಲಿನಲ್ಲಿ ನಮ್ಮ ಸಂಘದ ಒಟ್ಟು ವಹಿವಾಟು ₹೨೨೩.೮೯ ಕೋಟಿ ತಲುಪಿದ್ದು, ದುಡಿಯುವ ಬಂಡವಾಳವು ₹೨೫೦.೯೬ ಕೋಟಿಗೂ ಅಧಿಕವಾಗಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು ಪ್ರಸಕ್ತ ೨೦೨೫-೨೬ನೇ ಹಣಕಾಸು ಸಾಲಿನಲ್ಲಿ ತನ್ನ ದಕ್ಷ ಆಡಳಿತ ಮತ್ತು ಭದ್ರ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡು ₹೫,೪೬,೯೯,೦೨೪ ನಿರ್ವಹಣಾ ಲಾಭಗಳಿಸಿ ಎಲ್ಲಾ ಶಾಸನಬದ್ಧ ನಿಧಿಗಳನ್ನು ಕಾಯ್ದಿರಿಸಿದ ನಂತರ ₹೪ ಕೋಟಿ ೫೫ ಲಕ್ಷ,,೯೯ ಸಾವಿರದ ೨೪ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ನಮ್ಮ ಸಂಸ್ಥೆಯು ಯಶಸ್ವಿ ೭೯ ವರ್ಷ ಪೂರೈಸಿ, ಈಗ ೮೦ನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ಮಾರ್ಚ್ ೩೧ಕ್ಕೆ ಮುಕ್ತಾಯಗೊಂಡ ಸಾಲಿನಲ್ಲಿ ನಮ್ಮ ಸಂಘದ ಒಟ್ಟು ವಹಿವಾಟು ₹೨೨೩.೮೯ ಕೋಟಿ ತಲುಪಿದ್ದು, ದುಡಿಯುವ ಬಂಡವಾಳವು ₹೨೫೦.೯೬ ಕೋಟಿಗೂ ಅಧಿಕವಾಗಿದೆ. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಪ್ಲಾಸ್ಟಿಕ್ ಸಾಮಗ್ರಿ ಸೇರಿ ₹೬ ಕೋಟಿ ೯೬ ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ಒಟ್ಟಾರೆ ₹೪.೫೫ ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದರು.
ಸದಸ್ಯರು ಮತ್ತು ರೈತರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿ ಒಟ್ಟು ಠೇವಣಿ ₹೧೨೪.೭೭ ಕೋಟಿ ದಾಟಿದೆ. ಸಂಘವು ಸತತವಾಗಿ ಅ ವರ್ಗದ ಆಡಿಟ್ ಶ್ರೇಣಿ ಕಾಯ್ದುಕೊಂಡಿದ್ದು, ಈ ಬಾರಿಯೂ ಸದಸ್ಯರಿಗೆ ಶೇ. ೧೫ರಷ್ಟು ಭರ್ಜರಿ ಲಾಭಾಂಶ (ಡಿವಿಡೆಂಡ್) ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.೨೦೨೫-೨೬ ನೇ ಸಾಲಿನಲ್ಲಿ ಸಂಘದ ಮೂಲ ಸೌಕರ್ಯಗಳನ್ನು ಬಲಪಡಿಸಲು ಮತ್ತು ಸದಸ್ಯರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಸಂಘದ ವಾರ್ಷಿಕ ಮಹಾಸಭೆಯು ಸೆ.೫ರಂದು ಸಂಘದ ಪ್ರಧಾನ ಕಚೇರಿಯ ವ್ಯಾಪಾರಾಂಗಣದಲ್ಲಿ, ಇದಕ್ಕೂ ಮುನ್ನ ಸೆ.೧ರಂದು ಶಿರಸಿ ಮಾರಾಟ ಮಳಿಗೆಯಲ್ಲಿ, ಸೆ.೩ರಂದು ಕಾನಸೂರು ಶಾಖೆಯಲ್ಲಿ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಜಿ. ನಾಯ್ಕ, ನಿರ್ದೇಶಕರಾದ ಸುಲೋಚನಾ ಶಾಸ್ತ್ರಿ, ಇಂದಿರಾ ಭಟ್ಟ, ರಮೇಶ ಹೆಗಡೆ, ಎಸ್.ಎಲ್. ಹೆಗಡೆ, ಸಿ.ಎನ್. ಹೆಗಡೆ, ಎಂ.ಎನ್. ಹೆಗಡೆ, ಪರಶುರಾಮ ನಾಯ್ಕ, ಸುಧೀರ ಗೌಡರ್, ನಂದನ ಹೆಗಡೆ, ಕೆ.ಜಿ. ನಾಗರಾಜ, ಕೆ.ಕೆ. ನಾಯ್ಕ, ರಮಾನಂದ ಹೆಗಡೆ, ವ್ಯವಸ್ಥಾಪಕ ಸತೀಶ ಹೆಗಡೆ, ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಇದ್ದರು.