ಬ್ಯಾಡಗಿ: ದನದ ಕೊಟ್ಟಿಗೆ ಗೋಡೆ ಕುಸಿದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದ ಗದಿಗೆಪ್ಪ ಮಲ್ಲಪ್ಪ ಕೊಪ್ಪದ(65) ಅವರ ಮನೆಗೆ ಭಾನುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಕೃತಿ ವೀಕೋಪ ಪರಿಹಾರ ನಿಧಿಯಡಿ(ಎನ್‌ಡಿಆರ್‌ಎಫ್) ₹5 ಲಕ್ಷ ಪರಿಹಾರ ವಿತರಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದ್ದು, ಶಿಥಿಲಾವಸ್ಥೆ ತಲುಪಿರುವ ಮನೆಗಳಲ್ಲಿ ಜಾಗರೂಕತೆಯಿಂದ ಇರಬೇಕು. ಅದಾಗ್ಯೂ ದುರ್ದೈವಿ ಗದಿಗೆಪ್ಪ ಕೊಪ್ಪದ ಕೆಲಸದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇಂತಹ ಅನಿರೀಕ್ಷಿತ ಘಟನೆಗಳು ಮನುಷ್ಯನನ್ನು ಸಾವಿನ ದವಡೆಗೆ ತಳ್ಳಿದ್ದು ದುರ್ದೈವದ ಸಂಗತಿ ಎಂದರು.ತಹಸೀಲ್ದಾರ್ ಹಾಗೂ ಪಿಡಿಒಗಳಿಗೆ ಸೂಚನೆ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಇಂತಹ ಘಟನೆಗಳ ಮತ್ತೊಮ್ಮೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕೂಡಲೇ ತಹಸೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಿಥಿಲಾವಸ್ಥೆ ತಲುಪಿರುವಂತಹ ಮನೆಗಳಲ್ಲಿ ವಾಸಿಸದಂತೆ ಎಚ್ಚರಿಕೆ ನೀಡಬೇಕು. ಪ್ರತಿ ಗ್ರಾಮದಲ್ಲಿಯೂ ಪರಿಶೀಲನೆ ನಡೆಸುವ ಮೂಲಕ ಅಪಾಯಕಾರಿ ಎಂದು ಕಂಡುಬರುವಂತಹ ಮೆನಗಳಲ್ಲಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.ಘಟನೆ ಹಿನ್ನೆಲೆ: ತಾಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಮನೆಗಳು ಕುಸಿದು ಬೀಳುತ್ತಿದ್ದು, ಅಂತೆಯೇ ಜು. 19ರಂದು ಹುಚ್ಚಯ್ಯಸ್ವಾಮಿ ದಾಸೋಹಮಠ ಎಂಬವರ ಮನೆಯಲ್ಲಿ ಜಾನುವಾರು ಕೆಲಸದಲ್ಲಿ ತೊಡಗಿದ್ದ ಗದಿಗೆಪ್ಪ ಮಲ್ಲಪ್ಪ ಕೊಪ್ಪದ ಎಂಬವರ ಮೇಲೆ ಗೋಡೆ ಕುಸಿದು ಬಿದ್ದಿತ್ತು. ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಘಟನೆಯಲ್ಲಿ ಆಕಳಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಮುಖಂಡರಾದ ರುದ್ರಣ್ಣ ಹೊಂಕಣದ, ವೀರನಗೌಡ್ರ ಪಾಟೀಲ, ಮಂಜನಗೌಡ ಲಿಂಗನಗೌಡ್ರ, ಮಹೇಶಗೌಡ ಪಾಟೀಲ, ಶಾಂತಪ್ಪ ದೊಡ್ಮನಿ, ಪ್ರಭುಗೌಡ್ರ ಪಾಟಿಲ, ಲಿಂಗರಾಜ ಕುಮ್ಮೂರ, ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಇತರರಿದ್ದರು.