ಬಳ್ಳಾರಿ: ಸಾಧನೆಯ ಹಾದಿಯಲ್ಲಿರುವವರು ಪ್ರಶಸ್ತಿಗಳನ್ನು ನಿರೀಕ್ಷಿಸಬಾರದು. ಸಾಧನೆಯ ಕಡೆಗತ್ತ ಮಾತ್ರ ಗಮನ ಹರಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ ಡಾ.ಶಿವಕುಮಾರ ತಾತ ಹೇಳಿದರು.ನಗರದ ಕನ್ನಡಭವನದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆಯು ಹಮ್ಮಿಕೊಂಡಿದ್ದ ಕಾರಂತರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಸಾಧಕರಿದ್ದಾರೆ. ಆದರೆ, ಅವರಿಗೆ ಸರ್ಕಾರದ ಪ್ರಶಸ್ತಿಗಳು ಬಂದಿಲ್ಲ. ಹಾಗಂತ ಅವರ ಸಾಧನೆ ಕಡೆಗಣನೆ ಅಲ್ಲ. ಸಾಧಕರು ಎಂದೂ ಸಹ ಪ್ರಶಸ್ತಿ ಕಡೆ ಗಮನ ನೀಡುವುದಿಲ್ಲ. ತಾವು ಮಾಡುವ ಕೆಲಸದಲ್ಲಿಯೇ ನೆಮ್ಮದಿ ಕಂಡುಕೊಳ್ಳುತ್ತಾರೆ. ಜನರ ಅಭಿಮಾನವೇ ಅವರಿಗೆ ಸಿಗುವ ದೊಡ್ಡ ಪ್ರಶಸ್ತಿ ಎಂದರು.ಸರ್ಕಾರ ಗುರುತಿಸದ ಅನೇಕ ಹಿರಿಯ ಕಲಾವಿದರು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಕಾರಂತ ರಂಗಲೋಕದ ಆರ್.ಪಿ.ಮಂಜುನಾಥ ಅವರು ಗುರುತಿಸಿ, ಅವರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ, ಗೌರವಿಸುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಮಾರಂಭದ ಅತಿಥಿಯಾಗಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಮಾತನಾಡಿ, ಕಾರಂತ ರಂಗಲೋಕ ಸಂಸ್ಥೆಯ ಕೆಲಸ ಶ್ಲಾಘನೀಯ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ಇದರಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕ ನುಡಗಳನ್ನಾಡಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್.ಪಿ.ಮಂಜುನಾಥ್, ಕಲಾವಿದರನ್ನು ಗುರುತಿಸಿ ಅಂತವರಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾರಂತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ಇದು ನಾಲ್ಕನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ. ಸಾಧಕರನ್ನು ಗುರುತಿಸುವ ಕೆಲಸ ಮುಂದುವರಿಯಲಿದೆ ಎಂದು ಹೇಳಿದರು.
ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಗೆ 22 ನಾಟಕ ಕೃತಿಗಳು ಬಂದಿದ್ದು, ಇದರಲ್ಲಿ ನಮ್ಮೊಳಗೊಬ್ಬ ಶರಣ (ರಾಘವೇಂದ್ರ ಹಳಿಪೇಟಿ), ಶೃಂಗಾರದ ಅರಮನೆಗೆ ಬಂಗಾರದ ಒಡತಿ (ಯಮುನಪ್ಪ ಅಂಗಡಗೇರಿ), ಕಲ್ಯಾಣ ಕ್ರಾಂತಿ (ಮಲ್ಲೇಶ ಬಿ ಕೋನಾಳ), ವಿಶ್ವಕವಿ ರವೀಂದ್ರನಾಥ ಒಂದು ರಂಗದರ್ಶನ (ಡಾ.ಗೀತಾ ಸೀತಾರಾಮ್), ಶರಣ ಪ್ರಭೆ (ಮುದೇನೂರು ಉಮಾಮಹೇಶ್ವರ) ಪುಸ್ತಕಗಳನ್ನು ಆಯ್ಕೆ ಮಾಡಿದ್ದು, ಇವರಿಗೆ ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಿಲ್ಲಾ ಮಟ್ಟದ ’ಕಾರಂತ ರತ್ನ’ ರಂಗ ಪ್ರಶಸ್ತಿಯನ್ನು ಬಿ.ಕೃಷ್ಣಪ್ಪಾಚಾರಿ ಸಿರುಗುಪ್ಪ (ಬಯಲಾಟ ವೇಷಭೂಷಣ), ಎ.ಮಾರೆಪ್ಪ ಕಲ್ಲಕಂಭ (ಹಾರ್ಮೋನಿಯಂ ಮೇಷ್ಟ್ರು), ವಾಲ್ಮೀಕಿ ಈರಣ್ಣ ಕಂಪ್ಲಿ (ಬಯಲಾಟ ಮುಮ್ಮೇಳ ಗಾಯಕ), ಪುರುಷೋತ್ತಮ ಹಂದ್ಯಾಳ್ (ರಂಗಭೂಮಿ ನಟನೆ), ಟಿ.ಎ.ಕುಬೇರ (ರಂಗಭೂಮಿ ನಟನೆ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ರಂಗಭೂಮಿಯಲ್ಲಿ ರಂಗ ಸಂಗೀತದ ಅವಲೋಕನ ಎಂಬ ವಿಷಯದ ಕುರಿತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವಲಿಂಗಪ್ಪ ಹಂದ್ಯಾಳ್, ಕರ್ನಾಟಕ ಲಲಿತ ಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೋವಿಂದವಾಡ, ಗೌರಿ ಹಳ್ಳಿಮನೆ ಹೋಟೆಲ್ ಮಾಲೀಕರಾದ ಶ್ರೀಧರಗಡ್ಡೆ ದೊಡ್ಡಬಸಪ್ಪ, ಶಿಕ್ಷಕ ಗಾದಿಲಿಂಗಪ್ಪ ತಾಳೂರು, ವಿಶ್ವನಾಥ ಸಾಹುಕಾರ್, ಆರ್.ಪಿ.ರಾಕೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.