-ಬಿಜೆಪಿ ಮುಖಂಡ ವಿರೇಶ ಸಾಹುಕಾರ ಚಿಂಚೋಳಿ ಸಲಹೆ । ಬಿಜೆಪಿಯಿಂದ ಎಸ್‌ಐಆರ್ ಮಹಾಸಂಪರ್ಕ ಅಭಿಯಾನ
ಕನ್ನಡಪ್ರಭ ವಾರ್ತೆ ಹುಣಸಗಿ
ಪರಿಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎಸ್‌ಐಆರ್ ಕಾರ್ಯಕ್ಕೆ ಮುಂದಾಗಿದ್ದು ಅರ್ಹ ಮತದಾರರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಿಜೆಪಿ ಮಹಾಸಂಪರ್ಕ ಅಭಿಯಾನ ನಡೆಸುತ್ತಿದೆ ಎಂದು ಬಿಜೆಪಿ ಮುಖಂಡ ವಿರೇಶ ಸಾಹುಕಾರ ಚಿಂಚೋಳಿ ಹೇಳಿದರು.ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದಿಂದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜುಲೈ ೨೫ ಹಾಗೂ ೨೬ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬಿಜೆಪಿ ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನದಲ್ಲಿ ಪ್ರತಿಯೊಂದು ವಾರ್ಡ್ನಲ್ಲಿ ಪ್ರತಿ ೨೦ ಮನೆಗಳಿಗೆ ಒಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಮುಖಂಡರನ್ನು ನಿಯೋಜಿಸಿ ಮನೆಮನೆಗೆ ಭೇಟಿ ನೀಡಲಾಗುತ್ತಿದೆ. ಬಿಎಲ್‌ಒಗಳು ಮನೆಮನೆಗೆ ಇನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿದ್ದು, ಬಹುತೇಕ ಮತಗಟ್ಟೆಗಳಲ್ಲಿ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಬಿಜೆಪಿ ವತಿಯಿಂದ ನಿಯೋಜಿಸಲಾದ ಬಿಎಲ್‌ಎ-೨ ಕಾರ್ಯಕರ್ತರು ಬಿಎಲ್‌ಒಗಳಿಗೆ ಸಹಕಾರ ನೀಡುತ್ತಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಎಸ್‌ಐಆರ್ ಕುರಿತು ಮಾಹಿತಿ ನೀಡಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಪಡೆದು ಸರಳ ಆ್ಯಪ್‌ದಲ್ಲಿ ಮಾಹಿತಿಯನ್ನು ದಾಖಲು ಮಾಡುತ್ತಿದ್ದಾರೆ.
ಮರಣ ಹೊಂದಿರುವವರು, ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಗೊಂಡಿರುವರು, ಎರಡೆರಡು ಕಡೆಗಳಲ್ಲಿ ಮತ ಚೀಟಿ ಹೊಂದಿರುವವರು ಇವೇ ಮುಂತಾದ ಎಲ್ಲ ತಪ್ಪುಗಳನ್ನು ಸರಿಪಡಿಸಲು ಮತದಾರರ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಮತದಾರರು ತಮಗೆ ದೊರೆತಿರುವ ನಮೂನೆಗಳಲ್ಲಿ ತಪ್ಪಾಗಿ ನಮೂದಿಸದೇ ನಿಯಮಬದ್ಧವಾಗಿ ಮಾಹಿತಿ ಭರ್ತಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಿ ಸ್ಥಾವರಮಠ, ಮುದಕಪ್ಪ ದೇಸಾಯಿ, ಕಾಂತು ದೊರಿ, ಶಿವನಗೌಡ ಪಾಟೀಲ್, ಶರಣು ವೈಲಿ, ಆನಂದ ಬಾರಿಗಿಡದ, ಯೂಸುಪ್ ಡೆಕ್ಕನ್, ಸಿದ್ದಣ ಮೇಲಿನಮನಿ, ಚನ್ನು ಹಿರೇಮಠ ಇದ್ದರು.