ಹಾನಗಲ್ಲ: ರಾಜಕಾರಣದಲ್ಲಿ ಇರುವವರಿಗೆ ದಮ್ಮು, ತಾಕತ್ತು ಅಗತ್ಯವಿಲ್ಲ. ತಾಯಿ ಹೃದಯವಿದ್ದು ಜನಸೇವೆ ಮಾಡುವ ಮನಸ್ಸೊಂದಿದ್ದರೆ ಸಾಕು, ಇದು ಕಾಂಗ್ರೆಸ್ ನಿಲುವು, ಬರಿ ಟೀಕಿಸುವುದು ಬಿಜೆಪಿ ಒಲವು ಎಂದು ಶಾಸಕ ಶ್ರೀನಿವಾಸ ಮಾನೆ ಅಭಿಪ್ರಾಯಪಟ್ಟರು.ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ನಮಗೆ ನ್ಯಾಯಸಮ್ಮತ ಅನುದಾನ ನೀಡುವಲ್ಲಿ ನಿರಂತರವಾಗಿ ತಾರತಮ್ಯ ಮಾಡುತ್ತಿದೆ. ಬರ ಪರಿಹಾರಕ್ಕೂ ಹಣ ನೀಡದೇ ಸತಾಯಿಸುತ್ತಿದೆ. ಈ ಧೋರಣೆ ಪ್ರಶ್ನಿಸುವಲ್ಲಿ ಮಾತ್ರ ಬಿಜೆಪಿ ನಾಯಕರು ದಮ್ಮು, ತಾಕತ್ತು ಪ್ರದರ್ಶಿಸದೇ ಬರೀ ಬಾಯಿ ಮಾತಿನಲ್ಲಿ ಅಬ್ಬರಿಸುತ್ತಿದ್ದಾರಷ್ಟೇ. ಬರ ಪರಿಹಾರ ಕೊಡಿಸುವಲ್ಲಿ ಬಿಜೆಪಿಯವರು ದಮ್ಮು ತಾಕತ್ತು ತೋರಿಸಲಿ ಎಂದು ಕುಟುಕಿದರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮನೆಯ ದೀಪ ಬೆಳಗಿಸುತ್ತಿವೆ. ಆದರೆ ಬಿಜೆಪಿ ನಾಯಕರು ಮಾತ್ರ ಈ ಯೋಜನೆಗಳಿಗೆ ಬಿಟ್ಟಿ ಯೋಜನೆಗಳು ಎಂದು ಟೀಕಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆ ಪಡೆಯುವವರಿಗೆ ಇದರ ಅನುಭವವಿದೆ. ಜನರ ಸಂಕಷ್ಟ ಬಿಜೆಪಿಯವರಿಗೆ ಅರ್ಥವಾಗುತ್ತಿಲ್ಲ. ಬಡವರ ನೋವು, ಸಂಕಟವೂ ಇವರ ಕಣ್ಣಿಗೆ ಬೀಳುತ್ತಿಲ್ಲ. ಬೆಲೆ ಇಳಿಸುವ ಭರವಸೆ ನೀಡಿದ್ದ ಬಿಜೆಪಿ ಈಗಲಾದರೂ ಬೆಲೆ ಏರಿಸುವುದನ್ನು ಬಿಡಲಿ ಎಂದು ಕಿವಿಮಾತು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಕಳೆದ ಮೂರು ಅವಧಿಗಳಿಂದ ಸೋಲಿನ ನೋವು ಖಂಡಿತ ಈ ಬಾರಿ ನೀಗಲಿದೆ. ಕಾಂಗ್ರೆಸ್ ವಿಜಯದ ನಗೆ ಬೀರಲಿದೆ ಎಂದರು. ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ರಾಮಣ್ಣ ಪೂಜಾರ, ಹನುಮಂತ ಹುರುಳಿಕುಪ್ಪಿ, ಕರಬಸಪ್ಪ ವಡ್ಡರ, ರಾಜಶೇಖರ ಪುರದ, ಸುನೀಲ್ ಲಮಾಣಿ, ಆನಂದ ಮಾಸನಕಟ್ಟಿ, ಮಂಜು ದೊಡ್ಡಮನಿ, ಹನುಮಂತಪ್ಪ ಕಟ್ಟಿಮನಿ ಈ ಸಂದರ್ಭದಲ್ಲಿದ್ದರು.