ಲಿಂಗಾಧಾರಣೆ, ಲಿಂಗಪೂಜೆ ಮಾಡದವರು ವೀರಶೈವರೇ ಅಲ್ಲ: ಶ್ರೀಶೈಲ ಜಗದ್ಗುರು

KannadaprabhaNewsNetwork |  
Published : Sep 29, 2024, 01:48 AM IST
28ಎಚ್.ಎಲ್.ವೈ-1: ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಧರ್ಮಸಭೆಯ ಸಾನಿಧ್ಯವನ್ನು ವಹಿಸಿ ಶ್ರೀ ಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಪೂಜೆ, ಆರಾಧನೆ ಮತ್ತು ಭಕ್ತಿಯಂತಹ ಧಾರ್ಮಿಕ ಪೂಜಾವಿಧಿಗಳಿಂದ ನಮ್ಮ ಯುವಪೀಳಿಗೆ ವಿಮುಖರಾಗುತ್ತಿದೆ. ಇದು ಸಮಾಜದ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು.

ಹಳಿಯಾಳ: ಲಿಂಗಧಾರಣೆ ಮತ್ತು ಲಿಂಗಪೂಜೆ ಬಹುಹಿಂದಿನಿಂದಲೂ ಬಂದಿದ್ದು, ಭವ್ಯ ಇತಿಹಾಸ ಹೊಂದಿದೆ. ವೀರಶೈವ-ಲಿಂಗಾಯತರು ಕಡ್ಡಾಯವಾಗಿ ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡಬೇಕು. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ನಿಜವಾದ ಅರ್ಥದಲ್ಲಿ ವೀರಶೈವ ಲಿಂಗಾಯತರೇ ಅಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ಶನಿವಾರ ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪೂಜೆ, ಆರಾಧನೆ ಮತ್ತು ಭಕ್ತಿಯಂತಹ ಧಾರ್ಮಿಕ ಪೂಜಾವಿಧಿಗಳಿಂದ ನಮ್ಮ ಯುವಪೀಳಿಗೆ ವಿಮುಖರಾಗುತ್ತಿದೆ. ಇದು ಸಮಾಜದ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಭಕ್ತಿ, ಶ್ರದ್ಧೆ, ಧಾರ್ಮಿಕ ಪೂಜಾವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಿತ್ಯವೂ ಪೂಜಾವಿಧಿ, ಭಕ್ತಿ ಕಾರ್ಯಗಳಿಗೆ ಸಮಯವನ್ನು ಮೀಸಲಾಗಿಡಿ, ಧರ್ಮ, ಭಕ್ತಿ, ದೈವ, ಶ್ರದ್ಧೆಯಿಂದ ಬಾಳುವ ಕುಟುಂಬಗಳು ಬಲಿಷ್ಠ ಸದೃಢ ಸಮಾಜವನ್ನು ನಿರ್ಧರಿಸಬಲ್ಲವು ಎಂದರು.

ವೀರಶೈವ-ಲಿಂಗಾಯತ ಧರ್ಮ: ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದವರ ಹಲವಾರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿದ್ದು, ಇಲ್ಲಿ ಸರ್ವ ಧರ್ಮೀಯರಿಗೂ ಸಮಾನಾಗಿ ಔದಾರ್ಯದಿಂದ ಕಾಣಲಾಗುತ್ತಿದೆ. ನಮ್ಮ ಧರ್ಮವನ್ನು ಪ್ರೀತಿಸೋಣ, ಗೌರವಿಸೋಣ, ಹಾಗೆಯೇ ಅನ್ಯ ಧರ್ಮೀಯರಿಗೆ ನೋವಾಗದಂತೆ ನಡೆಯುವುದೇ, ಯಾವುದೇ ಸಮುದಾಯವನ್ನು ವಿರೋಧಿಸದೇ ಪ್ರೀತಿಯಿಂದ ಸರ್ವರೊಂದಿಗೆ ಬಾಳುವುದೇ ವೀರಶೈವ-ಲಿಂಗಾಯತ ಧರ್ಮ ಎಂದರು.

ನಮ್ಮ ಸಮುದಾಯವೇ ಶ್ರೇಷ್ಠ, ನಾವೇ ಶ್ರೇಷ್ಠರು, ನಾವು ಆ ಪಂಗಡ, ಇವರು ಈ ಪಂಗಡವೆಂದು ನಮ್ಮ ನಮ್ಮಲ್ಲಿ ದ್ವೇಷ ಕದನಕ್ಕೆ ಅವಕಾಶ ನೀಡಿ ಸಮಾಜವು ಕಲವಲು ದಾರಿಯಲ್ಲಿ ಸಾಗಿದರೆ ಇದರಿಂದ ಯಾರಿಗೂ ಒಳಿತಾಗುವುದಿಲ್ಲ, ಅದಕ್ಕಾಗಿ ಎಲ್ಲರನ್ನೂ ಔದಾರ್ಯದಿಂದ ಕರೆದುಕೊಂಡು ಹೋಗುವ ವೀರಶೈವ-ಲಿಂಗಾಯತ ಧರ್ಮದ ತತ್ವಗಳನ್ನು ಮರೆಯದೇ ಪಾಲಿಸಿ ಎಂದರು.

ಧರ್ಮಸಭೆಯಲ್ಲಿ ಅಂಬಿಕಾನಗರದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಲಘಟಗಿಯ ಹನ್ನೆರೆಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ಗುರು ವಿರಕ್ತಮಠ ಉಪ್ಪಿನ ಬೇಟಗೇರಿ ಹಳಿಯಾಳದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ಗ್ರಾಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ದಾಂಡೇಲಿಯ ವೈದ್ಯ ಎನ್.ಜಿ. ಬ್ಯಾಕೋಡ, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಉದಯ ಹೂಲಿ, ತಾಲೂಕು ಅಧ್ಯಕ್ಷ ಎಂ.ಬಿ. ತೋರಣಗಟ್ಟಿ, ಶರಣ ಸಾಹಿತ್ಯ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಪ್ರಮುಖರಾದ ಬಸವರಾಜ ಬೆಂಡಿಗೇರಿಮಠ, ಲಿಂಗರಾಜ ಹಿರೇಮಠ, ಶಿವು ಶೆಟ್ಟರ, ರವಿ ತೋರಣಗಟ್ಟಿ ಇದ್ದರು. ಹಳಿಯಾಳ ತಾಲೂಕಿನೆಲ್ಲೆಡೆಯಿಂದ ವೀರಶೈವ ಲಿಂಗಾಯತ ಧರ್ಮೀಯರು ಆಗಮಿಸಿದ್ದರು.

ಮಹಾಪೂಜೆ: ಬೆಳಗ್ಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ಮಾಡಿದರು. ಹಳಿಯಾಳ ತಾಲೂಕಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಶ್ರದ್ಧಾಳುಗಳು ಭಾಗವಹಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ