ಬಳ್ಳಾರಿ: ರಂಗಭೂಮಿ ಒಂದು ಮುಕ್ತ ವಿಶ್ವವಿದ್ಯಾಲಯವಾಗಿದ್ದು, ರಂಗಭೂಮಿಗೆ ಎಂದೂ ಅಳಿವಿಲ್ಲ ಎಂದು ಮೈಸೂರಿನ ರಂಗನಿರ್ದೇಶಕ ಡಾ.ಸಿ.ಬಸಲಿಂಗಯ್ಯ ತಿಳಿಸಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ-2026 ಪ್ರಯುಕ್ತ ಆಯೋಜಿಸಿದ್ದ “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗಭೂಮಿಯ ಉಳಿವಿನ ಸವಾಲುಗಳು” ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಫೇಲಾದವರೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಹೀಗಾಗಿ ಅನುತ್ತೀರ್ಣಗೊಂಡರೆ ಖಿನ್ನತೆಗೆ ಒಳಗಾಗದೆ ಧೈರ್ಯದಿಂದ ಮುಂದಿನ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಬೇಕು. ಪರೀಕ್ಷೆ ಮಾತ್ರ ಬದುಕು-ಭವಿಷ್ಯ ಎಂದುಕೊಳ್ಳಬಾರದು. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡೇ ಬದುಕೆಂಬ ಹೋರಾಟದಲ್ಲಿ ಸಾಗಬೇಕು. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಧಾರವಾಡದ ಹಿರಿಯ ರಂಗಕರ್ಮಿ ಡಾ.ಶಶಿಧರ್ ನರೇಂದ್ರ ಅವರು ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಕೆಗೆ ಪ್ರತಿಯೊಂದಕ್ಕೆ ಆಜ್ಞೆ ನೀಡಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗ ಪರಂಪರೆಯನ್ನು ಆಧುನಿಕತೆಗೆ ಒಳಪಡಿಸುವ ಕ್ರಮವಾಗಿದೆ ಎಂದು ಹೇಳಿದರು.
ಎಐ ಬರವಣಿಗೆಯ ಹಕ್ಕುಗಳಿಗೆ ಸಾಮ್ಯತೆ ಕೊಡುವುದು ಪ್ರಶ್ನೆಯಾಗಿ ಉಳಿದಿದೆ. ಎಐ ತಂತ್ರಜ್ಞಾನ ಬಳಸುವಲ್ಲಿ ಉಪಾಯ ಅಪಾಯಗಳೆರಡು ಇವೆ ಎಂದು ತಿಳಿಸಿದ ಅವರು, ‘ಗೌಹರ್ ಜಾನ್’ ಕೃತಿಯನ್ನು ಎಐ ನಿಂದ ಭಾಷಾಂತರವಾಗಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಎಂ ಮುನಿರಾಜು, ಒತ್ತಡದ ಜೀವನದಲ್ಲಿ ನಾಟಕಗಳು ತುಂಬಾ ಪ್ರಭಾವ ಬೀರುತ್ತವೆ. ಕಲಾವಿದರು ಹಲವಾರು ವರ್ಷಗಳ ಶ್ರಮದಿಂದ ಪ್ರತಿಭೆಗೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಒತ್ತಡವನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು. ಸಂಶೋಧನಾ ಲೇಖನಗಳ ಸಾರಾಂಶಗಳ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ವಿಶ್ವ ರಂಗಭೂಮಿ ಸಂದೇಶವನ್ನು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಓದಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎನ್.ಎಂ ಸಾಲಿ, ಕಲಾ ನಿಕಾಯದ ಡೀನ್ ಪ್ರೊ.ರಾಬರ್ಟ್ ಜೋಸ್, ಕಿರುತೆರೆ ಕಲಾವಿದೆ ಲಕ್ಷ್ಮಿ ನಾಡಗೌಡ ಅವರು ಉಪಸ್ಥಿತರಿದ್ದರು.
ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಂಶೋಧನಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಿದ್ದರು.
ವಿಚಾರ ಸಂಕಿರಣದ ಸಂಚಾಲಕ ಪ್ರೊ.ಎನ್.ಶಾಂತನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ಎಸ್ ಶಿವಪ್ರಕಾಶ ಹಾಗೂ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ.ಸಂತೋಷ ಜಿ.ಕೆ ಅವರು ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.