ಬ್ಯಾಂಕ್‌ ದರೋಡೆಕೋರರಿಗೆ ಗನ್‌ ನೀಡಿದ್ದವರ ಸೆರೆ

KannadaprabhaNewsNetwork |  
Published : Oct 10, 2025, 01:02 AM IST
ಖಾಕಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹಳೆಯ ವೈಷಮ್ಯ, ಕೊಲೆ, ಸುಲಿಗೆಗಳಿಂದಾಗಿಯೇ ಮೊದಲಿನಿಂದಲೂ ಭೀಮಾತೀರ ಕುಖ್ಯಾತಿ ಗಳಿಸಿದೆ. ಇದೀಗ ಎರಡು ಬ್ಯಾಂಕ್‌ಗಳ ದರೋಡೆ ಪ್ರಕರಣಗಳ ಮೂಲಕ ಬ್ಯಾಂಕಿಂಗ್‌ ಕ್ಷೇತ್ರವನ್ನು ತಲ್ಲಣಗೊಳಿಸಿವೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ ನಡೆದ ಎರಡು ಬ್ಯಾಂಕ್ ದರೋಡೆ ಪ್ರಕರಣಗಳು ಇಲ್ಲಿಯ ಜನರನ್ನು ಆತಂಕಕ್ಕೆ ದೂಡಿವೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ವಿಜಯಪುರ ಪೊಲೀಸರು ಎರಡೂ ಪ್ರಕರಣಗಳು ನಡೆದು ಒಂದೊಂದು ತಿಂಗಳಲ್ಲಿಯೇ ಕಾರ್ಯಾಚರಣೆ ಮೂಲಕ ದರೋಡೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂಬುದನ್ನು ಪೊಲೀಸರು ದರೋಡೆಕೋರರಿಗೆ ಎಚ್ಚರಿಕೆ ಗಂಟೆ ನೀಡಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಹಳೆಯ ವೈಷಮ್ಯ, ಕೊಲೆ, ಸುಲಿಗೆಗಳಿಂದಾಗಿಯೇ ಮೊದಲಿನಿಂದಲೂ ಭೀಮಾತೀರ ಕುಖ್ಯಾತಿ ಗಳಿಸಿದೆ. ಇದೀಗ ಎರಡು ಬ್ಯಾಂಕ್‌ಗಳ ದರೋಡೆ ಪ್ರಕರಣಗಳ ಮೂಲಕ ಬ್ಯಾಂಕಿಂಗ್‌ ಕ್ಷೇತ್ರವನ್ನು ತಲ್ಲಣಗೊಳಿಸಿವೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ ನಡೆದ ಎರಡು ಬ್ಯಾಂಕ್ ದರೋಡೆ ಪ್ರಕರಣಗಳು ಇಲ್ಲಿಯ ಜನರನ್ನು ಆತಂಕಕ್ಕೆ ದೂಡಿವೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ವಿಜಯಪುರ ಪೊಲೀಸರು ಎರಡೂ ಪ್ರಕರಣಗಳು ನಡೆದು ಒಂದೊಂದು ತಿಂಗಳಲ್ಲಿಯೇ ಕಾರ್ಯಾಚರಣೆ ಮೂಲಕ ದರೋಡೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂಬುದನ್ನು ಪೊಲೀಸರು ದರೋಡೆಕೋರರಿಗೆ ಎಚ್ಚರಿಕೆ ಗಂಟೆ ನೀಡಿದ್ದಾರೆ.

ಸೆ.16ರಂದು ಸಂಜೆ 7.20ಕ್ಕೆ ಚಡಚಣದ ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿದ್ದ ಮೂವರು ದರೋಡೆಕೋರರು ಬ್ಯಾಂಕ್‌ನೊಳಗೆ ಪ್ರವೇಶಿಸಿ, ಪಿಸ್ತೂಲ್ ಮತ್ತು ಚಾಕುಗಳನ್ನು ತೋರಿಸಿ, ಬ್ಯಾಂಕ್ ಸಿಬ್ಬಂದಿಯನ್ನು ಕಟ್ಟಿಹಾಕಿ, ಸ್ಟ್ರಾಂಗ್ ರೂಂನಲ್ಲಿದ್ದ ₹1.04 ಕೋಟಿ ನಗದು ಮತ್ತು 20 ಕೆಜಿ ಚಿನ್ನಾಭರಣ (ಮೌಲ್ಯ ₹20 ಕೋಟಿ) ದೋಚಿಕೊಂಡು ಪರಾರಿಯಾಗಿದ್ದರು. ಬ್ಯಾಂಕ್ ಮ್ಯಾನೇಜರ್‌ ಗಂಗಪ್ಪ ತಾರಕೇಶ್ವರ ಚಡಚಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.

ಪಕ್ಕಾ ಸ್ಕೆಚ್‌ ಹಾಕಿ ದರೋಡೆ:

ಮಹಾರಾಷ್ಟ್ರದ ಓರ್ವ ಪ್ರಮುಖ ಆರೋಪಿ ಸೇರಿ ಮೂವರು ಆರೋಪಿಗಳು ದರೋಡೆಗೂ ಮುನ್ನ ಜುಲೈ ಹಾಗೂ ಆಗಸ್ಟ್‌ನಲ್ಲಿ ಹಲವಾರು ಬಾರಿ ಬ್ಯಾಂಕ್‌ಗೆ ಬಂದು ಇಲ್ಲಿನ ವಹಿವಾಟು ಹಾಗೂ ಚಲನವಲನ ಗಮನಿಸಿದ್ದರು. ದರೋಡೆ ದಿನ 4.30ಕ್ಕೆ ಬ್ಯಾಂಕ್‌ಗೆ ಬಂದಿದ್ದ ಒಬ್ಬ ಆರೋಪಿ ಖಾತೆ ತೆಗೆಯುವಂತೆ ಅರ್ಜಿ ನೀಡಿ ಟೈಂಪಾಸ್‌ ಮಾಡಿದ್ದ. 6.30ರ ವೇಳೆಗೆ ತನ್ನಿಬ್ಬರ ಸಹಚರರನ್ನು ಕರೆಸಿಕೊಂಡು ದರೋಡೆ ಕೃತ್ಯ ಎಸಗಿ ಪರಾರಿಯಾಗಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಪಿಸ್ತೂಲ್‌ ತೋರಿಸಿ ಮ್ಯಾನೇಜರ್‌ ಸೇರಿ 6 ಸಿಬ್ಬಂದಿ ಹಾಗೂ 4 ಗ್ರಾಹಕರನ್ನು ಕಟ್ಟಿಹಾಕಿದ್ದರು.

ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು:

ಹಗಲು ರಾತ್ರಿ ಎನ್ನದೆ ಏಳು ತಂಡಗಳು ಕಾರ್ಯಾಚರಣೆ ನಡೆಸಿದ್ದು, ಇದೀಗ ಘಟನೆ ನಡೆದು 22 ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಕಳ್ಳತನವಾಗಿದ್ದರಲ್ಲಿ ಅರ್ಧದಷ್ಟು ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಓರ್ವ ಪ್ರಮುಖ ಆರೋಪಿ ಹಾಗೂ ಅಕ್ರಮ ಪಿಸ್ತೂಲ್‌ಗಳನ್ನು ಪೂರೈಸಿದ್ದ ಬಿಹಾರ ಮೂಲದ ಮೂವರು ಆರೋಪಿಗಳಾದ ರಾಕೇಶಕುಮಾರ ಸಹಾನಿ, ರಾಜುಕುಮಾರ ಪಾಸ್ವಾನ, ರಕ್ಷಕಕುಮಾರ ಮಾತೊ ಎಂಬುವರನ್ನು ಬಂಧಿಸಲಾಗಿದೆ.

ದರೋಡೆಕೋರರು ಕೃತ್ಯ ಎಸಗಿ ಪರಾರಿಯಾಗುತ್ತಿದ್ದಾಗ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಕಾರು ಅಪಘಾತಕ್ಕಿಡಾಗಿದೆ. ಈ ವೇಳೆ ಕಾರಿನ ಚಾಲಕ ಸ್ಥಳದಲ್ಲೆ ಕಾರು ಬಿಟ್ಟು ಪರಾರಿಯಾಗಿದ್ದ. ಆಗ ಕಾರಿನಲ್ಲಿ 888.33 ಗ್ರಾಂ ಚಿನ್ನಾಭರಣಗಳಿದ್ದ 21 ಪಾಕೆಟ್‌ಗಳು ಹಾಗೂ ₹ 1,03,160 ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ, ಹುಲಜಂತಿ ಗ್ರಾಮದಲ್ಲಿ ಪಾಳುಬಿದ್ದ ಮನೆಯ ಛಾವಣಿಯಲ್ಲಿ ಬ್ಯಾಗ್‌ವೊಂದು ಪತ್ತೆಯಾಗಿತ್ತು. ಅದರಲ್ಲಿ ಬ್ಯಾಗ್‌ನಲ್ಲಿ 6.54 ಕೆಜಿ ಚಿನ್ನಾಭರಣ ಹಾಗೂ ₹ 41ಲಕ್ಷ ನಗದು ಸಿಕ್ಕಿತ್ತು. ಅಲ್ಲದೇ, ಕಾರಿನಲ್ಲಿದ್ದ ಚಿನ್ನ ಮತ್ತು ಹಣವನ್ನು ಒಯ್ದಿದ್ದ ಹುಲಜಂತಿಯ 15 ಜನರಿಂದ 1.587 ಕೆ.ಜಿ ಬಂಗಾರ ಹಾಗೂ 44.25 ಲಕ್ಷ ನಗದನ್ನು ಕೂಡ ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿಯಿಂದ 55 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 9.01 ಕೆಜಿ ಬಂಗಾರ ಹಾಗೂ ₹ 86.31 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

-------

ಕೋಟ್.........

ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಜೊತೆಗೆ ಬ್ಯಾಂಕ್‌ಗಳು ಹೇಗೆಲ್ಲ ಮುಂಜಾಗೃತೆಯಿಂದ ಹಾಗೂ ಭದ್ರತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಭೆ ನಡೆಸಿ 8 ಪುಟಗಳ ಮಾಹಿತಿಯನ್ನು ನೀಡಲಾಗಿದೆ. ಮೂರು ವಾರಗಳಲ್ಲಿ ಎಲ್ಲ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿರಾಜ್ಯಾದ್ಯಂತ ಬ್ಯಾಂಕ್‌ಗಳಲ್ಲಿ ಅಪೇಕ್ಷಿತ ಮಟ್ಟದಲ್ಲಿ ಭದ್ರತೆ ಇಲ್ಲದ ಕಡೆಗಳಲ್ಲಿ ಹೀಗೆ ಕಳ್ಳತನ ಹಾಗೂ ದರೋಡೆಗಳು ನಡೆಯುತ್ತಿವೆ. ಶಿಸ್ತಿನಿಂದ ಕೆಲಸ ಮಾಡುವಂತೆ ಎಲ್ಲ ಬ್ಯಾಂಕ್‌ನಲ್ಲಿನ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಮನಗೂಳಿ ಹಾಗೂ ಚಡಚಣ ಕೇಸ್‌ಗಳಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಈ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

- ಆರ್‌.ಹಿತೇಂದ್ರ, ಎಡಿಜಿಪಿ (ಕಾ&ಸು)

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ