ಸರ್ವ ಶೋಷಿತರ ಉದ್ಧಾರಕ್ಕಾಗಿ ಬಿ.ಆರ್.ಅಂಬೇಡ್ಕರ್ ಅವರ ಶ್ರಮದ ಫಲವಾಗಿ ಅನುಷ್ಠಾನಕ್ಕೆ ಬಂದ ಮೀಸಲಾತಿ ಅನುಕೂಲವನ್ನು ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು ರಚಿತ ‘ಬಲಿತ ದಲಿತ ತುಳಿತ; ನನ್ನ ಜನ ಅನಾಥ’ ಕೃತಿಯ ಮೂರನೇ ಮುದ್ರಣದ ಆವೃತ್ತಿಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು

70ರ ದಶಕದಿಂದಲೂ ಸತತವಾಗಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಸಂಸತ್ತಿನ ಪ್ರತಿಪಕ್ಷ ನಾಯಕರಾಗಿ, ಕೇಂದ್ರ ಮತ್ತು ರಾಜ್ಯದ ಸಚಿವರಾಗಿ ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ. ದುರ್ಬಲ ಸ್ಥಿತಿಯಿಂದ ಸಬಲರಾದ ಮೇಲೆಯೂ ತಾವು ಅನುಭವಿಸುತ್ತಿರುವ ಮೀಸಲು ಸೌಲಭ್ಯವನ್ನು ದುರ್ಬಲ ದಲಿತರಿಗೆ ವರ್ಗಾಯಿಸಲು ಅವರು ತಯಾರಿಲ್ಲ ಎಂದು ಹೇಳಿದರು.
ದುರ್ಬಲರು ಸಬಲರಾದರೆ ಪ್ರತಿಸ್ಪರ್ಧಿ:
ಇತ್ತೀಚೆಗೆ ನಾನು ರಾಜ್ಯದ ಸಚಿವರೊಬ್ಬರ ಬಗ್ಗೆ ‘ಬಲಿತ ದಲಿತ’ ಎಂಬ ಪದ ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ನನ್ನ ಕ್ಷಮೆಯಾಚನೆಗೆ ಆ ಸಚಿವರು ಸೇರಿ ಹಲವರು ಒತ್ತಾಯಿಸಿದ್ದನ್ನು ಗಮನಿಸಿದ್ದೇನೆ. ಕೆನೆಪದರ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವುದಕ್ಕೆ ಕೆಲ ಪ್ರಭಾವಿಗಳು ಬಿಡುತ್ತಿಲ್ಲ. ದುರ್ಬಲರು ತಮ್ಮ ಸರಿಸಮಾನಾಗಿ ಸಬಲರಾಗಬಾರದು, ಭವಿಷ್ಯದಲ್ಲಿ ಅವರು ತಮಗೆ ರಾಜಕೀಯ ಪ್ರತಿಸ್ಪರ್ಧಿಗಳಾಗಬಾರದು ಎಂಬ ಕಾರಣಕ್ಕೆ ಬಲಿತ ಪಟ್ಟಭದ್ರರು ಸತತವಾಗಿ ಪ್ರಯತ್ನ ಮಾಡಿಕೊಂಡೇ ಬರುತ್ತಿದ್ದಾರೆ ಎಂದು ಬೇಸರಿಸಿದರು.
ದಲಿತರಿಗೆ ಸ್ವಾಭಿಮಾನದ
ಬದುಕು ಕಲ್ಪಿಸಬೇಕು: ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ದಲಿತ ಚಳವಳಿ ಕೇವಲ ಸರ್ಕಾರಗಳಿಗೆ ಅನುಗುಣವಾಗಿ ಇರುವುದಲ್ಲ. ಬದಲಾಗಿ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಮಾನವೀಯತೆಯನ್ನು ಜೀವಂತವಾಗಿರಿಸಿ, ತಳಮಟ್ಟದ ಜನರಿಗೆ ನ್ಯಾಯ ಒದಗಿಸುವ ಸುದೀರ್ಘ ಹೋರಾಟವಾಗಿದೆ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವುದನ್ನು ಬಿಟ್ಟು, ಅವರಿಗೆ ಶಿಕ್ಷಣ ಹಾಗೂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ಕಲ್ಪಿಸಬೇಕು ಎಂದು ಹೇಳಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಕೃತಿಯ ಲೇಖಕ ಚಿ.ನಾ.ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.