ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭೋತ್ಸವಕ್ಕೆ ಚಾಲನೆ
ಈ ಕ್ಷೇತ್ರ ಸಾಕಷ್ಟು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಇದನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡುವ ಛಲ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ವಿನಃ ಯಾವುದೇ ಹಣ, ಅಂತಸ್ತು ಗಳಿಸಬೇಕೆನ್ನುವ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಬಂದಿಲ್ಲ. ನನ್ನ ಕೊನೆಯುಸಿರು ಇರುವವರೆಗೊ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಕನಕ ಪುರಭವನದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಸರ್ಕಾರದಿಂದ ಎಷ್ಟು ಬೇಕು ಅಷ್ಟು ಅನುದಾನ ತರುತ್ತೇನೆ. ಆದರೆ ಕಟ್ಟಡಕ್ಕೆ ಜನತೆ ಭೂಮಿ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರದಲ್ಲಿ ಹಣಕ್ಕೆ ಯಾವ ಕೊರತೆಯಿಲ್ಲ. ಆದರೆ ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.ಶಿಕ್ಷಣ ಇಲಾಖೆಯ ಕಟ್ಟಡ ಬಹುವರ್ಷಗಳಿಂದ ಶಿಥಲಗೊಂಡ ಕಟ್ಟಡದಲ್ಲೇ ನೌಕರರು ಕರ್ತವ್ಯ ನಿರ್ವೆಹಿಸುವುದನ್ನು ಗಮನಿಸಿ ಕಲ್ಯಾಣ ಕರ್ನಾಟಕ ಅನುದಾನದಡಿ ₹ ೨ಕೋಟಿ ಮಂಜೂರು ಮಾಡಿ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಾಗುವುದು. ಮುಂದಿನ ವಾರದಲ್ಲೇ ಟೆಂಡರ್ ಕರೆಯಲಾಗುತ್ತದೆ. ಇನ್ನೂ ಸಿಡಿಪಿಒ ನೂತನ ಕಟ್ಟಡಕ್ಕೆ ₹೩.೮೦ಕೋಟಿ, ತಾಲೂಕು ಪಂಚಾಯಿತಿ ಕಟ್ಟಡಕ್ಕೆ ₹೩.೫೦ಕೋಟಿ, ಯಲಬುರ್ಗಾ ಮತ್ತು ಕುಕನೂರ ಪಟ್ಟಣಕ್ಕೆ ಬೈಯಾಪಾಸ್ ಹೆದ್ದಾರಿ ರಸ್ತೆ ಸೇರಿದಂತೆ ೧೫ ಹೊಸ ಬಸ್ ನಿಲ್ದಾಣಗಳು, ಹೊಸ ಕೆರೆ ನಿರ್ಮಾಣ, ಕಲ್ಯಾಣ ಮಂಟಪಗಳು ಇವುಗಳಿಗೆ ಕೋಟ್ಯಾಂತರ ಅನುದಾನವಿದ್ದರೂ ಸಮರ್ಪಕ ಭೂಮಿ ನೀಡುತ್ತಿಲ್ಲ. ಇದರಿಂದ ತಾಲೂಕಿನ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಜನರು ಪಕ್ಷಬೇಧ ಮರೆತು ಅಭಿವೃದ್ಧಿಗೆ ಕೈಜೋಡಿಸಿದಾಗ ಮಾದರಿ ತಾಲೂಕು ಆಗಲು ಅನುಕೂಲವಾಗುತ್ತದೆ ಎಂದು ಹೇಳಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಹಾಗೂ ಡಿಡಿಪಿಐ ಶ್ರೀಶೈಲ್ ಬಿರಾದಾರ ಮಾತನಾಡಿದರು.