ಗದಗ: ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕಾಲಘಟ್ಟದಲ್ಲಿ ಆಯಾ ಕವಿಗಳು ಅಮೂಲ್ಯ ಕೃತಿ ರಚನೆಯ ಮೂಲಕ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಗದಗ ಪರಿಸರದ ಕವಿಗಳ ಕೊಡುಗೆ ಅಪಾರ ಎಂದು ನಿವೃತ್ತ ಪ್ರಾ. ಬಸವರಾಜ ಜಾಲಿಹಾಳ ತಿಳಿಸಿದರು.

ನಗರದ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಾ. ಬಸವರಾಜ ಮುಗಳಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಜನರಾಡುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಕನ್ನಡದ ಕಳೆಯನ್ನು ಹೆಚ್ಚಿಸಿದರು. ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿದೆ ಎಂದರು.

ಚಂಪೂ ಶೈಲಿಯಿಂದ ಹಿಡಿದು ಆಧುನಿಕ ಗದ್ಯ, ಪದ್ಯ, ನಾಟಕದವರೆಗಿನ ಬೆಳವಣಿಗೆಯಿಂದ ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ನಮ್ಮ ಸಾಹಿತ್ಯ ಪರಂಪರೆಯನ್ನು ಅಧ್ಯಯನ ಮಾಡಿ, ಇನ್ನಷ್ಟು ಸಮೃದ್ಧಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ದತ್ತಿ ದಾನಿ ದಿಲೀಪಕುಮಾರ ಮುಗಳಿ ಮಾತನಾಡಿ, ಕನ್ನಡಿಗರು ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು ಹೊಂದಬೇಕು. ಇಂಗ್ಲಿಷಿನ ವ್ಯಾಮೋಹದಿಂದ ಹೊರಬಂದು ದೇಸಿತನವನ್ನು ಉಳಿಸಿಕೊಂಡು ಬೆಳೆಯಬೇಕಾದುದು ಇಂದಿನ ಅಗತ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗದಗ ಪರಿಸರದ ಕವಿಗಳಾದ ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ, ಶ್ರೀಧರಾಚಾರ್ಯರಂತಹ ಕವಿಗಳು ತಮ್ಮ ಅಮೂಲ್ಯ ಕೃತಿಗಳ ಮೂಲಕ ಕನ್ನಡವನ್ನು ಉತ್ತುಂಗಕ್ಕೇರಿಸಿದ್ದಾರೆ. ಆಧುನಿಕ ಸಾಹಿತ್ಯ ಬೆಳವಣಿಗೆಗೂ ಇಲ್ಲಿಯ ಲೇಖಕರ ಕೊಡುಗೆ ಮಹತ್ವದ್ದಾಗಿದೆ ಎಂದರು.


ಸಿ.ಕೆ.ಎಚ್. ಕಡಣಿ ಶಾಸ್ತ್ರಿ ಮಾತನಾಡಿದರು. ದ.ರಾ. ಬೇಂದ್ರೆಯವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು. ಡಾ. ಎಸ್.ಕೆ. ಅವರಡ್ಡಿ, ಡಾ. ಜಿ.ಬಿ. ಪಾಟೀಲ, ರತ್ನಕ್ಕ ಪಾಟೀಲ, ಸತೀಶ ಚನ್ನಪ್ಪಗೌಡ್ರ, ಶೈಲಶ್ರೀ ಕಪ್ಪರದ, ಶಾಮನಗೌಡ ಅಳಗುಂಡಿ, ಜೆ.ಎ. ಪಾಟೀಲ, ಎಂ.ಎನ್. ಕಾಮನಹಳ್ಳಿ, ವೀರಣ್ಣ ಕೊಟಗಿ, ಎಂ.ಎ. ರಡ್ಡೇರ, ಶಂಕ್ರಪ್ಪ ಗಾಂಜಿ, ಕಲ್ಲೇಶ ಮೂರಶಿಳ್ಳಿನ, ಮಲ್ಲಿಕಾರ್ಜುನ ನಿಂಗೋಜಿ, ಸಿ.ಎಂ. ಮಾರನಬಸರಿ, ಎಸ್.ವಿ. ಚೇಗರಡ್ಡಿ, ಶಿವಪ್ಪ ಗುಳಗುಳಿ, ನಾಗಪ್ಪ ಸುರಳಿಕೇರಿ, ಎಸ್.ಎ. ಸೋಮಗೊಂಡ, ಶೈಲಜಾ ಗಿಡ್ನಂದಿ, ರಕ್ಷಿತಾ ಗಿಡ್ನಂದಿ, ಲಕ್ಷ್ಮೀ ಚೇಗರಡ್ಡಿ, ಸೌಮ್ಯ ಬೆಟಗೇರಿ, ನಿರ್ಮಲಾ ಮೇಟಿ, ಪಾರ್ವತಿ ಮುಗಳಿ, ಸೌಮ್ಯ ಮುಗಳಿ, ಗುರುದೇವಿ ಪಾರ್ವತಿಮಠ, ಉಮಾದೇವಿ ಪಾಟೀಲ, ರತ್ನಾ ಪುರಂತರ, ಅಜಿತ ಘೋರ್ಪಡೆ, ಅಶೋಕ ಗಿರಡ್ಡಿ, ಬಿ.ಬಿ. ಅಕ್ಕಿ, ಸುರೇಶ ನಲವಡಿ, ವೀರೇಶ ಪೂಜಾರ, ವೈ.ಕೆ. ಹಂದ್ರಾಳ, ಕೆ.ಎನ್. ಗುಗ್ಗರಿ, ಟಿ.ಎಂ. ದುಂದೂರ, ಮಹೇಶ ಶಟವಾಜಿ, ಎಂ.ಸಿ. ವಗ್ಗಿ ಮೊದಲಾದವರು ಇದ್ದರು. ದಿ. ಶಿವಾನಂದ ಗಿಡ್ನಂದಿ ಅವರ ಕುರಿತು ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ಬಸವರಾಜ ನೆಲಜೇರಿ ನಿರೂಪಿಸಿದರು. ಅಮರೇಶ ರಾಂಪೂರ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.