ಕನ್ನಡಪ್ರಭ ವಾರ್ತೆ ಮಳವಳ್ಳಿ
ಗಣೇಶ ಚತುರ್ಥಿಯಂದು ಗಣೇಶನ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಯಾವುದೇ ಗೊಂದಲವಿಲ್ಲದೇ ಹಬ್ಬನ್ನು ಆಚರಿಸಬೇಕು ಎಂದು ಡಿವೈಎಸ್ಪಿ ವಿ.ಕೃಷ್ಣಪ್ಪ ಸೂಚನೆ ನೀಡಿದರು.ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಆ.27ರ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡುವವರು ಆಯಾಯ ಗ್ರಾಪಂ, ಸೆಸ್ಕ್, ಪುರಸಭೆ ಅಥವಾ ಖಾಸಗಿ ಜಾಗದಲ್ಲಿ ಕೂರಿಸಿದರೆ ಆ ಜಾಗದ ಮಾಲೀಕರಿಂದ ನಿರಾಪೇಕ್ಷಣೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಆಗ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗುವುದು ಎಂದರು.
ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ಗಂಟೆಗಳ ಕಾಲವೂ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಲ್ಲದೇ, ಯಾರಾದರೊಬ್ಬರು ಸ್ಥಳದಲ್ಲಿಯೇ ಇರಬೇಕು. ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾತ್ರಿ 10 ಗಂಟೆ ನಂತರ ಮೈಕ್ ಹಾಗೂ ರಸಮಂಜರಿ ಸೇರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು. ಎಲ್ಲ ಗಣೇಶ ಮೂರ್ತಿಗಳನ್ನು ಸೆಪ್ಟೆಂಬರ್ 9ರೊಳಗೆ ವಿಸರ್ಜನೆ ಮಾಡಬೇಕು ಎಂದರು.ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ದಿನವೇ ವಿಸರ್ಜನೆ ಮಾಡಬಹುದು. ಮೆರವಣಿಗೆ ಮಾರ್ಗ ಮತ್ತು ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಮಾಹಿತಿ ನೀಡಿ ತಿಳಿಸಿದ ದಿನದಂದೇ ಗಣಪತಿ ವಿಸರ್ಜನೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಿಪಿಐಗಳಾದ ಬಿ.ಜಿ.ಮಹೇಶ್, ಎಂ.ರವಿಕುಮಾರ್, ಪಿಎಸ್ಐಗಳಾದ ಡಿ.ರವಿಕುಮಾರ್, ಪ್ರಕಾಶ್, ಲೋಕೇಶ್, ಶಿವಶಂಕರ್ ಹಾಜರಿದ್ದರು.ದೇವಸ್ಥಾನ ಜೀರ್ಣೋದ್ಧಾರಕ್ಕೆ ಆರ್ಥಿಕ ದೇಣಿಗೆ
ಮಂಡ್ಯ: ತಾಲೂಕಿನ ಬಸರಾಳು ಹೋಬಳಿ ಮಾಯಣ್ಣನಕೊಪ್ಪಲು ಗ್ರಾಮದ ಶ್ರೀ ಮಾರಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಆರ್ಥಿಕ ದೇಣಿಗೆ ನೀಡಿದರು.ಶ್ರೀಮಾರಮ್ಮ ದೇವಿ ಭಕ್ತರಾಗಿ ಮತ್ತು ಸೇವಾಕರ್ತರಾಗಿ ಎಂ.ಎಂ.ಫೌಂಡೇಶನ್ ಉಪಾಧ್ಯಕ್ಷ ರವಿಗೌಡ ಮುದ್ದನಘಟ್ಟ ಅವರು ಆರ್ಥಿಕ ದೇಣಿಗೆ ನೀಡಿದ ವೇಳೆ ಖಜಾಂಚಿಯಾದ ಶಶಿಕುಮಾರ್, ಸಂಘಟನಾ ಕಾರ್ಯದರ್ಶಿ ಅಮಿತ್ ಗೌಡ, ಚಿಕ್ಕೇಗೌಡ ಬಿದರಕಟ್ಟೆ ಮತ್ತು ಮಾಯಣ್ಣನ ಕೊಪ್ಪಲು ಗ್ರಾಮಸ್ಥರಾದ ಪ್ರಶಿ ಕುಮಾರ್, ವೆಂಕಟೇಶ್, ಜಯರಾಮ, ಮಂಜುನಾಥ್, ಯಶೋಧರ ಉಪಸ್ಥಿತರಿದ್ದರು.