ಕಾಮಗಾರಿಗೆ ಅಡ್ಡಿಪಡಿಸುವವರು ಜನಹಿತ ಬಯಸಲ್ಲ

KannadaprabhaNewsNetwork |  
Published : Aug 17, 2026, 03:15 AM IST
ಅಪ್ಪಾಜಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಸಾರ್ವಜನಿಕರ ಹಿತಕ್ಕಾಗಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಯಾರೇ ಅಡ್ಡಿಪಡಿಸಿದರೂ ಅವರು ಜನರ ಹಿತವನ್ನು ಬಯಸುವವರಲ್ಲ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು

ಕನ್ನಡಪ್ರಭ ವಾರ್ತೆ ನಾಲತವಾಡ

ಸಾರ್ವಜನಿಕರ ಹಿತಕ್ಕಾಗಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಯಾರೇ ಅಡ್ಡಿಪಡಿಸಿದರೂ ಅವರು ಜನರ ಹಿತವನ್ನು ಬಯಸುವವರಲ್ಲ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಹಳೆಯ ಪಂಚಾಯತಿ ಆವರಣದಲ್ಲಿ ಸಿಎಂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಎಸ್.ಎಫ್.ಸಿ ಅನುದಾನದಲ್ಲಿ ವಾಣಿಜ್ಯ ಸಂಕಿರ್ಣ ಹಾಗೂ ವಿವಿಧ ರಸ್ತೆ, ಚರಂಡಿಗೆ ಸುಮಾರು ₹ 5.21 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನಲ್ಲಿ ಹೊಸ ಬೆಳವಣಿಗೆ ಆರಂಭವಾಗಿದೆ. ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಬಳಿಕ ಕೆಲವರು ಕಾಮಗಾರಿಗೆ ಅಡ್ಡಿಪಡಿಸಿ, ತಾವೇ ಅಧಿಕಾರಿಗಳಿಗೆ ಕರೆ ಮಾಡಿ ಕೆಲಸ ಯಾಕೆ ನಿಂತಿದೆ, ಕಾಮಗಾರಿ ಆರಂಭಿಸಿ ಎಂದು ಹೇಳುತ್ತಿರುವ ವಿಚಿತ್ರ ಬೆಳವಣಿಗೆ ನಡೆಯುತ್ತಿದೆ ಎಂದು ತಿಳಿಸಿದರು.

ರಾಜಕಾರಣಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ವಿರೋಧ ಪಕ್ಷ ಹೇಳಿದಂತೆ ಇವರು ಕುಣಿಯುತ್ತಾರೆ. ಇದು ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಇಂತಹ ಬೆಳವಣಿಗೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಇದಕ್ಕೆ ತೇಪೆ ಹಾಕಿಕೊಂಡು ಬರುತ್ತಿದ್ದೇನೆ. ಆದರೆ, ಇದೀಗ ಅಂತ್ಯವಾಗುವ ಕಾಲ ಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದು ಗೊತ್ತಿಲ್ಲ ಎಂದು ಹೇಳುವ ಮೂಲಕ ಸಚಿವ ಎಂ.ಬಿ.ಪಾಟೀಲ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮುಳುಗಡೆ ಪ್ರದೇಶದ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುವಂತೆ ಮನವಿ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರೆಯಲಿಲ್ಲ. ರಸ್ತೆ, ಮೂಲಸೌಕರ್ಯ ಹಾಗೂ ನೀರಾವರಿ ಕ್ಷೇತ್ರಗಳಿಗೆ ಬರಬೇಕಾದಷ್ಟು ಅನುದಾನ ಬಂದಿಲ್ಲ. ಎಲ್ಲ ಅನುದಾನವನ್ನು ತಾವೇ ಬಳಸಿಕೊಂಡರು ಎಂಬುದು ನಮ್ಮ ಆರೋಪವಲ್ಲ; ಆದರೆ ನಮಗೆ ಬರಬೇಕಾದ ಅನುದಾನ ಸಿಗಲಿಲ್ಲ ಎಂಬ ನೋವಿದೆ. ಅಭಿವೃದ್ಧಿಯಲ್ಲಿ ಬದಲಾವಣೆ ತರಲು ಜನರ ಶಕ್ತಿ ಅತ್ಯಂತ ಅಗತ್ಯ. ಜನರ ಧ್ವನಿಗೆ ನನ್ನ ಧ್ವನಿ ಸೇರಿದಾಗ ಅದರ ಶಕ್ತಿ ಹೆಚ್ಚುತ್ತದೆ. ಆದರೆ, ಜನರ ಧ್ವನಿ ಮತ್ತು ಜನಪ್ರತಿನಿಧಿಗಳ ಧ್ವನಿ ಒಂದಾಗದಿದ್ದರೆ ರಾಜಕೀಯ ಮಾಡುವವರು ಜನರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂದರು.ನಾಲತವಾಡದಲ್ಲಿ ಅಭಿವೃದ್ಧಿಗಿಂತ ದಿನನಿತ್ಯದ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡುವವರು ಇನ್ನೂ ಇದ್ದಾರೆ. ಊರಿನ ಹಿತಕ್ಕಿಂತ ರಾಜಕಾರಣವೇ ಮುಖ್ಯ ಎನ್ನುವ ಮನೋಭಾವ ಬದಲಾಗಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಲಿ, ಆದರೆ ಅಭಿವೃದ್ಧಿ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಜನರು ಜಾಗೃತರಾಗಿ ಊರಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.ಬಸವರಾಜ ಹಾದಿಮನಿ ಕಾರ್ಯಕ್ರಮ‌ ನಿರೂಪಿಸಿದರು. ಈ ವೇಳೆ ಪಟ್ಟಣ ಪಂಚಾಯತ ಅಧ್ಯಕ್ಷೆ ಲಲಿತಾ ಗೊರಬಾಳ, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯ ಪೃಥ್ವಿರಾಜ್‌ ನಾಡಗೌಡ, ಹಿರಿಯರಾದ ಶಿವಪ್ಪಗೌಡ ತಾತರೆಡ್ಡಿ, ಎ.ಜಿ.ಗಂಗನಗೌಡರ, ಅಬ್ದುಲ್ ಗನಿ ಖಾಜಿ, ಸಂಗಣ್ಣ ಪತ್ತಾರ, ಅಂಜುಮನ್ ಅಧ್ಯಕ್ಷ ಲಾಳೆಮಶಾಕ ಅವಟಿ, ಪ.ಪಂ ಸದಸ್ಯರಾದ .ಶರಣಬಸಪ್ಪ ಗಂಗನಗೌಡರ, ಬಾಬು ಕ್ಷತ್ರಿ, ಅಂಬ್ರಪ್ಪ ಸೀರಿ, ಸಂಗಣ್ಣ ಬಾರಡ್ಡಿ, ರಮೇಶ ಆಲಕೊಪ್ಪ, ಶಿವಪುತರಪ್ಪ ಗುರಿಕಾರ, ಗುತ್ತಿಗೆದಾರರಾದ ಅಶೋಕ ಸಾಲಿಮಠ, ರಾಯನಗೌಡ ತಾತರೆಡ್ಡಿ ಇನ್ನಿತರರು ಇದ್ದರು.

------ಕೋಟ್‌ಕಾಲುವೆಗಳನ್ನು ಮುಚ್ಚಿ ಮುಂದಿನ ರೈತರಿಗೆ ನೀರು ಹರಿಯದಂತೆ ಮಣ್ಣು ಹಾಕಿರುವ ಘಟನೆಗಳು ನಡೆದಿವೆ. ಇಂತಹ ಕೆಲಸಗಳನ್ನು ರಾಜಕೀಯ ವ್ಯಕ್ತಿಗಳೇ ಮಾಡುತ್ತಿದ್ದಾರೆ. ನಮ್ಮ ಪಕ್ಷದವರು ನಮ್ಮ ಬಳಿ ಬಂದರೆ ಬಿಜೆಪಿ ಪಕ್ಷದವರು ವಿಜಯಪೂರಕ್ಕೆ ಹೋಗುತ್ತಾರೆ, ಅವರು ನನ್ ಹತ್ರ ಕಾಲುವೆ ಬಂದು ಮಾಡಿದ್ದಾರೆ, ನೀರು ಬಿಡಿಸಿ ಅಂತ ಬರುವದಿಲ್ಲ. ಅವರು ಮಹಾನ್ ನಾಯಕರಿಗೆ ಹೇಳುತ್ತಾರೆ. ಆ ಮಹಾನ್ ನಾಯಕ ಅಧಿಕಾರಿಗಳಿಗೆ ಕರೆ ಮಾಡಿ ಅಧಿಕಾರಿಗಳಿಗೆ ಜೋರು ಮಾಡುತ್ತಾರೆ.ಸಿ.ಎಸ್‌.ನಾಡಗೌಡ, ಮುದ್ದೇಬಿಹಾಳ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ, ಜನಜಾನುವಾರುಗಳಿಗೆ ಮಾತ್ರ ನೀರು ಬಿಡುಗಡೆ
ಅಭಿವೃದ್ಧಿ ಫಲ ಕಡೆಯ ವ್ಯಕ್ತಿಗೂ ಸಿಗಲಿ: ಪ್ರೊ.ವಿಜಯಾ